ಜಿಟಿ-ಜಿಟಿ ಮಳೆಯನ್ನೂ ಲೆಕ್ಕಿಸದೆ ಎಮ್ಮೆ-ಕೋಣಗಳು ಓಡಾಡಿದ ಆ ಕೆಸರಿನ ಹಾದಿಯಲ್ಲೇ ಸಾಗಿ ಹಲಸಿನ ಮರವನ್ನೇರಿ ಹಲಸಿನ ಹಣ್ಣಿಗೆ ಲಗ್ಗೆ ಇಡುವುದು ಮಲೆನಾಡಿಗರಿಗೆ ಹೊಸತೇನಲ್ಲ ಬಿಡಿ! ಯಾವ ಯಾವ ಜಾಗದಲ್ಲಿ ಯಾವ ಯಾವ ಜಾತಿಯ “ಹಲಸು” ಇದೆ ಎಂದು ಬಲ್ಲ ಜ್ಞಾನಿಗಳಿಗೆ ಈ ನಮ್ ಮಲೆನಾಡಲ್ಲಿ ಬರವಿಲ್ಲ.
ಬೆಳುವ ಹಲಸನ್ನು ನಿರಾಯುಧರಾಗಿ ಬಗೆದು ಗುಳುಂ ಎಂದು ನುಂಗುವುದು ಎಷ್ಟು ಸುಲಭವೋ ಅಷ್ಟೇ ಕಷ್ಟ ಚಂದ್ರಭಕ್ಕೆ ಹಲಸಿನ ಮೇಣದಿಂದ ತಪ್ಪಿಸಿಕೊಳ್ಳೋದು. ಏನೇ ಆದರೂ ಹಲಸಿನ ಹಣ್ಣನ್ನು ಬಗೆದು ತಿಂದುತೇಗುವುದರಲ್ಲಿರೋ ಗಮ್ಮತ್ತು ವಿಶಿಷ್ಟ-ವಿಭಿನ್ನ! ಜತೆಗೆ ಇಡೀ ಹಣ್ಣನ್ನ ಮನೆಗೆ ತಂದು ಜಟಾಪಟಿ ಮಾಡಿ ಅದನ್ನ ಇಭ್ಭಾಗ ಮಾಡಿ ಮನೆಯವರೆಲ್ಲಾ ಸುತ್ತಲು ಕುಳಿತು ಕಬಳಿಸುವ ಪರಿಯೂ ಬಲು ಮೋಜಿನ ವಿಷಯ.
ತಿಂದು-ತೇಗಿ ಉಳಿದ ಹಲಸಿನ ಸೊಳೆ/ ತೊಳೆಗಳು ಕಡಬು,ದೋಸೆ, ಪಾಯಸ, ಮುಳುಕ ಹೀಗೆ ವಿಧವಿಧದ ಖಾದ್ಯಗಳಾಗಿ ಮಾರ್ಪಾಡುಗೊಂಡು ಹೊರಗೆ ಸುರಿವ ಪುನರ್ವಸು ಮಳೆಯೊಂದಿಗೆ ನಮಗೆ ಜೊತೆಯಾಗುವುದೂ ಉಂಟು. ಸಾಮಾನ್ಯವಾಗಿ ಮಲೆನಾಡಿನಲ್ಲಿ ಹಲಸಿನ ಹಣ್ಣಿನ ಕಡಬು, ದೋಸೆ, ಪಾಯಸಗಳು ಅನಾಯಾಸವಾಗಿ ಹೆಚ್ಚಿನ ಖರ್ಚಿಲ್ಲದೆ ನಡೆದುಹೋಗುತ್ತವೆ. ಆದರೆ ಈ “ಮುಳುಕ” ದ ಕತೆ ಹೀಗಲ್ಲ ನೋಡಿ!
ಹಲಸಿನ ಹಣ್ಣಿನ ಮುಳುಕ ಮಾಡೋದು ಹೇಗೆ ?
ಅಸಲಿಗೆ ಈ ಹಲಸಿನ ಹಣ್ಣಿನ ದೋಸೆ, ಕಡಬು ಮತ್ತು ಮುಳುಕದ ಹಿಟ್ಟು ಎಲ್ಲವೂ ಒಂದೇ ಹದ. ಆದರೆ ದೋಸೆಯು ಕಾವಲಿಯ ಮೇಲೆ ತುಪ್ಪ ಸವರಿಕೊಂಡು ತಿರುವಿಹಾಕಲ್ಪಟ್ಟರೆ, ಕಡಬು ಬಾಳೆಎಲೆಯ/ಸಾಗುವಾನಿ ಎಲೆಯ ಕೊಟ್ಟೆಯಲ್ಲಿ ಸರಗೋಲಿನ ಹಬೆಯಲ್ಲಿ ಬೆಂದುಬಿಡುತ್ತದೆ.
ಮುಳುಕ ಮಾತ್ರ ಶುದ್ಧ ಒಳ್ಳೆಣ್ಣೆಯಲ್ಲಿಯೋ ಅಥವಾ ತುಪ್ಪದಲ್ಲಿಯೋ ಮುಳುಗೇಳುತ್ತದೆ. ಹೀಗಾಗಿ “ಹಲಸಿನ ಹಣ್ಣಿನ ಮುಳುಕ” ಎಂದರೆ ಸ್ವಲ್ಪ ರುಚಿವತ್ತಾದ ವಿಶೇಷ ಖಾದ್ಯವಾಗಿದೆ. ಬಿಡಿಸಿಟ್ಟ ಹಲಸಿನ ಸೊಳೆಗಳು, ನೀರಿನಲ್ಲಿ ನೆನೆಸಿಟ್ಟ ಅಕ್ಕಿ, ಏಲಕ್ಕಿ ಹಾಗೂ ಒಂದೆರಡು ಕಾಳುಮೆಣಸು ಮುಳುಕ ಮಾಡಲು ಬೇಕಾಗಿರುವ ಸಾಮಾಗ್ರಿಗಳಾಗಿವೆ. ಹಲಸಿನ ಸೊಳೆಗಳನ್ನು ಬಿಡಿಸಿ ಒಂದೆರಡು ತುಂಡುಗಳಾಗಿ ಸೀಳಿದ ನಂತರ ಕಡೆಕಲ್ಲಿನಲ್ಲಿ (ತಿರುವೋ ಕಲ್ಲಿನಲ್ಲಿ) ಹಾಕಿ ಅದಕ್ಕೆ ಈಗಾಗಲೇ ಎರಡು ತಾಸು ನೆನೆಸಿಟ್ಟ ಅಕ್ಕಿ ಸೇರಿಸಲಾಗತ್ತೆ. ಜೊತೆಗೆ ಒಂದೆರಡು ಏಲಕ್ಕಿ, ಕಾಳುಮೆಣಸಿನೊಂದಿಗೆ ಚಿಟಿಗೆ ಉಪ್ಪು ಸೇರಿಸಿ ನೀರು ಬೆರೆಸದೆ ರುಬ್ಬಲಾಗತ್ತೆ.
ಏಲಕ್ಕಿಯೊಂದಿಗೆ ಹಲಸಿನ ಹಣ್ಣು ಬೆರೆತು ಮನೆಯ ತುಂಬೆಲ್ಲಾ ಹಬ್ಬದ ಪರಿಮಳ ತುಂಬಿಹೋಗತ್ತೆ. ಇತ್ತ ಒಲೆಯ ಮೇಲೆ ಬಾಣಲೆಯಲ್ಲಿ ಒಳ್ಳೆಣ್ಣೆ ಕಾದಿರುವ ಹದ ನೋಡಿ ಕೈಗೆ ನೀರು ಮುಟ್ಟಿಸಿಕೊಳ್ತ್ತಾ ರುಬ್ಬಿದ ಹಿಟ್ಟನ್ನು ಪುಟ್ಟ ನಿಂಬೆಹಣ್ಣು ಅಥವಾ ಸುಲಿದ ಅಡಿಕೆ ಗಾತ್ರದ ಉಂಡೆಗಳನ್ನಾಗಿ ಎಣ್ಣೆಯಲ್ಲಿ ಮುಳುಗಿಸಲಾಗತ್ತೆ. ಬೇಯುವ ತನಕ ಎಣ್ಣೆಯಲ್ಲಿಯೇ ಈ ಉಂಡೆಗಳು ಮುಳುಗೇಳುವುದರಿಂದಲೋ ಏನೋ ಇವುಗಳನ್ನು “ಮುಳುಕ” ಎನ್ನಲಾಗತ್ತೆ.
ಕೊನೆಯಲ್ಲಿ ಕಡುಕಂದು ಬಣ್ಣದ ಉಂಡೆಗಳಾಗಿ ಹೊರಬೀಳುವ ಈ ತಿನಿಸನ್ನು ಒಮ್ಮೆ ಸವಿದವರು ಎಂದಿಗೂ ರುಚಿ ಮರೆಯಲಾರರು.
ಅಡುಗೆಯ ಮನೆಯ ಒಲೆಯ ಮೂಲೆಯಲ್ಲಿ ಎಣ್ಣೆಯಲ್ಲಿ ಮುಳುಕು ಹಾಕಿ ಮಿಂದೇಳುತ್ತಿರುವ ಮುಳುಕಗಳ ಘಮ ಮನೆಯ ಸುತ್ತಾಮುತ್ತಾವೆಲ್ಲಾ ಹರಡಿ ಮನೆಯಂಗಳವನ್ನೆಲ್ಲಾ ತುಂಬುತ್ತದೆ. ಅತೀವ ಮಳೆಯ ಹೊಡೆತವಿದ್ದು ಮನೆಯೆಲ್ಲಾ ತೇವದಿಂದ ಕೂಡಿದ್ದರೂ ಸಹ ಮುಳುಕ ಮಾಡುವಾಗ ಅಡುಗೆಮನೆಯು ಬೆಚ್ಚನೆಯ ಅನುಭವ ಕೊಡುತ್ತದೆ.
ಲೇಖಕರು : ಸ್ವಾತಿ ರಾಜೇಶ್