Categories
Kuvempu

ಮಲೆನಾಡಿಗೆ ಬಾ – ಕುವೆಂಪು

ಮಲೆನಾಡಮ್ಮನ ಮಡಿಲಿನಲಿ
ಕರುಗಿಲೊಡಲಿನಲಿ
ಮನೆಮಾಡಿರುವೆನು ಸಿಡಿಲಿನಲಿ
ಮಿಂಚಿನ ಕಡಲಿನಲಿ!
ಬನಗಳ ಬೀಡು
ಚೆಲ್ವಿನ ನಾಡು
ಮೋಹನ ಭೀಷಣ ಮಲೆನಾಡು!

ನೇಸರು ಮೂಡುವ ಪೆಂಪಿಹುದು,
ಮುಳುಗುವ ಸೊಂಪಿಹುದು;
ತಿಂಗಳ ಬೆಳಕಿನ ಕಾಂತಿಯಿದೆ,
ಇರುಳಿನ ಶಾಂತಿಯಿದೆ,
ಕೋಗಿಲೆಯಲ್ಲಿ
ಲಾವುಗೆಯಲ್ಲಿ
ಗಿಳಿಗಳ ನುಣ್ಣರವಿಹುದಿಲ್ಲಿ!

ಮೊರೆಯುತ ಹರಿಯುವ ತೊರೆಯಿಹುದು,
ತುಂಬಿದ ಕೆರೆಯಹುದು;
ಹಾಡುತಲೇರಲು ಬೆಟ್ಟವಿದೆ,
ಬಣ್ಣಿಸೆ ಘಟ್ಟವಿದೆ.
ಬಿಸಿಲಿದೆ, ತಂಪಿದೆ;
ಹೂಗಳ ಕಂಪಿದೆ;
ಹಸುರಿನ, ಹಣ್ಣುಗಳಿಂಪಿನೆದೆ!

ರನ್ನನು ಪಂಪನು ಬಹರಿಲ್ಲಿ;
ಶ್ರೀ ಗುರುವಿಹನಿಲ್ಲಿ
ಮಿಲ್ಟನ್, ಷೆಲ್ಲಿ ಬಹರಿಲ್ಲಿ;
ಕವಿವರರಿಹರಿಲ್ಲಿ!
ಮುದ್ದಿನ ಹಳ್ಳಿ
ಈ ಕುಪ್ಪಳ್ಳಿ
ಬಾ, ಕಬ್ಬಿಗ ನಾನಿಹೆನಿಲ್ಲಿ!

Malenadige ba pdf in kannada

Malenadige ba image – Kuvempu

Malenadige ba images
Advertisement
Advertisement Advertisement