ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.
ಹುಟ್ಟುವಾಗ ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು, ಲೋಕ ಉಳಿದು ಬಾಳಿ ಬದುಕಬೇಕಾದರೆ!
ಮಾನವನ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯ ವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪ ಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ. ಜಗತ್ತಿನ ಶೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನ ಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತ ಮೌಡ್ಯದ ಒಪ್ಪಿಗೆ ಯಾಗದು. ವಿನೋಬಾಭಾವೆಯವರು ಹಿಂದೆ ಹೇಳಿದಂತೆ ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.
ಪಂಚಮಂತ್ರ – Kuvempu panchamantra
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ – ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನದೃಷ್ಟಿಯಲ್ಲ; ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ.
ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯ ವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೋ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯ ವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ ಈ ‘ದರ್ಶನ’ವನ್ನೆ ವಿಶ್ವಮಾನವಗೀತೆ ಸಾರುತ್ತದೆ.
ಸಪ್ತ ಸೂತ್ರ – Kuvempu Sapta sutra
- “ಮನುಷ್ಯಜಾತಿ ತಾನೊಂದೆ ವಲಂ” ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
- ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ, ಕ್ಷತ್ರಿಯ ವೈಶ್ಯ, ಶೂದ್ರ,
- ಅಂತ್ಯಜ, ಷಿಯಾ, ಸುನ್ನಿ, ಕ್ಯಾಥೋಲಿಕ್, ಪ್ರಾಟೆಸ್ಟಂಟ್, ಸಿಖ್, ನಿರಂಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು,
- ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
- ಮತ ತೊಲಗಿ ಆಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
- ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
- ಮತ ಗುಂಪುಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ತನ್ನ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ, ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪುಕಟ್ಟಿ ಜಗಳ ಹಚ್ಚುವಂತಾಗಬಾರದು.
- ಯಾವ ಒಂದು ಗ್ರಂಥವೂ ‘ಏಕೈಕ ಪರಮಪೂಜ್ಯ’ ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದ ವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೆ ನಿರ್ಣಯಿಸಿ ಕಟ್ಟಿಕೊಳ್ಳಬೇಕು.
One reply on “ಕುವೆಂಪು ವಿಶ್ವ ಮಾನವ ಸಂದೇಶ – ಪಂಚಮಂತ್ರ – ಸಪ್ತ ಸೂತ್ರ”
[…] Also read : ಕುವೆಂಪು ವಿಶ್ವ ಮಾನವ ಸಂದೇಶ – ಪಂಚಮಂತ್ರ – … […]