ಹುಟ್ಟಿದ್ದು ಶಿವಮೊಗ್ಗ ನಗರದಲ್ಲಾದರೂ ಶೇ.೮೦ರಷ್ಟು ನೆನಪುಗಳು ನನ್ನ ಅಜ್ಜಿ Ajji Mane ಮನೆಯಲ್ಲಿಯೆ ಇದೆ. ಜಿಟಿ ಜಿಟಿ ಮಳೆ,ಚುಮು ಚುಮು ಚಳಿ,ಎತ್ತ ನೋಡಿದರೂ ಹಸಿರು, ಜೀರಿಟ್ಲೆ ಹುಳುವಿನ ಸದ್ದು, ಇಂಬಳದ ರಾಶಿ, ಬ್ಯಾಣ (ಸೇತುವೆ) ಕರಿ ಕಾಫಿ ಚರಗಿ, ಕಡುಬಿನ ಸರ್ಗಲ್,ಮುಸುರೆ ಚರಗಿ, ಅಲ್ಲೊಂದು ಇಲ್ಲೊಂದು ಮನೆ, ಕೆಮ್ಮಣ್ಣು ರಸ್ತೆ ಇದು ನನ್ನ ಅಜ್ಜಿ ಮನೆಯ ಕಿರು ಚಿತ್ರಣ
ಅಪ್ಪಟ ಮಲೆನಾಡು ತೀರ್ಥಹಳ್ಳಿ ತಾಲೂಕಿನ, Thirthahalli ಆರಗದ Araga ಒಂದು ಪುಟ್ಟ ಹಳ್ಳಿ “ಕುಣಿಗದ್ದೆ” Kunigadde ಯಾವ ಮಕ್ಕಳಿಗೆ ಅಜ್ಜಿ ಮನೆಯೆಂದರೆ ಖುಷಿ ಇರುವುದಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಬೇಸಿಗೆ ರಜೆ ಬಂದರೆ ಸಾಕು ಅಮ್ಮನೊಟ್ಟಿಗೆ ಸಹ್ಯಾದ್ರಿ ಸಾರಿಗೆ ದುರ್ಗಂಬ ಬಸ್ಸುಗಳನ್ನು ಹತ್ತಿದ್ದೆ ನೆನಪಾಗುತ್ತದೆ ಅಜ್ಜಿಯ ಮನೆಗೆ ಹೋಗಿ ಅಜ್ಜ ಅಜ್ಜಿಯನ್ನು ನೋಡುತ್ತಿನಿ ಎಂಬ ಖುಷಿಗಿಂತ ಅಲ್ಲಿ ಆಟ ಆಡುತ್ತೀನಿ ಎಂಬ ಸಂತೋಷವೇ ಹೆಚ್ಚಿರುತ್ತಿತ್ತು.

ಕೌಶಿ, ಶಶಾಂಕ(ಶಂಖ), ಶ್ರಾವಣಿ, ಅನು, ಶಿವಾನಿ, ಬೆಳ್ಳಿ ನಾನು ಹಡ್ಡೆ (ಕಾನು)ಬದಿಯ ಎರಡು ಕಾಯಂ ಮರಕೋತಿ ಮರಗಳಲ್ಲಿ ಆಡಿದ ನೆನಪೆ ಹೆಚ್ಚು ಬಹುಶ ನನ್ನ ಕೊನೆಯ ಉಸಿರಿರುವವರೆಗೂ ನನ್ನೊಡನೆ ಉಳಿಯುವಂತಹ ವ್ಯಕ್ತಿತ್ವಗಳ ನೆನಪುಗಳಿವು ಊರಿನ ಹಾಗೂ ಊರಿನ ಹೂರವಲಯದ ಎಲ್ಲಾ ಜಾಗಗಳನ್ನು ಪರಿಚಯಿಸಿದ ಜೀವಗಳೆ ಇವರು ಊರಿನ ಹಿರಿಮೆ ಎಂದೆ ಗುರುತಿಸಲ್ಪಟ್ಟ “ಶ್ರೀ ಕ್ಷೇತ್ರ ಅರುಣಗಿರಿಯ Arunagiri Temple ಚಟರೆ ಕಲ್ಲನ್ನು ಪರಿಚಯಿಸಿದ ಶಂಕನಿಗೆ ಧನ್ಯವಾದಗಳು. ಮಲೆನಾಡ ತಿರುಪತಿ ಎಂದೇ ಪ್ರಸಿದ್ಧಿ ಹೊಂದಿರುವ ಶ್ರೀ ಕ್ಷೇತ್ರ ಅರುಣಗಿರಿ ಇದೇ ಕುಣಿಗದ್ದೆಯಲ್ಲಿಯೇ ಇರುವುದು ಅಂದಿನ ವಿಜಯನಗರದ ಅರಸರು ಮತ್ತು ನಂತರ ಈ ಭಾಗವನ್ನು ಆಳ್ವಿಕೆ ಮಾಡಿದ ಕೆಳದಿ ಅರಸರಿಂದ ಈ ದೇವರು ಆರಾಧಿಸಲ್ಪಟ್ಟಿದ್ದು ಶಕ್ತಿ ಸ್ಥಳವೆಂದು ಹೆಸರಾಗಿದೆ ವಿಶೇಷವೆಂದರೆ, ದೇಗುಲದ ಬಲಭಾಗದ ಬಂಡೆಯಲ್ಲಿ ಪಾದಗಳ ಗುರುತಿದ್ದು, ಇದನ್ನು “ದೇವರು ದಂಡ ಊರಿದ ಸ್ಥಳ” ಎಂದು ನಂಬಿ ಪೂಜಿಸಲಾಗುತ್ತದೆ ದೇಗುಲ ತಲುಪಲು ತಿರುಪತಿಯಂತೆ ಇಲ್ಲಿಯೂ ೯೬೦ ಮೆಟ್ಟಿಲುಗಳಿವೆ,

ಎಲ್ಲಾರಿಗು ತಿಳಿದಿರುವ ಹಾಗೆ ಮಲೆನಾಡಿನಲ್ಲಿ ಮಳೆ ಹೆಚ್ಚು, ಹೊಳೆ ತುಂಬಿ ನೆರೆ ಬಂದಾಗ ಮೀನು ಅಣಬೆ ಎಲ್ಲವೂ ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತದೆ ಹೀಗೆ ಒಮ್ಮೆ ದೊಡ್ಡಗೌಡರ ಗದ್ದೆಯಲ್ಲಿ ಮೀನು ಹಿಡಿಯಲು ನಾನು, ಶಂಕ, ಅನು, ಹೋಗಿದ್ದು ಮೀನಿನ ಬದಲು ಹಾವು ಕೈಗೆ ಸಿಕ್ಕಿದ್ದೆ ನಗು ಎಲ್ಲಿಯಾದರೂ ಬೇಲಿಯ ಬದಿ ಹಸಿರು ಹಾವು ಕಂಡರೆ ಪಟ್ಟ ಹಿಡಿದು ತಲೆ ಕೂದಲಿಗೆ ಮುಟ್ಟಿಸುತ್ತಿದ್ದ ಅಣ್ಣ, ಅದೊಂದು ಮೂಡನಂಬಿಕೆಯೇ ಸರಿ. ಹಸಿರು ಹಾವಿನ ಬಾಲ ಕೂದಲಿಗೆ ಮುಟ್ಟಿಸಿದರೆ ಹಸಿರು ಹಾವಿನಷ್ಟೇ ಉದ್ದ ಕೂದಲು ಬೆಳೆಯುತ್ತದೆ ಎಂಬುದು.
ಊರಿನಲ್ಲಿದ್ದ ಎಷ್ಟೋ ಹುಡುಗರು ಊರು ಬಿಟ್ಟು ಬೆಂಗಳೂರು, ಶಿವಮೊಗ್ಗ, ಚೆನ್ನೈ ನಂತಹ ನಗರಗಳಿಗೆ ತೆರಳಿ ಜೀವನ ಕಟ್ಟಿಕೊಳ್ಳುವ ಬರದಲ್ಲಿ ಈಗಲೂ ಇದ್ದಾರೆ. ಆದರೆ ಶಶಾಂಕ ಅಣ್ಣ ಮಾತ್ರ ನನ್ನ ಹುಟ್ಟುರಿನಲ್ಲೆ ನೆಲೆ ನಿಂತಿದ್ದಾನೆ. ಅವನನ್ನು ಆಲ್ ರೌಂಡರ್ ಎಂದರೆ ತಪ್ಪಾಗಲಾರದು. ಎಲೆಕ್ಟ್ರಿಷಿಯನ್, ಅಡುಗೆ ಕ್ಯಾಟ್ರಿಂಗ್, ತೋಟಗಾರಿಕೆ ಇನ್ನು ಹತ್ತು ಹಲವಾರು ಕೆಲಸಗಳನ್ನು ಮಾಡುತ್ತಾನೆ ಇವನೊಂದು ಬಹಳ ವಿಭಿನ್ನ ವ್ಯಕ್ತಿತ್ವ ಎಂದೇ ಹೇಳಬಹುದು, ಏಕೆಂದರೆ ಈಗಿನ ಯುವಕರು ಇಂತಹ ಮನಸ್ಥಿತಿಯಲ್ಲಿ ಇರುವುದೇ ಕಮ್ಮಿ, ಅಂತಹದರಲ್ಲಿ ಇವನನ್ನು ಮೆಚ್ಚಲೇ ಬೇಕು ಅಲ್ಲವೇ?

ನೆನಪುಗಳ ಬುತ್ತಿ ಸಾಕಷ್ಟಿದೆ. ಅಜ್ಜಿ ಮನೆ ಈಗಲೂ ಇದೆ ಆದರೆ ಎಲ್ಲವೂ ಹಿಂದಿನ ರೀತಿ ಇಲ್ಲವಷ್ಟೇ. ಹೆಸರಿಗೆ ಆರಗ ಮಾಜಿ ಗೃಹ ಸಚಿವರಾದ ಜ್ಞಾನೇಂದ್ರರವರ ಊರು. ಅಲ್ಲೇ ಸ್ವಲ್ಪ ಆಚೆಗೆ ಕಿಮ್ಮನೆ ರತ್ನಾಕರ್ ರವರ ಊರು. ಎಲ್ಲಾ ಪ್ರಭಾವಶಾಲಿ ನಾಯಕರು ಬಹುಶಃ ಹೆಸರಿಗಷ್ಟೇ. ಕುಣಿಗದ್ದೆ, ದಾಸನಗದ್ದೆ ಹಾಗು ಹಣೆಗುಡ್ಡೆ ಮೂರು ಹಳ್ಳಿಯಿಂದ ಒಂದು ಅಂಗನವಾಡಿ ಬಿಟ್ಟರೆ ಬೇರೇನು ಇಲ್ಲ. ಕೇವಲ ಎಲೆಕ್ಷನ್ ಟೈಮ್ ಅಲ್ಲಿ ಬರುವ ಇವರಿಗೇನು ಗೊತ್ತು ಪಾಪ… ಇನ್ನು ಕೆಲವೇ ತಿಂಗಳು ದೊಡ್ಡ ಲಾರಿ ಅಥವಾ ಬೇರೆ ಯಾವುದಾದರೂ ದೊಡ್ಡಗಾತ್ರದ ವಾಹನ ಹಾದು ಹೋದರೆ ಸೇತುವೆಯ ಕಥೆ ಸಂಪೂರ್ಣ ಮುಕ್ತಾಯ.
ಪ್ರತಿ ಬಾರಿ ಶಾಲಾ-ಕಾಲೇಜಿಗೆ ಇಂದಿಗೂ ಕಿ.ಮೀ ಗಟ್ಟಲೆ ನೆಡೆದೆ ಹೋಗಬೇಕು ಕನಿಷ್ಠ ಪಕ್ಷ ಪ್ರಾಥಮಿಕ ಚಿಕಿತ್ಸ ಕೇಂದ್ರ ಹಾಗೂ ಕಿರಿಯ ಪ್ರಾಥಮಿಕ ಶಾಲೆಯನ್ನಾದರು ತೆರೆದಿದ್ದರೆ ಸಹಾಯವಾಗುತ್ತಿತ್ತು.
ಇತ್ತೀಚಿನ ಮಾಧ್ಯಮದ ವಿಚಾರ-ವಿನಿಮಯವನ್ನು ನೋಡಿ ನನಗೂ ಏನ್ರೀ ಮೀಡಿಯ? ಎಂದು ಕೇಳಬೇಕೆನಿಸಿದೆ…
ನನ್ನ ಅಜ್ಜಿ ಮನೆಯ ತರಹ ಎಷ್ಟೋ ಜನರ ಅಜ್ಜಿ ಮನೆಗಳು ಹೀಗೆಯೆ ಉಳಿದಿವೆ. ನಾವೇ ಆಯ್ಕೆ ಮಾಡಿದ ಸೋ ಕಾಲ್ಡ್ ಜನ ಪ್ರತಿನಿಧಿಗಳು ಜನರನ್ನು ಮರೆತು ಕೇವಲ ಪ್ರತಿನಿಧಿಗಳಗಿದ್ದಾರೆ ಅಷ್ಟೇ.
ಇನ್ನು ಕೆಲವೇ ವರ್ಷಗಳಲ್ಲಿ ಅಜ್ಜಿ ಮನೆಯ ನೆನಪುಗಳು ಬರೀ ನೆನಪಾಗಿಯೇ ಉಳಿದುಬಿಡುತ್ತದೆ ಎoಬುದೇ ಕಹಿ ಸಿಂಗತಿ.
ಲೇಖನ: ಅಭಿನ್ಯ ಅನಿತ, ಶಿವಮೊಗ್ಗ
Facebook: https://www.facebook.com/hoimalnad
Instagram: https://www.instagram.com/hoimalnad/
