
ಮತ್ತೆ ಶುರುವಾಗಿದೆ ಮುಂಗಾರು…
ಕುಡಿಯೊಡೆಯುತಿವೆ ಹಸುರೆಲೆ ಚಿಗುರು…
ಮಲೆನಾಡಿನ ಮಳೆಗಾಲದ ಚಂದವ…
ಬಣ್ಣಿಸಲು ಅಸಾಧ್ಯವೇ ಸರಿ….
ಒಂದೆಡೆ ಇಂಬಳ ಜೀರುಂಡೆಗಳ ಕಿರುಕುಳವಾದರೆ…
ಇನ್ನೊಂದೆಡೆ ಮನೆಯಲಿ ಹಲಸಿನ ದೋಸೆ ಮುಳುಕಗಳ ಪರಿಮಳ…
ಜಡಿ ಮಳೆಗೆ ವಿದ್ಯುತ್ ಇಲ್ಲವಾದರೆ
ಸೀಮೆ ಎಣ್ಣೆ ದೀಪಗಳ ನರ್ತನ ಒಂದೆಡೆಯಾದರೆ…
ಮಳೆಯ ತಂಡಿಗೆ ಮುದುಡಿ ಕಂಬಳಿ ಹೊದ್ದು ಕೂರುವ ಹಿರಿಯರು ಇನ್ನೊಂದೆಡೆ…
ಇದುವೇ ಮಳೆಯ ಸ್ವರ್ಗ ಮಲೆನಾಡಿನ ಸಾಮಾನ್ಯ ಚಿತ್ರಣ…
ಮುಂಗಾರಿನ ಆಗಮನಕ್ಕೆ ದರಗೆಲ್ಲ ಕೊಳೆತಿತ್ತು…ಯಾವುದೋ ಒಂದು ಮನಸಿಗೆ ಗ್ರಹಿಸಲಾಗದ ಪರಿಮಳ ಅಡವಿಯಲ್ಲಾ ಮುತ್ತಿತ್ತು…
ಕೊಳೆತ ದರಗಿನ ಅಡಿಯಲ್ಲಿ ಮಿಜುಗುಡುತಿತ್ತು ಇಂಬಳಗಳ ಗುಂಪು…
ರಕ್ತವೋ ಎಲೆಗಳ ಪತ್ರವೋ ಹೊಟ್ಟೆಗೆ ಸಿಕ್ಕರೆ ಸಾಕೆಂಬಂತೆ ಹತೋರೆಯುತ್ತಿದ್ದವು…
ಬಿಸಿ ರಕ್ತದ ಕಾಲುಗಳು ದಾಟಿದರೆ ಸಾಕು ಎಂದು ನಿರೀಕ್ಷಿಸುತ್ತಿದ್ದವು….

ಕಳೆದವು ತಲೆಮಾರುಗಳು ಹಲವು….
ಮಾಸದೇ ಉಳಿದ ನೆನಪುಗಳು….
ಗತಕಾಲದ ಗುರುತುಗಳು….
ಅನುಮಾನವಿಲ್ಲ ಇದು ಭೂಮಿಯ ಮೇಲಿನ ಸ್ವರ್ಗವೇ ಸರಿ…….

ಆಲೆಮನೆ ಬೆಲ್ಲ….
ಕಬ್ಬಿನ್ ಹಾಲು….
ಆಲೆ ಕೋಣ…
ಕೊಪ್ಪುರ್ಗೆ ಬಿಸಿ…
ಕಬ್ಬಿನ್ ಹೆಂಡ…
ತೊ.. ತೋ.. ತೋ…
ಆಲೆಮನೆ ಮಜಾನೆ ಬೇರೆ ಕಂಡ್ರೀ….

ಪಾತ್ರವನ್ನು ಸೃಷ್ಟಿಸಿದವರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಪಾತ್ರಧಾರಿಯೇ ಬಂದಿದ್ದಾನೆ…. (ಹುಲಿಯಾ)

ಉಸಿರಾಡುತ್ತಿರುವೆವು ನೀ ಬೆಳೆದ ಹಸಿರ ಪ್ರಸಾದದಿ….
ಋಣಿಯಾಗಿರುವೆವು ಮುಂದಿನೇಳೂ ಜನ್ಮಗಳಲಿ……
ನಮಿಸುವೆವು ನಿನಗೆ ನಮ್ಮೆಲ್ಲಾ ಹರಕೆಯಲಿ….
ಸದಾ ಸುಖವಾಗಿರು ಈ ಭೂಸ್ವರ್ಗದಲಿ…
ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು
ನೆಮ್ಮದಿಯ ಹುಡುಕಾಟದಲ್ಲಿ ತೆರೆದ ಸ್ವರ್ಗದ ಬಾಗಿಲು…. ಅದೇ ತುಂಗೆಯ ಮಡಿಲು….

ವರ್ಷಗಳೆಷ್ಟೋ ಸವೆದವು ಮೂಳೆಯಂತೆಯೆ…. ಹಾಲುಣಿಸಿದೆ ಎಷ್ಟೋ ಮಕ್ಕಳಿಗೆ ತಾಯಿಯಂತೆಯೆ….
ಗೋಮಯ ಗೊಬ್ಬರದಿಂದ ಬೆಳೆಸಿದೆ ಎಷ್ಟೋ ಸಸಿಗಳ ತಂದೆಯಂತೆಯೆ……
ಗೋಮಾತೆಯ ಪಟ್ಟಕ್ಕೇರಿದೆ ದೇವರಂತೆಯೆ…..

ಪೈಪುಗಳ ಮೂಲ ಹುಡುಕುತಾ ಹೊರಟರೆ ಒಂದು ತುದಿಯಲ್ಲಿ ಸಿಗುವ ಅಂತ್ಯವೇ ಈ ಮೋಟ್ರು ಮನೆ…..
ಕೆಲಸದ ಸಮಯದಲ್ಲಿ ಗುಡುಗುಡುವ ಈ ಗೂಡು ಜಮೀನಿಗೆ ಕಾವಲಿಗನಿದ್ದಂತೆ…..

ಭೂಮಿಯ ಮೇಲೆ ಸ್ವರ್ಗವನ್ನು ಕಂಡವರು ನಾವು… ಹಸಿರ ಸಿರಿಯ ನಡುವೆ ಉಸಿರ ಆರಂಭಿಸಿ….ಹಸಿರನ್ನೇ ಉಸಿರನ್ನಾಗಿಸಿ ಬೆಳೆದು ಬಂದರೂ ಸುತ್ತಲಿನ ಸುಂದರತೆಯನ್ನು ಗುರುತಿಸದೆ ಸ್ವರ್ಗದ ಅಮಲನ್ನು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಈ ಚಿತ್ರಣ ನಮ್ಮ ಸುಪ್ತ ಮನಸ್ಸನ್ನು ಎಚ್ಚರಿಸುವಂತಿದೆ…..

ಚೆಲುವ ಮಡಿಲು ನನ್ನದು..
ಬಯಕೆಯ ಒಡಲು ನಿನ್ನದು..
ಕಣ್ಣ ಮುಚ್ಚದೆ ಸವಿ ಓ ಮನುಜ…..
ನನ್ನೀ ಸೊಭಗಾ…

ಒದ್ದೆಯಾದ ಕಂಬಳಿಗೊಂದು ಬಚ್ಚಲ ಒಲೆಯ ಆಸರೆ…
ಮುಗಿಲೊಡಲ ಜಾರಿದ ಹನಿಗಳೆಲ್ಲಾ
ಭೂತಾಯಿಯ ಕೈಸೆರೆ…
ಭೋರ್ಗರೆವ ಗಾಳಿಗೆ ತಲೆಬಾಗಿವೆ ಹಸಿರ ರಾಶಿ…
ಹೊಸ ನೀರ ಕಂಡು ಹಳ್ಳ ಕೊಳ್ಳಗಳು
ನಗುತಿವೆ ಖುಷಿಯ ಸೂಸಿ…
ತೋಟದೊಡಲ ಹಾಂಬಿಯಲಿ ನೀರುಕ್ಕಿ
ಸೃಷ್ಟಿಸಿದೆ ಹಾಲ್ನೊರೆ…
ಅದರಲ್ಲೇ ಸಾಗಿ ಬಂದಿದೆ ಕೊಟ್ಟಿಗೆ ಬಾಗಿಲಿಗೆ ಅಪ್ಪನ ಸೊಪ್ಪಿನೊರೆ…
ಬಿಸಿರಕ್ತವ ಹೀರಿ ಹಣ್ಣಾದ ಇಂಬಳಗಳಿಗೆ
ಒಲೆ ಕೆಂಡದ ಸ್ನಾನ…
ತದ ನಂತರ ಒಲೆ ದಂಡೆಯಲ್ಲಿ ಬಿಸಿ ಕಾಫಿಯ ಪಾನ…
ಮಲೆನಾಡು ಸ್ವರ್ಗ ನಿಜ ಹೊರಗಿನ ಜನಕೆ…
ಮಳೆ ನಿಲ್ಲಲಿ ಸಾಕು ಎಂಬುದು ಇಲ್ಲಿಯವರ ಪ್ರತಿದಿನದ ಬಯಕೆ…

ಹುಸಿ ಮುನಿಸ ಸರಿಸಿ ಕಿರು ನಗೆಯ ಬೀರಿರಲು
ಹಸಿರುಡುಗೆ ಉಟ್ಟು ನೀರ್ಸೆರಗ ಹೊದ್ದಿರಲು
ಎದೆಯೊಳಗೊಂದು ಸಿಹಿ ಹೃದಯಾಘಾತ ಆಕೆಯ ನೋಡುತಿರಲು….