Categories
Adike

ಮಲೆನಾಡ ಅಡಿಕೆ ಕೊಯ್ಲು – Malenada Adike Koylu

ದೀಪಾವಳಿ ಹಬ್ಬದಿಂದ ಈಚೆ ಅಂದ್ರೆ ಚುಮು ಚುಂಬು ಚಳಿಗಾಲ ತಲೆ ಹಾಕೋಕೆ ಶುರು ಮಾಡಿದ್ದೆ ತಡ ಮಲೆನಾಡಲ್ಲೆಲ್ಲ ಒಂತರ ಗಡಿಬಿಡಿ ಶುರು. ಒಂದು ಕಡೆ ಊರಿನ ಪೇಟೆಯಲ್ಲೆಲ್ಲ ಜನ ಕಮ್ಮಿಯಾಗಿದ್ರೆ ಇನ್ನೊಂದು ಕಡೆ ಅಡಿಕೆ ದೋಟಿಗಳು ಊರಿನ ರಸ್ತೆಯಲ್ಲೆಲ್ಲ ಸವಾರಿ ಶುರು ಮಾಡಿರ್ತಾವೆ.

ಇನ್ನು ಊರೊಳಗೆ ಬಂದ್ರೆ ಅಯ್ಯೋ ಈ ಕೊನೆ ತೆಗೆಯೋನು ಎತ್ತಲಾಗೋದ ಅನ್ನೋ ಮಾತು ಕೆಲವರ ಬಾಯಲ್ಲಿ ಕೇಳಿ ಬರ್ತಿದ್ರೆ ಇನ್ನು ಕೆಲವರ ಬಾಯಲ್ಲಿ ಕೊನೆ ತೆಗೆಯೋರೇ ಸಿಗ್ತಿಲ್ಲ ಅನ್ನೋ ಮಾತು ಕುಣಿದಾಡ್ತಿರುತ್ತೆ. ಒಂದು ಕಡೆಯಿಂದ ಕೊನೆ ತೆಗೆಯೋರು ಸಿಗ್ತಿಲ್ಲ, ಇನ್ನೊಂದು ಕಡೆಯಿಂದ ಅಡಿಕೆ ಗೋಟಾಗಿ ಉದುರುತಿದ್ದಾವೆ.

ಇಷ್ಟೆಲ್ಲ ಆಗಿ ಹಾಗೋ ಹೀಗೋ ಅಡಿಕೆ ಕೊನೆ ಮನೆ ಬಾಗಲಿಗೆ ಬಂದುಬಿದ್ರೆ ಈ ಕಡೆ ಅಡಿಕೆ ಸುಲ್ತಕ್ಕೆ ಜನ ಸಿಗತಿಲ್ಲ. ಮಿಷನ್ಗೆ ಹಾಕಿದ್ರೆ ಒಂದು ಕಡೆಯಿಂದ ಅಡಿಕೆ ತೂಕ ಕಮ್ಮಿ ಆಗುತ್ತೆ ಅನ್ನೋ ಹೆದುರಿಕೆ ಆದ್ರೆ ಇನ್ನೊಂದು ಕಡೆ ಜನ ಸಿಗದೆ ಇರೋ ಕೊನೆನು ಪಳೆದು ಹೋಗ್ತಿದ್ದಾವೆ ಅನ್ನೋ ಚಿಂತೆಯಲೇ ಆಧುನೀಕರಣದ ಮೊರೆ ಹೋಗಬೇಕಾಗುತ್ತೆ. ಹಾಗೋ ಹೀಗೋ ಈ ಎಲ್ಲಾ ರಗಳೆಗಳ ನಡುವೆ ಅಡಿಕೆ ಕೊಯಲು ಮುಗಿದು ಹೋಗುತ್ತೆ. ಕೊನೆಯಲ್ಲಿ ವರ್ಷವಿಡಿ ತಾವು ಕಷ್ಟಪಟ್ಟಿದಕ್ಕೂ ಸಾರ್ಥಕ ಎನ್ನುವ ಒಂದು ಮಂದಹಾಸ ಮಲೆನಾಡಿನ ಅಡಿಕೆ ಬೆಳೆಗಾರರ ಮುಖದಲ್ಲಿ ಮೂಡುತ್ತೆ.

ಆದರೂ ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಮನೆ ಮಕ್ಕಳಂತೆ ಸಾಕಿರೋ ಈ ಅಡಿಕೆ ತೋಟಗಳಿಗೆ ಚುಕ್ಕೆ ರೋಗ, ತುಂಡೆ ರೋಗದಂತಹ ತೊಂದರೆಗಳು ಬಂದು ಇದ್ದ ಮೂರು ನಾಲ್ಕು ಮರಗಳು ಹಾಳಾಗಿ ಹೋಗಿ ಫಸಲು ಕೈ ತಪ್ಪಿ ಹೋಗುವ ಸ್ಥಿತಿ ಬಂದಿದೆ. ಒಟ್ಟಾರೆ ಮಲೆನಾಡಿನಲ್ಲಿ ಪ್ರತಿವರ್ಷವೂ ಗಡಿಬಿಡಿಯ ವಾತಾವರಣ ಸೃಷ್ಟಿಸಿ ಹಬ್ಬದ ರೀತಿ ನಡೆದು ಹೋಗುವ ಈ ಅಡಿಕೆ ಕೊಯಿಲು ಮಲೆನಾಡಿನ ಒಂದು ಅವಿಭಾಜ್ಯ ಅಂಗ ಅಂದ್ರು ತಪ್ಪಾಗಲ್ಲ. ಹೌದು, ಅಡಿಕೆ ವಾಣಿಜ್ಯ ಬೆಳೆನೆ ಆಗಿರಬಹುದು ಆದರೆ ಇದೊಂದು ರೀತಿ ಮಲೆನಾಡಿನ ಜೀವನಾಡಿ. ಮಲೆನಾಡು ಅಂದ್ರೆ ಅಡಿಕೆ, ಅಡಿಕೆ ಅಂದ್ರೆ ಮಲೆನಾಡು ಅನ್ನುವಷ್ಟು ಮಲೆನಾಡಿಗೆ ಹೊಂದುಕೊಂಡಿದೆ.

ಅಡಿಕೆ ಸುಲ್ತಾ ಮುಗಿತು ಅಂದ್ರೆ ಕಥೆ ಇಲ್ಲಿಗೆ ಮುಗೀತು ಅಂತ ಅಲ್ಲ, ಅಡಿಕೆ ತೋಟದ ತಂಪಲ್ಲಿ ನಡೀತಿದ್ದ ಕೃಷಿ ಕಾರ್ಯ ಗದ್ದೆ ಬೈಲಿನ ಬಿಸಿಲಿಗೆ ಶಿಫ್ಟ್ ಆಗೋ ದಿನ ಬಂತು ಅಂತ ಅರ್ಥ. ಅಂದ್ರೆ ಆ ಕಡೆ ಅಡಿಕೆ ಕೊಯಿಲು ಹಿಂದೆನೆ ಈ ಕಡೆ ಗದ್ದೆ ಕೊಯಿಲಿಗೆ ಸಿದ್ಧವಾಗಿರುತ್ತೆ. ಒಟ್ಟಾರೆಯಾಗಿ ಬದುಕು ಕಟ್ಟಿಕೊಳ್ಳಲು ಪ್ರಾರಂಭವಾದ ಈ ಕೃಷಿಯೇ ಈಗ ರೈತನ ಬದುಕಿನ ಭಾಗವಾಗಿ ಹೋಗಿದೆ. ಕೊನೆದಾಗಿ ತಾನು ದುಡಿದು ಲೋಕದ ಹೊಟ್ಟೆ ತುಂಬಿಸುವ ರೈತನಿಗೊಂದು ಸಲಾಂ..!

– ಸುಧನ್ವ ಗಡಿಕಲ್