ಹಸಿರಿನ ಮಧ್ಯೆ ನೆನೆದು ಸ್ವರ್ಗದಂತೆ ಕಾಣಿಸುತ್ತ, ಹಸಿರ ಸೌಂದರ್ಯದ ನಡುವೆ ಕಾಡುತ್ತ ಕೈಬೀಸಿ ಕರೆಯುವ ನಮ್ಮ ಕರುನಾಡಿನ ಸೊಬಗಿನ ಕೋಟೆ ಕವಲೇ ದುರ್ಗ. ಇಲ್ಲಿನ ಹಸಿರನ್ನು ಕೋಟೆಯ ಐತಿಹಾಸಿಕ ಚೆಂದವನ್ನು ಮಳೆಗಾಲದಲ್ಲಿ ನೋಡುವುದು ಸುಂದರ ಅನುಭೂತಿ. ಕೆಳದಿ ಸಂಸ್ಥಾನದ ಕೊನೆಯ ರಾಜಧಾನಿಯಾಗಿದ್ದ ಈ ಕೋಟೆಯನ್ನು ಮಲೆನಾಡಿನ ಮಳೆಕಾಡಿನಲ್ಲಿ ಮಳೆಗೆ ತೊಯ್ದು ತೊಪ್ಪೆಯಾಗಿ ನೋಡುವ ಖುಷಿಯೇ ಬೇರೆ.

ಏಳು ಸುತ್ತಿನ ಕೋಟೆ ಭುವನಗಿರಿಯ ದುರ್ಗ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ Thirthahalli ಸುಮಾರು 18 ಕಿ ಮಿ ದೂರದಲ್ಲಿರುವ ಈ ಕೋಟೆ ನಿರ್ಮಾಣವಾದದ್ದು9 ನೇ ಶತಮಾನದಲ್ಲಿ. ಮೂರು ಸುತ್ತಿನ ಕೋಟೆ ಅಂತಲೇ ಇದು ಪ್ರಖ್ಯಾತಿ. ಜೊತೆಗೆ ಭುವನಗಿರಿ ದುರ್ಗ ಎನ್ನುವ ಸುಂದರ ಹೆಸರೂ ಈ ಕೋಟೆಗಿದೆ. ಈ ಅದ್ಬುತ ಕೋಟೆಯನ್ನು ಕಟ್ಟಿಸಿದವನು ಕೆಳದಿಯ ರಾಜ ವೆಂಕಟಪ್ಪ ನಾಯಕ. ಕಾಡು, ಗಿರಿ ಗಳ ಸೌಂದರ್ಯ ಮನಸೂರೆಗೊಳ್ಳುವಂತಹ ಸ್ಥಳದಲ್ಲಿದೆ ಈ ಕೋಟೆ. ಕವಲೇದುರ್ಗ Kavaledurga Fort ಕೆಳದಿ ರಾಜರಿಗೆ ಎರಡನೇ ರಾಜಧಾನಿಯಾಗಿತ್ತಂತೆ, ಕೆಳದಿಯ ರಾಣಿ ಚೆನ್ನಮ್ಮಳಿಗೆ ನಾಲ್ಕು ವರ್ಷ ಖಾಸಗೀ ರಾಜಧಾನಿಯಾಗಿಯೂ ಈ ಕೋಟೆ ಐತಿಹಾಸಿಕ ಮಹತ್ವ ಪಡೆದಿತ್ತು.

ಮಳೆ ಮತ್ತು ಮಂಜು ಮುತ್ತಿಕೊಂಡ ಸಹಜ ಸೌಂದರ್ಯ
ಒಂದು ಕಾಲದಲ್ಲಿ ವೈಭವದಿಂದ ಮೆರೆಯುತ್ತಿದ್ದ ಈ ಕೋಟೆ ಇಂದು ಪಾಳುಬಿದ್ದಿದ್ದರೂ ಇಲ್ಲಿನ ಐತಿಹಾಸಿಕ ಈಜುಕೊಳ, ಬೆಟ್ಟದ ಮೇಲಿರುವ ಶ್ರೀಕಾಂತೇಶ್ವರ ದೇವಸ್ಥಾನ , ನಂದಿ ಮಂಟಪ, ಸ್ನಾನದ ತೊಟ್ಟಿ, ಕಾಲು ಕೊಠಡಿಗಳು, ಅರಮನೆ, ಶಸ್ತ್ರಾಸ್ತ್ರ ಗೋದಾಮುಗಳನ್ನು ಇಲ್ಲಿನ ಹಸಿರಿನ ಹಿನ್ನೆಲೆಯಲ್ಲಿ ಕಣ್ತುಂಬಿಸಿಕೊಳ್ಳಬಹುದು. ಜೊತೆಗೆ ಮಳೆ ಮತ್ತು ಮಂಜು ಮುತ್ತಿಕೊಂಡರಂತೂ ಈ ಕೋಟೆಗೆ ಇನ್ನಷ್ಟು ಸೌಂದರ್ಯ ಲಭಿಸುತ್ತದೆ.
ಇಲ್ಲಿ ನಿಂತರೆ ಸುಮಾರು 1,541 ಮೀಟರ್ ಎತ್ತರದಿಂದ ಕಾಣಿಸುವ ಮಲೆನಾಡಿನ ನಿಸರ್ಗ ಸೌಂದರ್ಯ ಮೈಮನಸ್ಸನ್ನು ಸೂರೆಗೊಳ್ಳುತ್ತದೆ. ಆಗಸ್ಟ್-ಏಪ್ರಿಲ್ ತಿಂಗಳು ಇಲ್ಲಿನ ಕೋಟೆಯನ್ನು ಹತ್ತಿ ಪ್ರವಾಸದ ಆನಂದ ಸವಿಯಬಹುದು. ಇತಿಹಾಸ ಮತ್ತು ಪರಿಸರ ಆಸಕ್ತರಿಗಂತೂ ಈ ಕೋಟೆ ಮರೆಯಲಾರದ ಅನುಭವ ಕೊಡುತ್ತದೆ. ಕೋಟೆ ಹತ್ತಿ ಇಳಿಯಲು ಎಷ್ಟೆಂದರೂ 3 ಗಂಟೆ ಬೇಕೇ ಬೇಕು. ನಡೆಯಲು ಕಷ್ಟವಾಗುವವರಿಗೆ ಈ ಕೋಟೆಯ ಕಲ್ಲು ತುಂಬಿದ ಏರುತಗ್ಗು ದಾರಿ ಹೇಳಿಮಾಡಿಸಿದ್ದಲ್ಲ.
ಕೋಟೆಗೆ ಹೋಗುವುದು ಹೇಗೆ? – How to reach Kavaledurga fort
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಕವಲೇದುರ್ಗ ಕೋಟೆ ಇದೆ. ತಾಲೂಕು ಸ್ಥಳ ತೀರ್ಥಹಳ್ಳಿಯಿಂದ ಸುಮಾರು 20 ಕಿ ಮಿ ದೂರದಲ್ಲಿದೆ. ಸ್ವಂತ ವಾಹನಿದ್ದರೆ ಸೂಕ್ತ. ಇಲ್ಲದಿದ್ದರೆ ತೀರ್ಥಹಳ್ಳಿ ಮಾಸ್ತಿಕಟ್ಟೆ, ಕುಂದಾಪುರ ಬಸ್ ನಲ್ಲಿ ಹೋಗಿ ಹತ್ತಿರದ ಬಸ್ಸ್ಟಾಪ್ ನಲ್ಲಿ ಇಳಿದುಕೊಂಡು 3-4 ಕಿ.ಮೀ ಆಟೋ ಮಾಡಿಕೊಂಡು ಹೋಗಬಹುದು. ಕುಂದಾಪುರ, ಕೊಲ್ಲೂರು ಕಡೆಯಿಂದ 72 ಕಿ.ಮೀ ದೂರದಲ್ಲಿದೆ ಕವಲೇದುರ್ಗ.
Kavaledurga Fort Photos:














