Categories
Info

Kuppalli

ಕಾಡು ಮುತ್ತು ಕೊಡುತಲಿರುವ
ಸೊಬಗವೀಡು ನನ್ನ ಮನೆ.
– ಕುವೆಂಪು

Kuppalli Map

ಕುವೆಂಪು ಅವರ ಪೂರ್ವಜರು ಕಟ್ಟಿಸಿದ್ದ 200 ವರ್ಷಗಳ ಹಳೆಯ ತೊಟ್ಟಿಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನ್ದಾರರ ಮನೆಯ ಮಾದರಿಯಾಗಿದೆ. ಭೀಮಗಾತ್ರದ ಮುಂಡಿಗೆಗಳು ಕೆತ್ತನೆಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠಶಿಲ್ಪ ವೈಭವವನ್ನು ನೆನಪಿಸುವಂತಿವೆ.

ಕುವೆಂಪು ಅವರು ಕುಪ್ಪಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದಯವನ್ನು ವೀಕ್ಷಿಸುತ್ತಿದ್ದ ಪೂರ್ವದಿಕ್ಕಿಗೆ ತೆರೆದುಕೊಂಡಿರುವ ಮಹಡಿ, ‘ಮನೆಯ ಶಾಲೆ’ ನಡೆಯುತ್ತಿದ್ದ ಸ್ಥಳ, ‘ಅಜ್ಜಯ್ಯನ ಅಭ್ಯಂಜನದ’ ಬಚ್ಚಲುಮನೆ, ಕೊಳ, ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶರನ್ನಾಗಿಸುತ್ತವೆ.

ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, ಮೈಸೂರಿನ ಮನೆಯಲ್ಲಿ ಕುವೆಂಪು ಅವರು ದಿನನಿತ್ಯ ಬಳಸುತ್ತಿದ್ದ ವಸ್ತುಗಳು ಮತ್ತು ಅವರಿಗೆ ಬಂದ ಪ್ರಶಸ್ತಿಗಳನ್ನು ಮಹಡಿಯಲ್ಲಿ ಪ್ರದರ್ಶಿಸಲಾಗಿದೆ.  ಅವರ ಪುಸ್ತಕಗಳ ಮೊದಲ ಆವೃತ್ತಿಗಳೂ, ಕೆಲವು ಹಸ್ತಪ್ರತಿಗಳೂ ಇಲ್ಲಿವೆ.

ಕೆಳ ಅಂತಸ್ತಿನ ಹಿಂಬದಿಯ ಹಜಾರದಲ್ಲಿ ಶ್ರೀಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಸಂಗ್ರಹಿಸಿರುವ ಕುವೆಂಪು ಅವರ ಚಿಕ್ಕವಯಸ್ಸಿನ ಫೋಟೋಗಳು, ಅವರ ಮಕ್ಕಳು, ಮೊಮ್ಮಕ್ಕಳು, ಬಂಧುಗಳ ಛಾಯಾಚಿತ್ರಗಳು, ಕವಿಯ ಬದುಕಿನ ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಕುವೆಂಪು ಅವರ ಕಾಲದಲ್ಲಿ ಮಲೆನಾಡಿನ ಮನೆಗಳಲ್ಲಿ ಬಳಸುತ್ತಿದ್ದ ಗೃಹಉಪಯೋಗಿ ವಸ್ತುಗಳನ್ನು, ವ್ಯವಸಾಯದ ಸಲಕರಣೆಗಳನ್ನು ಸಹಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಕುವೆಂಪು ಅವರ ಪುಸ್ತಕ ಮಾರಾಟ ಮಳಿಗೆಯೂ ಸಹ ಇದೆ.

Kuppalli Kavi mane timings :

9:30 AM to 6:30 PM on all days

Photography and videography is strictly prohibited inside the house

Place name Distance
ಕವಿ ಮನೆ
ವಿಶ್ವಮಾನವ ಫಲಕ
ಕುಪ್ಪಳಿ ಟಾಕೀಸ್‌ (AV ರೂಮ್)
ಕವಿಶೈಲ1.3 Km
ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನ700 mts
ಕಲಾನಿಕೇತನ750 mts
ಪೂರ್ಣಚಂದ್ರ ತೇಜಸ್ವಿ ಸ್ಮಾರಕ750 mts
ಕುವೆಂಪು ಕನ್ನಡ ಅಧ್ಯಯನ ಕೇಂದ್ರ2 Km
ರಾಷ್ಟ್ರಕವಿ ಕುವೆಂಪು ಜನ್ಮ ಸ್ಥಳ ಸ್ಮಾರಕ, ಹಿರಿಕೊಡಿಗ7.5 Km
ನವಿಲುಕಲ್ಲು14 Km
ಸಿಬ್ಬಲುಗುಡ್ಡೆ16 Km

Also read : Kuppalli near tourist places

Kuppalli photos – ಕುಪ್ಪಳಿ ಚಿತ್ರಗಳು

ವಿಶ್ವಮಾನವ ಫಲಕ

ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ನಿವಾಸದ ಆವರಣದಲ್ಲಿ ವಿಶ್ವಮಾನವ ಸಂದೇಶವುಳ್ಳ 36 ಅಡಿ ಅಗಲ, 18 ಅಡಿ ಎತ್ತರದ ಫಲಕ ಇದಾಗಿದೆ. ಈ ಫಲಕವನ್ನು ಗ್ರಾನೈಟ್‌ನಲ್ಲಿ ಕೆತ್ತಲಾಗಿದೆ. ಕವಿ ಕುವೆಂಪು ಪರಿಚಯ, ಸಪ್ತಸೂತ್ರ, ಪಂಚಮಂತ್ರ, ವಿಶ್ವಮಾನವ ಗೀತೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. 9 ಅಡಿ ಎತ್ತರ 4 ಅಡಿ ಅಗಲವಿರುವ ಕುವೆಂಪು ಅವರ ಕಂಚಿನ ಉಬ್ಬು ಕಲಾಕೃತಿಯನ್ನೂ ಫಲಕ ಹೊಂದಿದೆ. ಈ ಕಲಾಕೃತಿಯನ್ನು ಮೈಸೂರಿನ ಕಲಾವಿದ ಶ್ರೀತಿನ್ ಶೆಟ್ಟಿಗಾರ್ ರಚಸಿದ್ದಾರೆ.

ಕುಪ್ಪಳಿ ಟಾಕೀಸ್‌ (AV ರೂಮ್)

ಇಲ್ಲಿ ಕುವೆಂಪು ವ್ಯಕ್ತಿಚಿತ್ರವನ್ನು ಪ್ರವಾಸಿಗರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಶಿಲಾತಪಸ್ವಿ

ಕವಿಶೈಲ

Also read: Kavi shaila photos ( Kupalli ) – ಕವಿಶೈಲ, ಕುಪ್ಪಳಿ

ಕವಿಮನೆಯ ದಕ್ಷಿಣ ದಿಕ್ಕಿಗೆ ಮನೆಗೆ ಹೊಂದಿಕೊಂಡು ಇರುವ ಬೆಟ್ಟವೇ ಕವಿಶೈಲ. ಕವಿಯ ಸ್ಫೂರ್ತಿಯ ತಾಣ. ಕುವೆಂಪು ಎಳವೆಯಿಂದಲೇ ಆಕರ್ಷಿತರಾಗಿ ಮತ್ತೆ ಮತ್ತೆ ಭೇಟಿ ನೀಡುತ್ತಿದ್ದ ಸ್ಥಳ ಕವಿಶೈಲ, ಅವರ ಅನೇಕ ಪ್ರಸಿದ್ಧ ಕವಿತೆಗಳೂ, ಕಾದಂಬರಿ ಮಹಾಕಾವ್ಯಗಳ ನಿಸರ್ಗ ವರ್ಣನೆಗಳೂ ಇಲ್ಲಿಯ ಸ್ನಿಗ್ನ, ಭವ್ಯ ಸೌಂದರ್ಯದಿಂದ ಪ್ರೇರಿತವಾದವು. ಕವಿಯೇ ಹೇಳುವಂತೆ

“ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ”

ಕುವೆಂಪುರವರ ಆಪ್ತ ಸ್ನೇಹಿತರು, ಸಾಹಿತಿಗಳು ಆಗಾಗ ಕುಪ್ಪಳಿಗೆ ಕವಿಶೈಲಕ್ಕೆ ಭೇಟಿನೀಡುತ್ತಿದ್ದುದುಂಟು. 1936 ರಲ್ಲಿ ಕವಿಶೈಲದ ಬಂಡೆಯ ಮೇಲೆ “ದೇವರರುಜು”ವಿನ ಸಮ್ಮುಖದಲ್ಲಿ, ಇವರು ತಮ್ಮ ಹೆಸರಿನ ಅಕ್ಷರಗಳನ್ನೂ ಕೆತ್ತಿ ತಮ್ಮ ಭೇಟಿಯ ಗುರುತುಗಳನ್ನು ಉಳಿಸಿಹೋಗಿದ್ದಾರೆ. ಕುವೆಂಪು, ಬಿ.ಎಂ.ಶ್ರೀ., ಟಿ.ಎಸ್.ವೆಂ., ಪೂ.ಚಂ.ತೇ ಎಂಬ ಅಕ್ಷರಗಳು ಇಲ್ಲಿವೆ.

ಬಾಲ್ಯದ ಒಡನಾಡಿಯಾಗಿ. ನಂತರ ಸ್ಮೃತಿಕೋಶದ ಭಾಗವಾಗಿ, ಕುವೆಂಪುರವರನ್ನು ಜೀವನದುದ್ದಕ್ಕೂ ಪ್ರಭಾವಿಸಿದ ಕವಿಶೈಲದಲ್ಲಿಯೇ ಅವರ ಭೌತಿಕಶರೀರಲೀನವಾಯಿತು. ಕವಿಯ ಪ್ರೀತಿಯ ಕವಿಶೈಲದ ಹಾಸುಬಂಡೆಯ ಮೇಲೆ ಕುವೆಂಪುರವರ ಅಂತಿಮ ಸಂಸ್ಕಾರ ನಡೆಯಿತು. ಆ ಜಾಗವೀಗ ಇಲ್ಲಿನ ಪ್ರಕೃತಿಯ ಚೆಲುವಿನೊಡನೆ ಸೇರಿ ಪವಿತ್ರ ಪ್ರಭಾವಲಯವೊಂದನ್ನು ಸೃಷ್ಟಿಸಿದೆ.

“ಗಿರಿಯ ಬಿತ್ತರ, ಶಿಖರದೆತ್ತರ ಹಾಗೂ ರಸಋಷಿಮತಿ ಕವಿದೃಷ್ಟಿ”ಗಳು ಕೂಡಿ ಸೃಷ್ಟಿಸಿದ ಭವ್ಯ ಸಾಹಿತ್ಯಲೋಕದ ಅನುಭೂತಿ ಕವಿಶೈಲದಲ್ಲಿ ನಿಂತಾಗ ಆದೀತು. ಕಲಾವಿದ ಕೆ.ಟಿ. ಶಿವಪ್ರಸಾದ್‌ರವರ ಕಲ್ಪನೆಯಲ್ಲಿ ಈ ಅನುಭೂತಿ ಬೆಳೆದು ಬೃಹತ್   ಶಿಲ್ಪಕಲಾಕೃತಿಯ ರೂಪದಲ್ಲಿ ನಿಂತಿದೆ. ‘ಸ್ಥಳ ನಿರ್ದೆಶಿತ ಕಲಾಕೃತಿಗೆ’ ಉತ್ತಮ ಉದಾಹರಣೆ ಈ ಶಿಲ್ಪಗಳು.

ಕವಿಮನೆಯಿಂದ ಕವಿಶೈಲಕ್ಕೆ ಕಾಲುದಾರಿಯಲ್ಲಿ ನಡೆದರೆ 5- 10 ನಿಮಿಷಬೇಕಾಗುತ್ತದೆ. ರಸ್ತೆಯ ಮೂಲಕ ವಾಹನದಲ್ಲೂ ಹೋಗಬಹುದು.

ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನ

Also read: Kuvempu Memorial Trust Ranga Mandira Kupalli photos

ಶತಮಾನೋತ್ಸವ ಭವನವನ್ನು ಕವಿಯ ಜನ್ಮಶತಾಬ್ಬಿಯ ಸ್ಮಾರಕವಾಗಿ 2004 ರಲ್ಲಿಕಟ್ಟಲಾಯಿತು. ಇದೊಂದು ಬಹೋಪಯೋಗಿ ಕಟ್ಟಡವಾಗಿದೆ. ಕಟ್ಟಡದೆದುರಿನ ಇಳಿಜಾರನ್ನು ಬಯಲು “ರಂಗಮಂದಿರವನ್ನಾಗಿ” ಮಾಡಲಾಗಿದೆ. ಹಂತಹಂತವಾದ ಸಾಲು ಹಾಸುಗಲ್ಲುಗಳ ನಡುವೆ ನಳನಳಿಸುವ ಹಸಿರುಹುಲ್ಲು ನೋಡುವವರನ್ನು ಕ್ಷಣ ಇಲ್ಲಿ ಕುಳಿತು ಹೋಗಿ ಎಂದು ಆಹ್ವಾನ ನೀಡುತ್ತದೆ. ಈ ಭವನಕ್ಕೆ ಕಲ್ಲುಕಂಬ “ಕಲ್ಲುಹಾಸುಗಳನ್ನು” ಹೆಚ್ಚಾಗಿ ಬಳಸಿಕೊಳ್ಳಲಾಗಿದೆ.

ಆವರಣದಲ್ಲಿ ಕುವೆಂಪು ಅವರ ಸೂಕ್ತಿ ಮತ್ತು ಪದ್ಯಗಳನ್ನ ಕಲ್ಲಿನಲ್ಲಿ ಕೆತ್ತಲಾಗಿದೆ. ಕಟ್ಟಡದ ಎದುರು ಸಾಲಿನಲ್ಲಿ ಸುಸಜ್ಜಿತ ಕೊಠಡಿಗಳಿವೆ. ಮೊದಲ ಕೊಠಡಿಯಲ್ಲಿಯೇ ತೇಜಸ್ವಿ ಚಿತ್ರಗ್ಯಾಲರಿ ಇದೆ. ಒಳನಡೆದರೆ ವಿಶಾಲ ತೊಟ್ಟಿ, ಎದುರಿಗೆವೇದಿಕೆ (ಹೇಮಾಂಗಣ), ನೇಪಥ್ಯ, ಧ್ವನಿ ಬೆಳಕಿನ ವ್ಯವಸ್ಥೆಗಳನ್ನೊಳಗೊಂಡು ಸಭೆ ಗೋಷ್ಠಿ ನಾಟ್ಯ ನಾಟಕಗಳಿಗಾಗಿ ಸಜ್ಜಾಗಿದೆ. ತೊಟ್ಟಿಯೇ ಪ್ರೇಕ್ಷಾಂಗಣ. ಆಚೀಚೆ ಚೌಕಿಗಳಲ್ಲಿ ಪ್ರವಾಸಿಗರ ವಸತಿಗೃಹಗಳಿವೆ. ಬಲ ಭಾಗದ ಚೌಕಿಯ ಅರ್ಧ ಭಾಗದಲ್ಲಿ ಫೋಟೋಗ್ಯಾಲರಿ ಮತ್ತು ವಾಚನಾಲಯವಿದೆ.

ಮುಂಭಾಗದ ಉಪ್ಪರಿಗೆಯಲ್ಲಿ ಅತ್ಯಾಧುನಿಕ ಹವಾನಿಯಂತ್ರಿತ ದೃಕ್  ಶ್ರವಣಕೊಠಡಿಯಿದೆ (Audio Visual Theatre), ಎಡ ಚೌಕಿಯಲ್ಲಿ ಅಡುಗೆಮನೆ, ಊಟದ ಮನೆಗಳಿವೆ. ಸ್ನಾನಗೃಹ ಶೌಚಾಲಯಗಳನ್ನೊಡಗೂಡಿ ಇದು ಪ್ರವಾಸಿಗರಿಗೆ ಸರ್ವಸೌಕರ್ಯಗಳನ್ನೂ ಒದಗಿಸುತ್ತಿದೆ. ವಸತಿಗೆ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ಯವೂ ಇದೆ. ಕುವೆಂಪು ತತ್ವಾದರ್ಶಗಳನ್ನು ಒಪ್ಪಿ ಮಂತ್ರಮಾಂಗಲ್ಯ ವಿಧಾನದಲ್ಲಿ ಮದುವೆಯಾಗಲಿಚ್ಛಿಸುವವರಿಗೆ ಹೇಮಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಲಾನಿಕೇತನ

ನಾಡಿನ ಪ್ರಸಿದ್ಧ ಛಾಯಾಗ್ರಾಹಕರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ತೆಗೆದಿರುವ ಮಲೆನಾಡಿನ ಹಕ್ಕಿಗಳ ಹಲವಾರು ಚಿತ್ರಗಳನ್ನು ಇಲ್ಲಿ ಕಲಾಪ್ರದರ್ಶನಕ್ಕೆ ಇಡಲಾಗಿದೆ. ಕುವೆಂಪು ಸಾಹಿತ್ಯಾಧಾರಿತ ಪ್ರದರ್ಶಿಸಲಾಗಿದೆ. ಅಮೂಲ್ಯ ಕಲಾಕೃತಿಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗಿದೆ.

ಪೂರ್ಣಚಂದ್ರ ತೇಜಸ್ವಿ ಸ್ಮಾರಕ (1938-2007)

Also read: K P Poornachandra Tejaswi Smaraka photos

ಪೂರ್ಣಚಂದ್ರ ತೇಜಸ್ವಿ ಕುವೆಂಪು ಅವರ ಹಿರಿಯಮಗ. ಸಾಹಿತಿಯಾಗಿ ಮಾತ್ರವಲ್ಲದೆ, ಅಂಕಣಕಾರ, ಹೋರಾಟಗಾರ, ಛಾಯಾಗ್ರಾಹಕ, ಚಿತ್ರಕಲಾವಿದ, ಸಂಗೀತಗಾರ, ತಂತ್ರಜ್ಞರಾಗಿ ನಾಡಿನಲ್ಲಿ ಚಿರಪರಿಚಿತರು. ಪರಿಸರ ಪ್ರೇಮಿಯಾದ ತೇಜಸ್ವಿ ಅವರ ಸಲಹೆ ಸಹಕಾರದೊಂದಿಗೆ ಕುಪ್ಪಳಿ-ಕವಿಸ್ಮಾರಕ ಅರ್ಥಪೂರ್ಣ ಅಭಿವೃದ್ಧಿಗೆ ತೆರೆದುಕೊಂಡಿದೆ. ಇಲ್ಲಿಯ ಸ್ಮಾರಕ ವಿನ್ಯಾಸದಲ್ಲಿ ತೇಜಸ್ವಿಯವರ ಸೃಜನಶೀಲತೆ ಕೆಲಸಮಾಡಿದೆ. ಕುವೆಂಪು ಮತ್ತು ಪಕ್ಷಿ ಪರಿಸರದ ಸಹಸ್ರಾರು ಛಾಯಾಚಿತ್ರಗಳನ್ನು ಪ್ರತಿಷ್ಠಾನಕ್ಕೆ ಒದಗಿಸಿದ್ದಾರೆ. ತೇಜಸ್ವಿಯವರು ನಿಧನರಾದಾಗ, ಕವಿಶೈಲದ ತಪ್ಪಲಿನಲ್ಲಿ, ಅಂತ್ಯಸಂಸ್ಕಾರ ಮಾಡಲಾಯಿತು. ಅದೇ ಸ್ಥಳದಲ್ಲಿ ಕಲಾವಿದ ಕೆ.ಟಿ.ಶಿವಪ್ರಸಾದರ ಕಲ್ಪನೆ ಶಿಲ್ಪಕಲಾಕೃತಿಯಾಗಿ ಅರಳಿ ನಿಂತಿದ್ದು ನೋಡುಗರಿಗೆ ಸಂತೋಷ ನೀಡುತ್ತಲೇ ಚಿಂತನೆಗೂ ಹಚ್ಚುತ್ತದೆ.

ಕುವೆಂಪು ಕನ್ನಡ ಅಧ್ಯಯನ ಕೇಂದ್ರ:

ಕನ್ನಡ ವಿಶ್ವವಿದ್ಯಾಲಯ ಹಂಪಿ, ಇವರು ಕುಪ್ಪಳಿಯಲ್ಲಿ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’ವನ್ನು ತೆರೆದಿರುತ್ತಾರೆ. ಕನ್ನಡ ಸಾಂಸ್ಕೃತಿಕ ಅಧ್ಯಯನದಲ್ಲಿ ಪಿ.ಹೆಚ್.ಡಿ. ಸಂಶೋಧನೆಯಲ್ಲಿ ತೊಡಗುವವರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ರಾಷ್ಟ್ರಕವಿ ಕುವೆಂಪು ಜನ್ಮ ಸ್ಥಳ ಸ್ಮಾರಕ, ಹಿರಿಕೊಡಿಗ

ಸುತ್ತಮುತ್ತ ಕಾಫಿಕಾನು;
ಮತ್ತೆ, ಬತ್ತದಗದ್ದೆ, ಅಡಕೆ ಬಾಳೆಯತೋಟ;
ಗುಡ್ಡ ಬೆಟ್ಟ ಕಾಡು ತೆರೆಬಿದ್ದು ಎದ್ದ ಚೆಲ್ವು ನೋಟ;
ನಾಗರಿಕತೆಗತಿದೂರದ ಅಜ್ಞಾತದ ಆ ಹಿರಿಕೊಡಿಗೆ…

Also read: Kuvempu birth place memorial Hirekodige photos

ಕುವೆಂಪು ಅವರ ತಾಯಿ ಸೀತಮ್ಮನವರ ತವರು ಮನೆ ಹಿರಿಕೊಡಿಗೆ. ಕುಪ್ಪಳಿಯಿಂದ ಕೊಪ್ಪಕ್ಕೆ ಹೋಗುವ (ತೀರ್ಥಹಳ್ಳಿ-ಕೊಪ್ಪ) ರಸ್ತೆಯಲ್ಲಿ, ಸುಮಾರು ಆರು ಕಿಲೋಮೀಟರ್  ದೂರದಲ್ಲಿದೆ ಹಿರಿಕೊಡಿಗೆ. ಕುವೆಂಪು ಭೂಸ್ಪರ್ಷ ಮಾಡಿದ್ದು ಹಿರಿಕೊಡಿಗೆಯ ಮನೆಯಲ್ಲಿ, ಆ ಮನೆಯಿದ್ದ ಜಾಗದಲ್ಲಿ ಈಗ  ‘ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ಸ್ಮಾರಕ’ ತಲೆಯೆತ್ತಿ ನಿಂತಿದೆ.

ಕುವೆಂಪು ‘ನೆನಪಿನದೋಣಿಯಲ್ಲಿ’ ಹಿರಿಕೊಡಿಗೆ

ನನ್ನ ತಾಯಿಯ ತವರುಮನೆ-ಹಿರಿಕೊಡಿಗೆ. ತವರು ‘ಮನೆ’ ಎಂದರೆ ಮನೆಯೆ! ಮಲೆನಾಡಿನ ಎಲ್ಲ ಹಳ್ಳಿಗಳಂತೆ ಅದೂ ಒಂದೆ ಮನೆಯ ಹಳ್ಳಿ; ಸಹ್ಯಾದ್ರಿಯ ಭವ್ಯ ಏಕಾಂತದಲ್ಲಿ, ತರಂಗೋಪಮಮಹಾ ನಿಮ್ಮೋನ್ನತ ಅರಣ್ಯಮಯ ಪರ್ಣಾರ್ಣವದ ಮಧ್ಯೆ! ಕಂದರ ಸೀಮೆಯಲ್ಲಿ ಗದ್ದೆಯ ಕೋಗು, ಅಡಕೆಯ ತೋಟ. “ಮಲೆನಾಡಿನ ಚಿತ್ರಗಳು” “ಕಾನೂರು ಹೆಗ್ಗಡಿತಿ” ಮೊದಲಾದ ನನ್ನ ಸಾಹಿತ್ಯಕೃತಿಗಳಲ್ಲಿ ಚಿತ್ರಿತವಾಗಿರುವ ಕಾನೂರು, ಕುಪ್ಪಳಿಗಳಂತೆಯೆ ಹಿರಿಕೊಡಿಗೆ, ಅಂದರೆ, ಒಂದೆ ವ್ಯತ್ಯಾಸ ನನಗೆ ನೆನಪಿರುವಂತೆ; ನಮ್ಮಮನೆ ಕುಪ್ಪಳಿಗೆ ಹೆಂಚು ಹೊದಿಸಿತ್ತು. ಹಿರಿಕೊಡಿಗೆಗೆ ಹೊದಿಸಿದ್ದು ಅಡಕೆಯ ಸೋಗೆ.

ನವಿಲುಕಲ್ಲು

ಸುತ್ತಮುತ್ತಲ ಕಾಡುಗಳಲ್ಲಿರುವ ನವಿಲುಗಳು ಬಂದು ಈ ಶಿಲಾ ಶಿಖರದಲ್ಲಿ ವಿಹರಿಸುವುದರಿಂದ ಈ ಹೆಸರು ಬಂದಿದೆ. ಕುವೆಂಪು ಅವರಿಗೆ ಬಹಳ ಪ್ರಿಯವಾದ ಸ್ಥಳ. ಸೂರ್ಯೋದಯ ಸೂರ್ಯಾಸ್ತಗಳೆರಡನ್ನೂ ನೋಡಲು ಸೊಗಸಾದ ತಾಣ. ಕುವೆಂಪು ಅವರು “ವಸಂತ ಪ್ರಭಾತದ ನವಿಲುಕಲ್ಲಿನ ಸೌಂದರ್ಯವನ್ನು ನೋಡಿ ಅನುಭವಿಸಿದಲ್ಲದೆ ಅದರ ಸೌಂದರ್ಯ ಮಹಿಮೆಗಳು ತಿಳಿಯುವುದಿಲ್ಲ. ನಾನಂತೂ ಅದನ್ನುನೋಡಿ ಸೋತು ಶರಣಾಗಿದ್ದೇನೆ. ಆ ಸ್ವರ್ಗೀಯ ದೃಶ್ಯದ ಮಹಾವಿಗ್ರಹ ನನ್ನ ಮನೋಮಂದಿರದಲ್ಲಿ ಚಿರವಾಗಿ ಸ್ಥಾಪಿತವಾಗಿದೆ. ಅದಕ್ಕಲ್ಲಿ ದಿನದಿನವೂ ಆರಾಧನೆ ನಡೆಯುತ್ತಿದೆ”, ಎಂದು ಉದ್ಯೋಷಿಸಿದ್ದಾರೆ.

ನವಿಲುಕಲ್ಲು ಕುಪ್ಪಳಿಯಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ. ಬೆಳಗಿನಜಾವ ನಾಲ್ಕೂವರೆ-ಐದು ಗಂಟೆಗೆಲ್ಲಾ ನವಿಲುಕಲ್ಲಿನ  ನೆತ್ತಿಯನೇರಿ ಸೂರ್ಯೋದಯದ ವರ್ಣವೈಭವವನ್ನು ಸವಿಯಬಹುದಾಗಿದೆ.

ಸಿಬ್ಬಲುಗುಡ್ಡೆ

ಕುಪ್ಪಳಿಯಿಂದ 14 ಕಿ.ಮೀ. ದೂರದಲ್ಲಿರುವ ಸಿಬ್ಬಲುಗುಡ್ಡೆ ಮತ್ತೊಂದು ನಿಸರ್ಗರಮ್ಯ ತಾಣ. ಇಲ್ಲಿರುವ ಪುರಾತನ ಗಣೇಶನ ಗುಡಿಯ ಹಿಂದೆ ಕಾಡಿನ ನಡುವೆ ತುಂಗಾ ನದಿ ಹರಿಯುತ್ತದೆ.

“ಆಚೆ ದಡದಲ್ಲಿ ತುಸು ಹಳದಿ ಬಿಳಿ ಬಣ್ಣದ ಮಳಲ ರಾಶಿ. ಅದರಂಚಿನಲ್ಲಿ ಹಚ್ಚ ಹಸಿರಿನ ವನ ಪಂಕ್ತಿ. ಗುಡಿಯ ಹಿಂಭಾಗದ ನೀರಿನಲ್ಲಿ ನಿರ್ಭೀತಿಯಿಂದ ಚಲಿಸುವ ದೊಡ್ಡ ದೊಡ್ಡ ಮೀನುಗಳನ್ನು ಯಾರೂ ಹಿಡಿಯುವುದಿಲ್ಲ. ಅವು ವಿಘ್ನೇಶನ ರಕ್ಷೆಯಲ್ಲಿ ಬೆಳೆದು ವಿಹರಿಸುತ್ತವೆ”.

ಕುವೆಂಪು ಅವರ ಪ್ರಸಿದ್ಧ ಕವಿತೆ “ದೇವರು ರುಜು ಮಾಡಿದನು” ಈ ಸ್ಥಳದ ಸ್ಫೂರ್ತಿಯಲ್ಲಿ ರಚಿತವಾದದ್ದು. ಸಿಬ್ಬಲುಗುಡ್ಡೆ ಹಾಗೂ ನವಿಲುಕಲ್ಲು ಅಕ್ಕ-ಪಕ್ಕದ ಸ್ಥಳಗಳು

More article’s:

Kuvempu books list
kuvempu quotes on life
kuvempu photos
Naadageethe lyrics

Advertisement
Advertisement Advertisement