Categories
Quotes

KP Poornachandra Tejaswi Life Quotes

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.
(The freedom to live as we wish is always a terrible fight since we will not get it easily)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.
(None of us have any rights to insist others to lead a life, particularly in a way that we don’t live.)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 2004, ಹೊಸ ವಿಚಾರಗಳು, ಪುಟ 513

Advertisement
Hoi Malnad Advertisement

ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.
(If you want your words to be meaningful, you should be as quiet as much you speak)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 2003, ಹೊಸ ವಿಚಾರಗಳು, ಪುಟ 472

ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ
(Our behavior would make our words meaningful)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 480

Also Read: K P Poornachandra Tejaswi Images

ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ.
(More than passing the time I worry about the time that is passing.)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ

ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯ ಈ ಪ್ರಪಂಚದಲ್ಲಿ?
(Is there any Religion, which has to be saved by killing others?)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 590

ತಲೆ ತಪ್ಪಿಸಿಕೊಂಡು ಎಲ್ಲೋ ಬದುಕಿ ಮುದಿಯಾಗಿ ಕಾರಣವಿಲ್ಲದೆ ಸಾಯುವುದಕ್ಕಿಂತ ಸಕಾರಣವಾದ ಸಾವನ್ನು ಎದುರಿಸುವುದು ಎಷ್ಟೋ ವಾಸಿ.
(Facing a reasonably meaningful death is much better than dying eventually after growing old in anonymity.)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್

ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷೀ ಎಂದರೆ ಹೋಮೋಸೆಪಿಯನ್
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ

ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ.
(If you aren’t happy enthusiastic and curious about where you are, then it’s of no use going on tour in search of those.)
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್

ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ

ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಮುಖ್ಯ ವಿಷಯ ಬಿಟ್ಟು ಅಡ್ಡ ದಾರಿ ತುಳಿಯಬೇಡಿ, ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತಿವಿ, ಕಾಲ ಸರೀತಾ ಇದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ

ಎಷ್ಟನ್ನು ನಾವು ಕಣ್ಣಿಗೆ ಕಂಡರೂ ನೋಡದೆ ಬಿಟ್ಟಿದ್ದೇವೋ ಏನೋ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೊ

ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕುಂಬಾರನ ಸೂಕ್ಷ್ಮ ಕಸುಬುದಾರಿಕೆ, ಮೇದರವನ ಬುಟ್ಟಿ ಹೆಣೆಯುವ ಕಲೆಗಾರಿಕೆ ಮಾನ್ಯತೆ ಕಳೆದುಕೊಂಡು ಓದುಬರಹ, ಜ್ಞಾಪಕ ಶಕ್ತಿ, ಇಂಗ್ಲಿಷ್ ಮಾತುಗಳು ಪರೀಕ್ಷೆಗಳಲ್ಲಿ ಮೆರಿಟ್ಗಳಾದವು. ಮೇದರವನೂ, ಕುಂಬಾರನೂ, ಅಗಸನೂ ಮೆರಿಟ್ ಇಲ್ಲದವನಾಗಿ ಕೆಲಸ ಮತ್ತು ಅನ್ನ ಕಳೆದು ಕೊಂಡ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1990, ಹೊಸ ವಿಚಾರಗಳು, ಪುಟ 164

ನಾನು ಕಣ್ಣಿಗೆ ಕಂಡದ್ದನ್ನೆಲ್ಲಾ ಆಸಕ್ತಿಯಿಂದ ಕುತೂಹಲದಿಂದ ನೋಡುತ್ತಾ ತಿಳಿಯುತ್ತಾ ಹೋಗುತ್ತೇನೆ. ಜ್ಞಾನಾರ್ಜನೆಯ ಪ್ರಚಂಡ ಸಂತೋಷ ಇರುವುದು ಇಲ್ಲೇ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

ನನಗೆ ಕಷ್ಟಪಟ್ಟು ಓದಿದ್ದು ಗೊತ್ತೇ ಇಲ್ಲ. ಬರೇ ಕ್ಲಾಸಿನಲ್ಲಿ ಶ್ರದ್ಧೆಯಿಂದ ಪಾಠ ಕೇಳಿ ಮಾತ್ರವೇ ಈವರೆಗೂ ನಾನು ತರಗತಿಗಳಲ್ಲಿ ಪಾಸಾಗಿರುವವನು. ಆದರೆ ನಮಗೆ ಅಂಥ ವಿದ್ಯಾಗುರುಗಳು ದೊರತಿದ್ದರೆಂಬುದು ಇಲ್ಲಿ ಬಹುಮುಖ್ಯ. ಅವರಲ್ಲಿ ಪೂಜ್ಯ ಜಿ ಎಸ್ ಶಿವರುದ್ರಪ್ಪನವರು ಒಬ್ಬರೆಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 695

ಕತೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಹಾಕುತ್ತದೆಯಷ್ಟೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಿರಗೂರಿನ ಗಯ್ಯಾಳಿಗಳು

ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿವಿಮರ್ಶೆಯ ವಿಮರ್ಶೆ, ಪುಟ ೧೩

ಭಾವನೆಗಳು, ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ ಅಸ್ಥಿತ್ವವೇ ಇರುವುದಿಲ್ಲ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 839

ಹೊಸಹೊಸ ಜೀವನಾನುಭವಗಳು ನಮ್ಮ ಅನುಭವ ವಿಶ್ವಕ್ಕೆ ಸೇರ್ಪಡೆಯಾದಾಗ ಕೇವಲ ಅದರ ಮೊತ್ತ ಹೆಚ್ಚಾಗುವುದಷ್ಟೇ ಅಲ್ಲ, ನಮ್ಮ ಅನುಭವ ವಿಶ್ವದಲ್ಲಿ ಗುಣಾತ್ಮಕ ಬದಲಾವಣೆಯನ್ನೂ ಉಂಟುಮಾಡುತ್ತದೆ, ಎಂದರೆ ಇಡೀ ಅನುಭವ ವಿಶ್ವದ ವ್ಯವಸ್ಥೆಯೇ ಹೊಸದಾಗಿ ಸಂಯೋಜನೆಗೊಳ್ಳುತ್ತದೆ, ಅಥವಾ ನಿರಂತರವಾಗಿ ಸಂಯೋಜನೆಗೊಳ್ಳುತ್ತಲೇ ಇರುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ

ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರಬುದ್ಧಿ, ಅಂಧಶ್ರದ್ಧೆ ಮೀರಲು ಸಾಧ್ಯವಾಗಿಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು? ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಸ್ವರೂಪ

ಈ ಶತಮಾನ ನಾಗರಿಕತೆಯ ಹೆಸರಿನಲ್ಲಿ, ನ್ಯಾಯದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ, ಸಿದ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರಿಸುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಹಾ ಪಲಾಯನ (ಮುನ್ನುಡಿ)

‘ಮನುಷ್ಯ ಚರಿತ್ರೆಯಿಂದ ಪಾಠ ಕಲಿಯುವುದಿಲ್ಲ’ ಎನ್ನುವುದೇ ನಮಗೆ ಚರಿತ್ರೆ ಕಲಿಸುವ ಪಾಠ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು

ನಮ್ಮ ಕಲ್ಪನೆಯ ‘ನಮಗೂ’ ನಿಜವಾದ ನಮಗೂ ವ್ಯತ್ಯಾಸ ಇರುವುದರಿಂದಲೇ ನಮ್ಮ ಫೋಟೊಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್

ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ ವಿಶ್ವ

ತಾನು ನಿಯಂತ್ರಿಸಲಾಗದ ಅಮೂರ್ತದ ಅಗಾಧತೆಯ ಎದುರು ಮನುಷ್ಯನ ಕ್ರಿಯೆಗಳು ಅರ್ಥಹೀನವಾಗಿಯೂ ಹಾಸ್ಯಾಸ್ಪದವಾಗಿಯೂ ಕಾಣುತ್ತವೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ನನ್ನ ಪಾಡಿಗೆ ನನ್ನನ್ನು ಬಿಟ್ಟರೆ ತಿಂಗಳುಗಟ್ಟಲೆ ಅಥವಾ ಜೀವನ ಪರ್ಯಂತ ಬೇಕಾದರೂ ಇದ್ದೇನು. ಆದರೆ ನೀನು ಇಲ್ಲೆ ಇರಬೇಕು. ಎಲ್ಲಿಯೂ ಹೋಗುವಂತೆಯೇ ಇಲ್ಲ ಎಂದು ಯಾರಾದರೂ ಅಂದರೆ ಅಲ್ಲಿಗೆ ಮುಗಿಯಿತು ನನ್ನ ಕಥೆ. ಅನಂತರ ಅಲ್ಲಿ ಕಳೆಯುವ ಪ್ರತಿಯೊಂದು ಕ್ಷಣವೂ ನನಗೆ ಭೀಕರವಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್, ಪುಟ ೧೦೮

ಬದುಕಿರುವವನಿಗೆ ಸಾವಿನಂತೆ, ಯಾವುದಕ್ಕೂ ನನಗೆ ಸದಾ ಹೊರ ದಾರಿಯೊಂದು ತೆರದಿರಲೇಬೇಕು. ಆಗಲೇ ನನಗೆ ಜೀವನ ಸುಂದರ, ಕುತೂಹಲಕರ. ಅದು ಮುಚ್ಚಿಕೊಂಡಿತೋ ತಕ್ಷಣ ಅದು ಸಾಕ್ಷಾತ್ ಸ್ವರ್ಗವಾದರೂ ನರಕವಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಲೆಮಾರಿಯ ಅಂಡಮಾನ್, ಪುಟ ೧೦೮

ಮತ್ತೊಬ್ಬರು ಹೇಳಿದ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದಿದ್ದರೆ ನಾವು ನಮ್ಮ ಜೀವನದ ಎಷ್ಟೋ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದಿತ್ತು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೦೮

ಎನನ್ನಾದರೂ ಅರ್ಥ ಮಾಡಿಕೊಳ್ಳಬೇಕೆಂದಿದ್ದರೆ ಅದನ್ನು ಕಲಿಯಲು ಪ್ರಯತ್ನಿಸುವುದು ಅದನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ಮಾರ್ಗ ಎಂದು ನನಗೆನ್ನಿಸುತ್ತದೆ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೧೧

Also Read: K P Poornachandra Tejaswi quotes about life – ಕೆ ಪಿ ಪೂರ್ಣಚಂದ್ರ ತೇಜಸ್ವಿ ಜೀವನದ ನುಡಿಗಳು

ಯಾರು ಏನೇ ಮಾಡಿದರೂ ಒಬ್ಬ ಪ್ರತಿಭಾವಂತ ಬರಹಗಾರನನ್ನು ಇಳಿಸಲಾಗಲೀ, ಅವನು ಪ್ರತಿಭಾವಂತನಲ್ಲದಿದ್ದರೆ ಮಠ ಕಟ್ಟಿ ಊರಗೋಲು ಕೊಟ್ಟು ಉಳಿಸಲಾಗಲೀ ಸಾಧ್ಯವೇ ಇಲ್ಲ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ ೧೨೫

ಬಹುಶಃ ಮನುಷ್ಯ ಸುಖ, ಸಮೃದ್ಧಿ, ಸಂತೋಷಗಳ ನಡುವಿಗಿಂತ ಮೌನ, ಏಕಾಂತ, ಸವಾಲುಗಳ ನಡುವೆ ಮಹತ್ತಾದುದನ್ನು ಸಾಧಿಸುತ್ತಾನೇನೋ! ಅದರ ಮಹಾನ್ಮೌನದ ಏಕಾಂತದಲ್ಲಿ ಕುಳಿತು ಇಡೀ ಇಹದ ಅಂತಿಮ ಉದ್ದೇಶವನ್ನು ಚಿಂತಿಸಿ ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸತ್ಯಾನ್ವೇಷಣೆ ಮಾಡಿದ್ದಾನೇನೋ!
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ದೇಶ ವಿದೇಶ-೧

ನನಗೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ ಅರಿವು, ಅಭಿಮಾನ ಮೂಡುವುದು ಮಹಾ ಯುದ್ಧದ ಮತ್ತು ಅನಂತರ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ, ಮತ್ತು ಓದಿದಾಗ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಅಲ್ಲಿಂದ ಹೇಗಾದರೂ ಮಾಡಿ ಗಡಿ ದಾಟಿ ಸ್ವಾತಂತ್ರ್ಯದ ಉಸಿರಾಡಲು ತವಕಿಸಿದವರ ಕತೆಗಳನ್ನು ಓದುವಾಗ, ಬಡತನ, ಅನಕ್ಷರತೆ ಇತ್ಯಾದಿ ಪರಿಹಾರ ಸಾಧ್ಯವಾದ ಸಮಸ್ಯೆಗಳಿಗೆ ನಾವು ನಮ್ಮ ಸ್ವಾತಂತ್ರ್ಯವನ್ನೇ ಒತ್ತೆಯಿಡಲು ತಯ್ಯಾರಾಗುವುದು ಅಕ್ಷಮ್ಯ ಎಂದೆನಿಸುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ಮಹಾಯುದ್ಧ-೨

ಯಾವುದನ್ನೂ ಉಚಿತವೆಂದು ಬಿಟ್ಟಿ ಮಾಡಬೇಡಿ. ಯಾರಿಂದಲೂ ಬಿಟ್ಟಿಯಾಗಿ ಯಾವುದನ್ನೂ ನಿರೀಕ್ಷಿಸಲೂ ಬೇಡಿ. ಇದರಿಂದ ಇಡೀ ನಮ್ಮ ಉದ್ದೇಶ ಅರ್ಥಹೀನವಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345

ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ನಾವು ಹಾಗೆ ನಟಿಸಲು ತೊಡಗಬಾರದು
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಮೊದಲೆಲ್ಲಾ ನಮ್ಮ ವರ್ತನೆಯನ್ನು ಹುಚ್ಚಾಟವೆಂದು ಪರಿಗಣಿಸಿ ನಗುತ್ತಿದ್ದವರು ಕೊನೆಗೆ ನಮ್ಮ ಬದುಕೇ ಹೀಗೆ ಎಂದು ತಿಳಿದನಂತರ ನಗುವುದನ್ನು ನಿಲ್ಲಿಸಿದರು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಂಚುಳ್ಳಿ, ಪುಟ ೧೧೯

ಸಾಕ್ಷಾಧಾರ ಇಲ್ಲದ ಯಾವುದನ್ನೂ ನಾನು ನಂಬೋದಿಲ್ಲ. ದೇವರನ್ನು ನಂಬೋದು ಬಿಡೋದು ಎಲ್ಲಾ ನಿರಪಯುಕ್ತ ಚರ್ಚೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕರ್ವಾಲೋ

ನಾನು ನಿನ್ನಂತಯೇ ಅನ್ನ ತಿನ್ನುವ ಸಾಮಾನ್ಯ ಸರಳ ಮನುಷ್ಯ. ನನ್ನ ದೈನಂದಿನ ಅನುಭವಗಳನ್ನು ಇತರರಿಗೆ ತಿಳಿಸುವ ಕಲೆಗಾರಿಕೆಯನ್ನು ಬರೆದು, ತಿದ್ದಿ, ಕಲಿತವನು. ಉತ್ತಮ ಬರಹಗಾರನಾಗಲೂ ಪ್ರತಿಭೆ ಸ್ವೂರ್ತಿ ಎಲ್ಲ ಬೇಕಾದರೂ ಎಲ್ಲಕ್ಕಿಂತ ಮುಖ್ಯವಾಗಿ ಶ್ರದ್ಧೆ, ಕಷ್ಟಪಟ್ಟು ಕೆಲಸ ಮಾಡುವ ತಾಳ್ಮೆ ಅತ್ಯಂತ ಮುಖ್ಯ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348

ನನ್ನ ಕಥೆ ಕಾದಂಬರಿಗಳು ವಾಸ್ತವವಾಗಿ ನನ್ನ ಅನುಭವಗಳನ್ನೇನೂ ನಿಮಗೆ ಕೊಡುವುದಿಲ್ಲ. ನಿಮ್ಮೊಳಗೆ ಇದ್ದ ಆ ಅನುಭವಗಳನ್ನು ಉದ್ದೀಪನ ಮಾಡಿ ನಿಮಗೆ ತೋರಿಸಿಕೊಡುತ್ತವಷ್ಟೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348

ಜೀವನವನ್ನು ನನ್ನಂತೆ ನೋಡುವ ದೃಷ್ಟಿ, ಶಕ್ತಿ, ನಿಮ್ಮಲ್ಲೇ ಇರುತ್ತದೆ. ಇಲ್ಲದಿದ್ದರೆ ನಿನಗೇಕೆ ಎಲ್ಲೋ ಕುಳಿತುಕೊಂಡು ಬರೆದ ನನ್ನ ಬರವಣಿಗೆ ಖುಷಿ ಕೊಡಬೇಕು? ನಿನ್ನಲ್ಲಿರುವ ಅನುಭವಗಳಿಗೆ ನೀನು ಸಹ ನನ್ನಂತೆಯೇ ಮಾತು ಕೊಡುವವನಾಗಬೇಕು. ಅದಕ್ಕೆ ಮಾತ್ರ ತುಂಬಾ ತಾಳ್ಮೆ ಶ್ರದ್ಧೆ ಬೇಕಾಗುತ್ತದೆ. ನಿನ್ನ ಅನುಭವಗಳನ್ನು ನಿನ್ನ ಮಾತಿನಲ್ಲೇ ನೂರಾರು ಸಾರಿ ಬರೆದು, ತಿದ್ದಿ, ಇತರರಿಗೆ ತೋರಿಸಿ ಬರೆಯುವುದನ್ನು ಕಲಿಯಬೇಕಾಗುತ್ತದೆ. ನಾನು ಬರೆದುದನ್ನು ಓದಿದಾಗ ಆದಷ್ಟೆ ಸಂತೋಷ ಆಗ ನಿನಗಾಗುತ್ತದೆ. ಅದನ್ನ ಓದಿದ ಇತರರಿಗೂ ಸಂತೋಷವಾದಾಗ ನಿನಗೆ ಇನ್ನೂ ಖುಷಿಯಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 348

ಓದುಗರು ಯಾರಾದರೂ ಕೃತಿಗಳನ್ನು ಓದಿ ಚೆನ್ನಾಗಿದೆ ಎಂದು ಸಂತೋಷಪಟ್ಟರೆ ನನಗೆ ಧನ್ಯನಾದೆ ಎನ್ನಿಸುತ್ತದೆ. ಅಂಥ ಹಲವು ಕೃತಿಗಳನ್ನು ಬರೆಯಲು ಪ್ರೋತ್ಸಾಹ ದೊರೆಯುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345

ಅವಾರ್ಡುಗಳಿಗೆ ಪ್ರಶಸ್ತಿಗಳಿಗೆ ನನ್ನ ದೃಷ್ಟಿಯಲ್ಲಿ ಅಂಥ ಏನೂ ಮಹತ್ವವಿಲ್ಲ. ಕ್ಯೂನಲ್ಲಿ ನಿಂತುಕೊಂಡ ಕತ್ತೆಗಳಿಗೂ ಒಂದಲ್ಲ ಒಂದು ದಿನ ಅವಾರ್ಡು ಕೊಡಲೇಬೇಕಾಗುತ್ತದೆ. ಒಬ್ಬ ಸೃಜನಶೀಲ ಲೇಖಕನ ಅಂತಿಮ ಪರೀಕ್ಷೆ ಓದುಗನ ಮನದಲ್ಲಿಯೇ ಹೊರತು ಬೇರೆಲ್ಲೂ ಅಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 345

ನಾನು ಎಲ್ಲರಿಗಿಂತ ಭಿನ್ನವಾಗಿ ಬರೆಯಬೇಕೆಂದು ಎಂದೂ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದವನಲ್ಲ. ಈ ಭಿನ್ನತೆಯ ಮೂಲ ಇರುವುದು ನನ್ನ ಬರೆವಣಿಗೆ ಕ್ರಮದಲ್ಲಾಗಲೀ ಭಾಷೆಯ ಬಳಕೆಯಲ್ಲಾಗಲೀ ಅಲ್ಲ. ಅದು ಮೂಲತಃ ನನ್ನ ವ್ಯಕ್ತಿತ್ವದಲ್ಲೂ ನನ್ನ ಬದುಕಿನ ಬಗೆಯಲ್ಲೂ ಇತ್ತು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 295

ಕೆಲವೆಲ್ಲಾ ಮನುಷ್ಯನಿಗೆ ಅನುಭವಿಸಿದ ಮೇಲೇ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೋಗುವುದೇ ಇಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಾಕಕ್ರಾಂತಿ, ಪುಟ 1

ಈ ಶತಮಾನದ ಅದ್ಭುತಗಳಾಗಿ ಎವರೆಸ್ಟ್ ಹತ್ತಿದ್ದು, ಉಪಗ್ರಹ ಹಾರಿಸಿದ್ದು, ಚಂದ್ರನಲ್ಲಿ ಇಳಿದಿದ್ದು, ಕಂಪ್ಯೂಟರ್ ಚಿಪ್ ಗಳನ್ನು ತಯಾರಿಸಿದ್ದು ಕಣ್ಣು ಕೋರೈಸುವ ಸಾಧನೆಗಳಾದ್ದರಿಂದ ಜನಪ್ರಿಯತೆಯನ್ನೂ ಪ್ರಚಾರವನ್ನೂ ಪಡೆದುಕೊಳ್ಳುತ್ತವೆ. ಆದರೆ ಈ ಶತಮಾನದ ಸಾಧನೆ ಎಂದು ಯಾವುದಾದರು ಒಂದೇ ಒಂದು ಸಾಧನೆಯನ್ನು ಹೇಳು ಎಂದು ನನ್ನನ್ನು ಯಾರಾದರೂ ಕೇಳಿದರೆ ನಾನು ನಿಸ್ಸಂಶಯವಾಗಿ ‘ವಿಶ್ವ ಆರೋಗ್ಯ ಸಂಸ್ಥೆ ಸಿಡುಬನ್ನು ಈ ಭೂಮಂಡಲದಿಂದಲೇ ಉಚ್ಚಾಟಿಸಿದ್ದು’ ಎಂದು ನಾನು ಹೇಳುತ್ತೇನೆ. ಇದು ಇದ್ದಕ್ಕಿದಂತೆ ಧಢೀರೆಂದು ಯಾರೋ ಒಬ್ಬ ಸಹಸ್ರಾರು ಜನರ ಸಮ್ಮುಖದಲ್ಲಿ ಸಾಧಿಸಿ ಚಪ್ಪಾಳೆ ಗಿಟ್ಟಿಸಿದಂಥ ಸಾಧನೆಯಲ್ಲ ! ನೂರಾರು ದೇಶಗಳ ಸಹಸ್ರಾರು ಕಾರ್ಯಕರ್ತರು ಮಳೆ ಬಿಸಿಲೆನ್ನದೇ, ಕಗ್ಗಾಡು ಮರಳುಗಾಡೆನ್ನದೇ ಅನೇಕ ವರ್ಷಗಳ ಪರ್ಯಂತ ಕೆಲಸ ಮಾಡಿ ಸಾಧಿಸಿದ ಯಶಸ್ಸು. ನಾಗರೀಕತೆಗಳ ಹುಟ್ಟಿನಿಂದಲೂ ಸತತವಾಗಿ ಸಾವಿರಾರು ಜನಗಳನ್ನು ಬಲಿ ತೆಗೆದುಕೊಂಡ, ವಿರೂಪಗೊಳಿಸಿದ, ಕುರುಡರನ್ನಾಗಿ ಮಾಡಿದ ಈ ಮಹಾಮಾರಿಯಿಂದ ಮನುಕುಲವನ್ನೇ ವಿಮುಕ್ತಿಗೊಳಿಸಿದ್ದು ಈ ಶತಮಾನದ ಮನುಷ್ಯ ಸದ್ದುಗದ್ದಲವಿಲ್ಲದೆ ಸಾಧಿಸಿದ ಆತ್ಯಮೋಘ ಸಾಧನೆ. ಈ ಸಾಧನೆಯಿಂದ ಹಿಂದುಳಿದ ರಾಷ್ಟ್ರಗಳ ಕೋಟ್ಯಂತರ ದೀನರ ಬಡವರ ಆಹುತಿ ತಪ್ಪಿತು. ಇದಕ್ಕಿಂತ ಹೆಚ್ಚಾಗಿ ಇಡೀ ಮನುಕುಲಕ್ಕೆ ಇದರಿಂದ ಒದಗಿದ ಆತ್ಮವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಧಿಡೀರ್ ಜನಪ್ರಿಯತೆ ನನಗೆಂದೂ ದೊರೆತೇ ಇಲ್ಲ. ನಾನು ನಿರೀಕ್ಷಿಸುವುದೂ ಇಲ್ಲ. ಓದುಗರು ನನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನನಗೆ ಅನ್ನಿಸಿದ್ದು ಇವತ್ತಲ್ಲದಿದ್ದರೆ ನಾಳೆ ನಿಧಾನವಾಗಿಯಾದರೂ ಅವರಿಗೂ ಅನ್ನಿಸುತ್ತದೆ ಎನ್ನುವ ನಂಬಿಕೆಯಿಂದಲೇ ನಾನು ಬರೆಯುವುದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು,ಪುಟ 299

ನಾನು ಬರೆಯುವ ಪದಗಳ ಅರ್ಥವೇ ‘ಮನುಷ್ಯರೆಲ್ಲ ಒಂದೇ, ನನ್ನಂತೆಯೇ’ ಎನ್ನುವ ಆಳವಾದ ಶ್ರದ್ಧೆಯ ಮೇಲೆ ನಿಂತಿದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ 228

ರೈಲು ಕಿಟಕಿಯಿಂದ ಹೊರಗೆ ತಲೆ ಹಾಕಿ ನೋಡಿದಾಗ ಸಾಧಾರಣವಾಗಿ ಕಾಣುವ ದೃಶ್ಯಾವಳಿಗಳು ಗಾಡಿಯೊಳಗೆ ಕಿಟಕಿಯಿಂದ ಕೊಂಚ ದೂರ ಕುಳಿತು ನೋಡಿದಾಗ ಪರದೆಯ ಮೇಲೆ ಮೂಡುವ ಸಿನೆಮಾ ಮಾದರಿಯಲ್ಲಿ ಕುತೂಹಲಕರವಾಗಿರುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು, ಪುಟ 203

ನನ್ನ ವ್ಯಕ್ತಿತ್ವ ಇಷ್ಟೊಂದು ರಂಜಕವಾಗಿ colourful ಆಗಿರೋದೆ ನನ್ನ ಆತ್ಮಾಭಿಮಾನದ ಮುಖಾಂತರ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪತ್ರದಲ್ಲಿ, ಪುಟ 137

ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೇ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 343

ನನ್ನ ಕೃತಿಗಳಿಂದ ಕೆಲವಾದರೂ ಜನರಿಗೆ ಪರಿಸರದ ಬಗ್ಗೆ ಆಸಕ್ತಿ ಬಂದರೆ ನನ್ನ ಬರವಣಿಗೆ ಸಾರ್ಥಕವೆಂದೇ ತಿಳಿದಿದ್ದೇನೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 396

ಎಷ್ಟೋ ಸಾರಿ ದುಷ್ಟರು ಕಷ್ಟಕ್ಕೆ ಸಿಕ್ಕಿಕೊಂಡಾಗ, ಕಳ್ಳರು ಸಿಕ್ಕಿಬಿದ್ದಾಗ ಕೊನೆಗೂ ಸತ್ಯಕ್ಕೆ ನ್ಯಾಯಕ್ಕೆ ಜಯವಾಗುತ್ತದೆ ಎಂದು ಜನ ಅಂದುಕೊಳ್ಳುತ್ತಾರೆ. ಭೂಮಿಯಲ್ಲಿ ರಾಕ್ಷಸರ ಹಾವಳಿ ಅತಿಯಾದಾಗ ದೇವರು ಬಂದು ಅವರಿಗೆಲ್ಲಾ ತಕ್ಕ ಶಿಕ್ಷೆ ವಿಧಿಸುತ್ತಾನೆ ಎಂದು ದೈವ ಭಕ್ತರು ದೃಢವಾಗಿ ನಂಬಿದ್ದಾರೆ. ಆದರೆ ವಾಸ್ತವವನ್ನು ಗಮನಿಸಿದಾಗ ಸಾಧಾರಣವಾಗಿ ರಾಕ್ಷಸರಿಗೇನೋ ಶಿಕ್ಷೆಯಾಗಿರುತ್ತದೆ. ಆದರೆ ಅದು ದೇವರಿಂದಾಗಲಿ ನ್ಯಾಯ ಧರ್ಮಗಳಿಂದಾಗಲಿ ಆಗಿರದೆ ಅದಕ್ಕೆ ಇನ್ನೊಬ್ಬ ದೊಡ್ಡ ರಾಕ್ಷಸನೆ ಕಾರಣ ಎಂದು ಜನಗಳಿಗೆ ಬಹುಬೇಗ ಗೊತ್ತಾಗುತ್ತದೆ. ದುಷ್ಟರನ್ನು ದೊಡ್ಡ ದುಷ್ಟರೂ, ಖೇಡಿಗಳನ್ನು ದೊಡ್ಡ ಖೇಡಿಗಳೂ, ಪಾತಕಿಗಳನ್ನು ಇನ್ನೂ ದೊಡ್ಡ ಪಾತಕಿಗಳೂ, ಬಲಿಹಾಕುವುದನ್ನು ಧರ್ಮಪ್ರತಿಷ್ಠಾಪನೆ ಎಂದು ತಾತ್ಕಾಲಿಕವಾಗಿ ಜನ ತಿಳಿಯುತ್ತಾರೆ. ಆಮೇಲೆ ಅವರಿಗೆ ಭ್ರಮ ನಿರಸನವಾಗುತ್ತದೆ. ಆಗ ಕಳೆದು ಹೋದ ಕಾಲವೇ ಎಷ್ಟೋ ವಾಸಿ ಇತ್ತೆಂದು ಯೋಚಿಸುತ್ತಾರೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ ೫೯

ಮಾತನಾಡಬೇಕಾದಾಗಲೂ ಮಾತನಾಡದೆ ಸುಮ್ಮನಿದ್ದರೆ ಬಹಳ ಕೆಟ್ಟದ್ದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿ ಪತ್ರಗಳು, ಪುಟ 555

ನೀವು ನಿಮ್ಮ ಬಗ್ಗೆ ಒಂದು ದೃಢ ನಿರ್ಧಾರ ತಗೊಳ್ಳಬೇಕು. ಕಾಲವೇ ತೀರ್ಮಾನಿಸುತ್ತದೆಂದು ಕೂರಬೇಡಿರಿ. ಕಾಲ ಎಲ್ಲವನ್ನೂ ಇನ್ನಷ್ಟು ಜಟಿಲ ಮಾಡುತ್ತದೆ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1990 (ತೇಜಸ್ವಿ ಪತ್ರಗಳು, ಪುಟ 257)

ಹೊರಗಿನ ಪ್ರಕೃತಿ ತೀರ ಕ್ರೂರವಾದಾಗ ನಮ್ಮೊಳಗಿನ ಪ್ರಕೃತಿ ನಮ್ಮ ಸಂವೇದನಾ ಶಕ್ತಿಯನ್ನೆ ಮೊಂಡು ಮಾಡಿಬಿಡುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಾಡು ಮತ್ತು ಕ್ರೌರ್ಯ

ವರ್ಗ ತಾರತಮ್ಯದಲ್ಲಿ ಒಬ್ಬ ಕಷ್ಟಪಟ್ಟು ದುಡಿದು ಶ್ರೀಮಂತನಾಗಿ ಮೇಲ್ವರ್ಗಕ್ಕೇ ಏರಬಹುದು, ಇಲ್ಲವೇ ದುಂದು ಮಾಡಿ ನಷ್ಟ ಕಟ್ಟಿಕೊಂಡು ಕೆಳವರ್ಗಕ್ಕೆ ಇಳಿಯಲು ಬಹುದು.ಆದರೆ ವರ್ಣ ತಾರತಮ್ಯದಲ್ಲಿ ಒಬ್ಬ ಹುಟ್ಟಿದಂದಿನಿಂದ ಸಾಯುವವರೆಗೆ ಯಾವ ವರ್ಣದಲ್ಲಿ ಹುಟ್ಟಿದನೋ ಅಲ್ಲೇ ಇರಬೇಕಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಜ್ಞಾನ ಅಜ್ಞಾನ ಎರಡೂ ಅವಳಿಗಳು. ಆದರೆ ಅನ್ವೇಷಣೆ, ತಿಳಿಯುತ್ತಾ ಹೋಗುವುದು ಸಹ ಮನಸ್ಸಿನ ಅನುಷಂಗಿಕ ಗುಣ. ಮನಸ್ಸು ಅರಿವಿನ ಹಾದಿಯಲ್ಲಿ ಮುಂದೊತ್ತುತ್ತಲೇಹೋಗುತ್ತದೆ. ಪರಿಪೂರ್ಣತೆಯ ಮಾರ್ಗ ಯಾವುದೆಂದು ತಿಳಿಯುವವರೆಗೂ ತಿಳಿಯುವ ಖುಷಿ, ಆನಂದ, ರೋಮಾಂಚನಕ್ಕಾದರು ಮನಸ್ಸು ಮುಂದುವರಿಯುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜೀವನ ಸಂಗ್ರಾಮ, ಮುನ್ನುಡಿ

ನಾವೆಲ್ಲ ಕೈಗೆ ವಾಚ್ ಕಟ್ಟಿಕೊಳ್ಳುತ್ತೇವೆ. ದಿನವೂ ಏಳುತ್ತಿದ್ದಂತೆಯೇ ಗಂಟೆ ನೋಡಿಕೊಳ್ಳುತ್ತಾ ನಮ್ಮ ದಿನವನ್ನು ಆರಂಭಿಸುತ್ತೇವೆ. ಹಣ ಸಂಪಾದಿಸಬಹುದು, ಆಸ್ತಿ ಸಂಪಾದಿಸಬಹುದು ಆದರೆ ಕಳೆದುಹೋಗುತ್ತಾ ಇರುವ ಕಾಲವನ್ನು ಮಾತ್ರ ಎಂದೆಂದೂ ಸಂಪಾದಿಸಲು ಸಾಧ್ಯವಿಲ್ಲ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇಶ ವಿದೇಶ 1 , ಪುಟ 42

ವಾಸ್ತವವನ್ನೇ ಆದರ್ಶಿಕರಿಸುವವನು ಅವಕಾಶವಾದಿಯಾಗುತ್ತಾನೆ. ವಾಸ್ತವವನ್ನೇ ತಿರಸ್ಕರಿಸಿ ಆದರ್ಶಗಳಿಗೆ ಜೋತುಬೀಳುವವನು ಉಗ್ರಗಾಮಿಯಾಗುತ್ತಾನೆ. ಆದರ್ಶಗಳನ್ನು ವಾಸ್ತವಿಕರಿಸುವ ಮಾರ್ಗದಲ್ಲಿ ವಾಸ್ತವದ ಅಪರಿಪೂರ್ಣತೆಯನ್ನು ಸಹಿಸಲೂ ಕಲಿಯುವವನು ಲಿಬರಲ್ ಆಗುತ್ತಾನೆ
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು 1988, ಪುಟ 217

ನಮ್ಮ ವರ್ತನೆ,‌ ನಮ್ಮ ವ್ಯಕ್ತಿತ್ವ, ನಮ್ಮ ಪದಗಳಿಗೆ ಅರ್ಥ ಕೊಡುತ್ತೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸವಿಚಾರಗಳು, ಪುಟ ೭೯೬

ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು?
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಿಸ್ಸಿಂಗ್ ಲಿಂಕ್, ಪುಟ 90

ಒಬ್ಬ ಕಲಾವಿದನ ಮೇಲೆ, ಇನ್ನೊಬ್ಬ ದೊಡ್ಡ ಕಲಾವಿದನ ಪ್ರಭಾವಗಳು ಆಗೋದನ್ನ ಗುರುತಿಸುವುದು ಬಹಳ ಕಷ್ಟ. ಯಾಕೆ ಅಂತಾ ಹೇಳಿದರೆ, ಅವರು ನಿಮ್ಮ ಜೀವನದ ಮೇಲೆ ಪ್ರಭಾವ ಬೀರಿರುತ್ತಾರೆ ಹೊರತು, ನಿಮ್ಮ ಕೃತಿಗಳ ಮೇಲಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 560

‌ಸೂರ್ಯ ಮುಳುಗದ ಸಾಮ್ರಾಜ್ಯಗಳೂ, ಚಕ್ರಾಧಿಪತ್ಯಗಳೂ ನಿಧಾನವಾಗಿ ಚರಿತ್ರೆಯ ಪುಟಗಳಲ್ಲಿ ಆಸ್ತಂಗತವಾಗುತ್ತವೆ? ‌ತಲೆ ಎತ್ತಿದ್ದು ಮತ್ತೇ ಧರೆಗುರುಳಲೇ ಬೇಕೆಂಬ ಜಡ ನಿಯಮವೋ? ಅಥವಾ ಕಾರ್ಯಕಾರಣ ಸಂಬಂಧಗಳ ಕ್ರಿಯಾವಳಿಯೋ?
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜುಗಾರಿ ಕ್ರಾಸ್, ಪುಟ 9

ನನ್ನ ತಲೆಯಲ್ಲಿ ಆಗುತ್ತಿರುವ ಪ್ರಳಯವನ್ನು ನಾನಿನ್ನೂ ಶೇಕಡ ಹತ್ತರಷ್ಟು ಕೂಡ ಹೇಳಿಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 736

ಕೆಲವರು ಕಾಲ ಕಳೆಯೋದು ಹ್ಯಾಗೆ ಅಂತ ಲಾಟರಿ ಹೊಡೀತಾ ಇರ್ತಾರೆ. ನನಗೆ ಎಲ್ಲವೂ ಒಂದು ದಿನದಲ್ಲಿ ಮುಗಿದು ಹೋಗಿದೆ ಅನ್ನಿಸ್ತಿದೆ. ನಾನು ಅಂದುಕೊಂಡಿದ್ದನ್ನೆಲ್ಲಾ ಮಾಡಿ ಮುಗಿಸೋಕೆ ಇನ್ನೂ ಐವತ್ತು ವರ್ಷ ಆಯಸ್ಸುಬೇಕು ಕಣ್ರೀ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 538, December 22, 2001, ಕನ್ನಡ ಪ್ರಭ

ನಾನು ಸಿತಾರ್, ಕುಂಚ, ಪೆನ್ನು, ಕ್ಯಾಮೆರಾ ಎಲ್ಲವನ್ನೂ ಹಿಡಿಯುತ್ತೇನೆ. ಅವೆಲ್ಲವೂ ಒಂದರ ಅಭಿವ್ಯಕ್ತಿ. ಅವುಗಳ ನಡುವೆ ಯಾವುದೇ ವ್ಯತ್ಯಾಸ ಕಾಣದು. ಅದು ಬೇರೆಯವರಿಗೆ ಬಹುಮುಖ ಪ್ರತಿಭೆಯಂತೆ ಕಾಣುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 515

I have learnt, ಆಶಾವಾದ, ನಿರಾಶಾವಾದದ ಆಚೆಗೆ ಹೋಗಿ ಮನುಷ್ಯನ ಕೈಲಿ ಕೆಲ್ಸ ಮಾಡೋದು ಸಾಧ್ಯ ಅದನ್ನ ನಾನು ಅರ್ಥ ಮಾಡಿಕೊಂಡಿದ್ದೀನಿ. ಆಶಾವಾದಿಯಾಗೊ ಅಗತ್ಯವೂ ಇಲ್ಲ. ನಾನು ನಿರಾಶಾವಾದಿನೂ ಅಲ್ಲ. ಆಶಾವಾದಿನೂ ಅಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು ಪುಟ 502

ನಾನು ಒಂದು ಯಾವಪಾಸಕನೂ ಅಲ್ಲ ಏನೂ ಅಲ್ಲ ಮಾರಾಯ, ಬಂದು ಬಂದಿದ್ದನ್ನೆಲ್ಲ interest ಕಂಡಿದ್ದನ್ನೆಲ್ಲಾ ತಿಳ್ಕೊಳ್ತಾ, Participate ಮಾಡ್ತಾ ಹೋಗ್ತಾ ಬಂದಿರೋನೇ ಹೊರತು, ಕೂತುಕೊಂಡು ಪಾಂಡಿತ್ಯ ಪಡೀಬೇಕು ಅನ್ನೋದು ಸುತಾರಾಂ ನನಗೆ ಇಷ್ಟ ಇಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, 507

ನಾನು ನನ್ನತನದ ಅಭಿವ್ಯಕ್ತಿಗಾಗಿ ಯಾವುದೇ ವಿಶಿಷ್ಟ ನಿರೂಪಣಾ ತಂತ್ರವನ್ನಾಗಲಿ, ಶೈಲಿಯನ್ನಾಗಲಿ ರೂಪಿಸಿದ್ದೆ ಎಂದು ತಿಳಿಯಬೇಡಿ. ನನ್ನ ಅನುಭವಗಳನ್ನು ಯಾವ ತಂತ್ರಗಾರಿಕೆಯೂ ಇಲ್ಲದೆ ಸ್ಪಷ್ಟವಾಗಿ, ನೇರವಾಗಿ ನನ್ನೆಲ್ಲ ಅಭಿಜಾತ ವಿನೋದ, ಹಾಸ್ಯ ಕುತೂಹಲ, ಲವಲವಿಕೆಯೊಂದಿಗೆ ಓದುಗರಿಗೆ ತಿಳಿಸುವುದಷ್ಟೇ ನಾನು ಮಾಡಿದ್ದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 298

ಮುಂದೇನಾಗಬಹುದು ಎಂಬುದಕ್ಕೆ ಹಿಂದೇನಾಗಿತ್ತು ಎಂದು ತಿಳಿಯುವುದು ಬಹುಮುಖ್ಯ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಸ್ಮಯ-೨, ಪುಟ ೭೮

ಅಪ್ಪಅಮ್ಮಂದಿರಿಗೆಲ್ಲ ತಿಳಿಸಿ ಬಂಧು ಭಾಂಧವರನ್ನೆಲ್ಲಾ ಸಂತೋಷ ಸಾಗರದಲ್ಲಿ ಮುಳುಗಿಸಿ ಮದುವೆಯಾಗಬೇಕು ಇತ್ಯಾದಿ ಭ್ರಮೆಯಿಂದ ನಾನು ಈಗ ಪಾರಾಗಿದ್ದೇನೆ. ನನ್ನ ಮದುವೆ ನನ್ನದೇ ಹೊರತು ಇನ್ಯಾರದ್ದೂ ಅಲ್ಲ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿಯಲ್ಲಿನ ಒಂದು ಪತ್ರ, ಪುಟ 54

ಪರಿಸರ ಅನ್ನೋದು ಏನು? ಮನುಷ್ಯನ ಸಮಾಜ ಅನ್ನೋದು ಮತ್ತು ಮನುಷ್ಯನ ಆತ್ಮ ಅನ್ನೋದು ಈ ಮೂರು ಹಾಳಾದರು ಒಟ್ಟಿಗೆ ಹಾಳಾಗೋದು; ಉದ್ಧಾರ ಆದರೂ ಒಟ್ಟಿಗೆ ಉದ್ಧಾರ ಆಗೋದು!
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 605

ಮನುಷ್ಯ ಪ್ರಜ್ಞೆಯ ಮಹಾ ದುರಂತವೆಂದರೆ ವರ್ತಮಾನದ ಕ್ರಿಯೆ ಚರಿತ್ರೆಯಾದ ಮೇಲೇ ನಮಗೆ ನಮ್ಮ ಕ್ರಿಯೆವಳಿಗಳು ಚಾರಿತ್ರಿಕ ಸನ್ನಿವೇಶದಲ್ಲಿ ಸಂಗತವಾಗಿತ್ತೋ ಅಂಗವಾಗಿತ್ತೋ ಅರಿವಾಗುವುದು.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 107

ಅಪ್ಪನ ಆಸ್ತಿಯ ಮೇಲೆ ಹೊಟ್ಟೆ ಹೊರೆಯುವ ಪರತಂತ್ರ ಜೀವಿಗೆ ಆತ್ಮವೇ ಇರುವುದಿಲ್ಲ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 4

ಕೆಟ್ಟಮೇಲೆ ಬುದ್ಧಿ ಬಂತು ಅನ್ನೋ ಗಾದೆಯಿದೆಯಲ್ಲ ತಪ್ಪು. ಕೆಡ್ತಾ ಕೆಡ್ತಾ ಬುದ್ಧೀನೂ ಕೆಡ್ತಾ ರೋಗ ಜೋರಾಗ್ತಾ ಹೋಗುತ್ತೆ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 54

Also Read: K. P. Poornachandra Tejaswi Quotes About Nature

ಸಾವಿನ ಭಯ ಹೋಗೋವರೆಗೂ ನೀವು ನಿಜವಾದ ಮನುಷ್ಯರಾಗೋಲ್ಲ ತಿಳ್ಕೊಳಿ.
– ಕೆ.ಪಿ ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 129

ಗಂಭೀರವಾಗಿ ಬದುಕಿ, ಗಂಭೀರವಾಗಿ ಸಾಯೋಣ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 129

ನ್ಯಾಯವಾಗಿ ವಿಚಾರವಾದಿಗೆ ದೆವ್ವ ಇಲ್ಲ, ದೇವರು ಇಲ್ಲ ಅಂತ ತೀರ್ಮಾನ ಕೊಡೋ ಹಕ್ಕೇ ಇಲ್ಲ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 156

ಕಣ್ಮುಂದೆ ನಡೆಯೋದನ್ನ ಯಾವನು ಸರಿಯಾಗಿ ನೋಡೋದು ಕಲಿತುಕೊಳ್ಳುವುದಿಲ್ಲವೋ, ಅವನಿಗೆ ಹಿಂದೇನಾಯ್ತುಂತಾನೂ ಗೊತ್ತಾಗೋದಿಲ್ಲ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಚಿದಂಬರ ರಹಸ್ಯ, ಪುಟ 205

ಮದುವೆ ಎಂದೂ ಮಹತ್ತರ ಘಟನೆಯಲ್ಲ. ಅನಂತರದ ಬದುಕು ಮುಖ್ಯವಾದುದು. ಸ್ವಾತಂತ್ಯ್ರವನ್ನು ಗಳಿಸಿಕೊಂಡ ದಾರಿ ಮುಖ್ಯವಾದುದು.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 131

Love ಅಂದರೆ ಏನು ಗೊತ್ತ, ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು. ದೈಹಿಕವಾಗಿ ಮಾನಸಿಕವಾಗಿ. ನೀವು ತಿಳಿದಿರೋ ಅಂಥ ಸುಲಭದ್ದಲ್ಲ.
– ಕೆ. ಪಿ ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 32

Love is such a simple reality to me that I love you so much.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ, ಪುಟ 56

ನಾನು ಪ್ರೇಮಿಸಿದವಳನ್ನೇ ನಾನು ಮದುವೆಯಾಗುತ್ತೇನೆ ಜಾತಿ ಪಂಥಗಳನ್ನೆಲ್ಲಾ ತೊರೆದು ಎನ್ನುವುದು ಒಂದು ಚೇತನದ ವ್ಯಕ್ತಿ ನಿಷ್ಠೆಯ ಮೊದಲ ಕುರುಹು.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ ಪುಟ 86

ನನ್ನ ಕಾಲಮೇಲೆ ನಾನು ನಿಲ್ಲದೆ ಮದುವೆಯಾದರೆ ಗುಲಾಮೀಯತೆಗೆ ನನ್ನನ್ನು ಜೊತೆಗೆ ಇನ್ನೊಬ್ಬರನ್ನು ಗುರಿ ಮಾಡಿದಂತೆ. ಮಕ್ಕಳಾದರೆ ಗುಲಾಮರಿಗೆ ಜನ್ಮವಿತ್ತಂತೆ…
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ,, ನನ್ನ ತೇಜಸ್ವಿ, ಪುಟ 131

ನಾವು ಮೌನದ ಭಾಷೆನ ಅರ್ಥ ಮಾಡಿಕೊಳ್ಳದಿದ್ದರೆ ಮಾತುಗಳನ್ನ ಅರ್ಥಮಾಡಿಕೊಳ್ಳೊ ಸೆನ್ಸಿಬಿಲಿಟಿ ಹೋಗಿಬಿಡುತ್ತದೆ. ನಾವು ಮಾತನಾಡುವಷ್ಟೇ ಮಾತನಾಡದೆ ಇರುವುದು ಅಗತ್ಯ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 587

ಆಲೋಚನೆ ಅಭಿಪ್ರಾಯಗಳನ್ನು ಆಲೋಚನೆ ಅಭಿಪ್ರಾಯಗಳಿಂದ ಗೆಲ್ಲಲು ಸಾಧ್ಯವೇ ಹೊರತು ಬಲಪ್ರಯೋಗದಿಂದ ಕೊಲ್ಲಲು ಸಾಧ್ಯವೇ ಇಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 491

ಸಾಹಿತಿ ಕಲಾಕೃತಿಯಲ್ಲಿ ಬಳಸುವ ಭಾಷೆ ಡಿಕ್ಷನರಿಯಿಂದ ಕಲಿತ ಭಾಷೆ ಅಲ್ಲವೇ ಅಲ್ಲ. ಡಿಕ್ಷನರಿಯಿಂದ ಭಾಷೆ ಕಲಿತವನು ಸಾಹಿತ್ಯ ರಚಿಸಲು ಎಂದೂ ಸಾಧ್ಯವಿಲ್ಲ. ಸಾಹಿತಿಗೆ ಭಾಷೆ ಆ ಭಾಷೆಯನ್ನಾಡುವ ಜನರ ಜೀವಸ್ಪಂದನದೊಡನೆ ಅವಿಭಾಜ್ಯವಾಗಿರುವ ಮಾಂತ್ರಿಕ ಶಕ್ತಿ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ 129

ಅವರ ದೈನ್ಯಾವಸ್ಥೆ, ಕೃಶ ಶರೀರ, ಹರಕಲು ಬಟ್ಟೆ ಇವನ್ನೆಲ್ಲಾ ನೋಡಿ ನನಗೆ ಅವರ ಮೇಲಿನ ಸಿಟ್ಟೆಲ್ಲಾ ಸಂಪೂರ್ಣ ಇಳಿದುಹೋಯ್ತು. ಅವರ ಸ್ಥಿತಿ ನಾಶವಾಗುತ್ತಿರುವ ವನ್ಯ ಜೀವಿಗಳಿಗಿಂತ ಭಿನ್ನವಾಗೇನೂ ನನಗೆ ಕಾಣಲಿಲ್ಲ . ಅವರ ಮೇಲೆ ಮುಖ್ಯಿ ತೀರಿಸಲು ಹೊರಟ ನನ್ನ ಬಗ್ಗೆ ನನಗೇ ಜುಗುಪ್ಸೆಯಾಯ್ತು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಾಯಾಲೋಕ, ಪುಟ 6

ಜಗತ್ತಿನಲ್ಲಿ ಯಾವುದೂ ಜಡವಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮಾಯಾಲೋಕ, ಪುಟ 6

ಶಾಮಣ್ಣನವರ ಪ್ರಭಾವದಿಂದ ತಮಾಷೆ, ವಿನೋದ, ಹಾಸ್ಯಗಳು ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿ ಹೋದವು.‌
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ, ಪುಟ 76

ಯುದ್ಧ, ಕಲೆ, ಧರ್ಮ ಮೊದಲಾದವುಗಳ ಬೆಂಬಲದೊಂದಿಗೆ ಪ್ರತಿ ನಾಗರೀಕತೆಯೂ ತಾನು ವಿಶ್ವವ್ಯಾಪಿಯಾಗುವುದಕ್ಕೆ ಪ್ರಯತ್ನಿಸಿರುವುದು ಕಾಣುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ವಿಮರ್ಶೆಯ ವಿಮರ್ಶೆ, ಪುಟ 124

I want to exist as a husband to a wife and nothing else.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ನನ್ನ ತೇಜಸ್ವಿ ಪುಟ 54

ಒಳ್ಳೆಯವರ ಒಳ್ಳೆಯತನಕ್ಕೆ ಪ್ರಚಾರ, ಪ್ರೋತ್ಸಾಹ, ಸಮರ್ಥನೆ ಯಾವುದೂ ಸಿಕ್ಕುತ್ತಿಲ್ಲ. ಅದರ ಬದಲು ಅವರ ಮೇಲೆ ಸುಳ್ಳು ಆರೋಪಗಳನ್ನು ವರದಿ ಮಾಡುವುದು, ಚಾರಿತ್ರ್ಯ ವಧೆ ಮಾಡುವುದು ನಮ್ಮ ಸುದ್ದಿ ಮಾಧ್ಯಮಗಳ ದಿನನಿತ್ಯದ ಕೆಲಸವಾಗಿದೆ. ರಂಜಕ ವಾರ್ತೆಗಳನ್ನು ವರದಿ ಮಾಡುವ ಚಪಲದಲ್ಲಿ ಈ ಪತ್ರಿಕೆಗಳು ಸಮಾಜದ ಮನಃಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿವೆ ಯುವಜನರ ಆತ್ಮವಿಶ್ವಾಸವನ್ನೇ ನಾಶ ಮಾಡುತ್ತಿವೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 837

ನಾನು ಆಸ್ತಿಕ ವಾದಿಯಾಗಲೀ ಧರ್ಮಾಂಧನಾಗಲೀವಾಲ್ಲ. ನಾಸ್ತಿಕತೆಯೂ ಅಂಧಶ್ರದ್ಧೆಯ ಹಂತ ತಲುಪದಂತೆ ನಾವು ನೋಡಿಕೊಳ್ಳಬೇಕಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 818

ಮತ್ತೊಬ್ಬರಿಗೆ ತೊಂದರೆ ಮಾಡಬಾರದು, ಮೊತ್ತೊಬ್ಬರಿಗೆ ಚೂರಿ ಹಾಕ್ಬಾರ್ದು ಅನ್ನೋದನ್ನು ನಾವು ಭಗವದ್ಗೀತೆ, ಖುರಾನ್, ಬೈಬಲ್ ಎಲ್ಲಾ ಓದಿ ತಿಳ್ಕೊಬೇಕಾದ ಅಗತ್ಯ ಇಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 797

ತಮ್ಮ ಆದರ್ಶಗಳನ್ನೂ ಆಶೋತ್ತರಗಳನ್ನೂ ಪುನಃ ಪುನಃ ಪಠಿಸುತ್ತಿದ್ದರೆ ತಮ್ಮಷ್ಟಕ್ಕೆ ತಾನೇ ಅವು ಕೈಗೂಡುತ್ತವೆಂಬ ನಂಬಿಕೆಯಿಂದಲೇ ಮಂತ್ರಘೋಷ, ಭಜನೆ, ಸಹಸ್ರನಾಮ, ಸ್ಮರಣೆ ಇವೆಲ್ಲಾ ನಮ್ಮ ಸಂಸ್ಕೃತಿಯಲ್ಲಿ ಜನಿಸಿದ್ದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1984, ಹೊಸ ವಿಚಾರಗಳು, ಪುಟ 752

ಯಾರಿಗೆ ತಾವು ಇದ್ದಲ್ಲೇ ಎಲ್ಲವೂ ಕುತೂಹಲಕರವಾಗಿ ಇರುವುದಿಲ್ಲವೋ ಅವರು ಈ ಭೂಮಂಡಲದ ಮೇಲೆ ಎಲ್ಲಿ ಟೂರ್ ಹೋದರೂ, ಇಂಟರೆಸ್ಟಿಂಗ್ ಆಗಿ ಇರೋದಿಕ್ಕೆ ಆಗಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 2003, ಹೊಸ ವಿಚಾರಗಳು, ಪುಟ 548

ಬಯ್ಯೋದಿಕ್ಕಿಂತ ಸುಲಭವಾಗಿ ಹೊಗಳಿ ಹೊಗಳಿ ಒಬ್ಬನ್ನ ಹಾಳು ಮಾಡಿಬಿಡಬಹುದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 2003, ಹೊಸ ವಿಚಾರಗಳು, ಪುಟ 540

ಕಾಲದೊಂದಿಗೆ ಸಂಸ್ಕೃತಿ ಬದಲಾಗುತ್ತಾ ಇರುತ್ತದೆ . ಬೇಕಾದದ್ದನ್ನು ಇಟ್ಟುಕೊಳ್ಳುತ್ತದೆ. ಬೇಡವಾದದ್ದನ್ನು ಬಿಡುತ್ತದೆ‌.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 2002, ಹೊಸ ವಿಚಾರಗಳು, ಪುಟ 522

ಚರಿತ್ರೆನೇ ಒಂದು ದಿಕ್ಕಲ್ಲಿ ಹೋಗ್ತಾ ಇರೋದು, ನೀವೇ ಒಂದು ದಿಕ್ಕಲ್ಲಿ ಯೋಚನೆ ಮಾಡ್ತಾ ಇರೋದು ಮಾಡಬಾರದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 2000, ಹೊಸ ವಿಚಾರಗಳು, ಪುಟ 494

ಕೆಲವು ವರ್ಷಗಳು ಮಾತ್ರ ಇರುವ ಈ ಅಮೂಲ್ಯ ಜೀವಿತ ಕಾಲದಲ್ಲಿ ಮುಸ್ಲಿಂ, ಹಿಂದೂ, ಒಕ್ಕಲಿಗ, ಲಿಂಗಾಯತ ಎಂದು ಹೆಸರು ಕೊಟ್ಟುಕೊಳ್ಳುತ್ತಾ ಧರ್ಮದ ನೆವದಲ್ಲಿ ಹೆಣ್ಣು ಮಕ್ಕಳನ್ನು ದೀನರನ್ನೂ ಹಿರಿದು ಹಿಂಸಿಸುತ್ತ ಜೀವನವನ್ನೆಲ್ಲಾ ನರಕವನ್ನಾಗಿಸುವುದರಲ್ಲಿ ಯಾವ ಸುಖ ಕಾಣುತ್ತೀರಿ?
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1990ರ ದಶಕ, ಹೊಸ ವಿಚಾರಗಳು, ಪುಟ 492

ಜನ್ಮಾಂತರ ಹಾಗೂ ಕರ್ಮ ಸಿದ್ಧಾಂತಗಳ ದೆಸೆಯಿಂದಲೇ ಒಬ್ಬ ಕಕ್ಕಸು ಬಳಿಯುವ ತೋಟಿಯೇ ಆಗಲಿ ಸತ್ತ ಎತ್ತನ್ನು ತಿನ್ನುವ ಹೊಲೆಯನೇ ಆಗಲಿ ತನ್ನ ದುರ್ದೆಸೆಯನ್ನು ತನ್ನ ಜನ್ಮಾಂತರಗಳಿಗೆ ಸಂಬಂಧ ಪಟ್ಟ ಪ್ರಾರಬ್ಧವನ್ನಾಗಿ ಪರಿಗಣಿಸುತ್ತಾನೆಯೇ ಹೊರತು ತನಗಾಗಿರುವ ವೈಯ್ಯಕ್ತಿಕ, ಸಾಮಾಜಿಕ ಅನ್ಯಾಯವನ್ನಾಗಿ ಪರಿಗಣಿಸುವುದೇ ಇಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 458

ಸಾಮಾನ್ಯರು ನ್ಯಾಯ ಪ್ರತಿಪಾದನೆಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿರುವುದು. ಕೊಲೆ, ವಂಚನೆ, ಲಂಚ, ನೀಚತನಗಳೆಲ್ಲ ತಮ್ಮ ವಿಧಿ ಮತ್ತು ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗಗಳೆಂದು ನಂಬತೊಡಗಿದ್ದಾರೆ. ಇಂಥ ನಿರಾಸೆಯ ಕತ್ತಲಲ್ಲೂ ಆಸೆ ಆಕಾಂಕ್ಷೆಗಳ ಬೆಳಕು ನಂದದಂತೆ ನೋಡಿಕೊಳ್ಳುವುದು ಪತ್ರಿಕೆಗಳ, ಬುದ್ಧಿಜೀವಿಗಳ ಕರ್ತವ್ಯ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, 1989, ಹೊಸ ವಿಚಾರಗಳು, ಪುಟ 245

Credits: https://nammatejaswi.wordpress.com/

KP Poornachandra Tejaswi Life Quotes Images:

Advertisement
Hoi Malnad Advertisement