ಹಬ್ಬದ ಆಚರಣೆ ಮಲೆನಾಡಿನ ಜನರು ವಿಶಿಷ್ಟವಾಗಿ ಮಾಡುತ್ತಾರೆ. ಈ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ಸಾಮಗ್ರಿ. ಇದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಇದನ್ನು ಪೂಜೆಗೆ ಬಳಸಲಾಗುತ್ತದೆ.
ಭೂದೇವಿಗೆ ಪೂಜೆ ಮಾಡಿ, ಮಡಿಲು ತುಂಬುವ ಭಾವನಾತ್ಮಕತೆ ಹಿನ್ನೆಲೆಯ ಹಬ್ಬ ಇದಾಗಿದ್ದು, ಭೂಮಿತಾಯಿಗೆ ಮಡಿಲು ತುಂಬಲು ಮತ್ತು ನೈವೇದ್ಯ ಸಾಮಗ್ರಿಯನ್ನು ಹೊಲಕ್ಕೆ ಒಯ್ಯಲು ಬಿದಿರಿನಿಂದ ಮಾಡಿದ ಬುಟ್ಟಿಗಳನ್ನು ಬಳಸಲಾಗುತ್ತದೆ. ಇದಕ್ಕೆ ‘ಭೂಮಣ್ಣಿ ಬುಟ್ಟಿ’ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುವುದು ವಾಡಿಕೆ. ಈ ಬುಟ್ಟಿಗಳನ್ನು ಹಬ್ಬಕ್ಕೆ ಬಳಸಲು ವಿಶೇಷ ವಿನ್ಯಾಸದಿಂದ ರೂಪಿಸಲಾಗುತ್ತದೆ.
ಇದು ಭೂಮಿ ತಾಯಿ ಗರ್ಭೀಣಿಯಾಗಿರುವ ಸಂಕೇತ. ಹಾಗಾಗಿ ತುಂಬಿದ ಗರ್ಭಿಣಿಗೆ ಯಾವ ರೀತಿ ಬಯಕೆ ಶಾಸ್ತ್ರ ಮಾಡಲಾಗುತ್ತದೆಯೋ ಹಾಗೆಯೇ ಭೂಮಿ ಹುಣ್ಣಿಮೆಯಂದು ಸಹ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಜನಪದೀಯ ಆಚರಣೆಗಳು ಅತ್ಯಂತ ವೈಶಿಷ್ಟಪೂರ್ಣವಾಗಿರುತ್ತದೆ.

ಹೊಲದಲ್ಲಿಯೇ ತೆನೆಗಳನ್ನು, ಮರಗಿಡಗಳನ್ನು ಹೂವುಗಳಿಂದ ಸಿಂಗರಿಸಿ, ಕಡುಬು, ಪಾಯಸ, ಚಿತ್ರಾನ್ನಗಳಂತಹ ಖಾದ್ಯಗಳನ್ನು ನೈವೇದ್ಯಕ್ಕಿರಿಸುತ್ತಾರೆ. ವಿಜೃಂಭಣೆಯ ಪೂಜೆಯ ನಂತರ ಹೊಲದಲ್ಲೇ ಕುಳಿತು ಊಟ ಮಾಡುತ್ತಾರೆ.
ಭೂಮಿ ಹುಣ್ಣಿಮೆ ಹಬ್ಬವನ್ನು ಅಶ್ವಯುಜ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಇದು ಕೃಷಿ ಪ್ರಧಾನ ಸಮಾಜದ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ಹಬ್ಬವಾಗಿದೆ. ಭೂಮಿಯನ್ನು ತಾಯಿ ಎಂದು ಪೂಜಿಸುವ ಭಾರತೀಯರ ನಂಬಿಕೆ ಈ ಹಬ್ಬದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.ಮಳೆಗಾಲ ಮುಗಿದ ನಂತರ ಹೊಲಗಳಲ್ಲಿ ಬೆಳೆಯ ಚಿಗುರುಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ರೈತರು ಭೂಮಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಎತ್ತು, ಕೃಷಿ ಸಾಧನಗಳು ಹಾಗೂ ಪ್ರಕೃತಿಗೆ ಗೌರವ ತೋರಿಸುವುದು ಈ ಹಬ್ಬದ ಪ್ರಮುಖ ಅಂಶ. ಭೂಮಿ ಹುಣ್ಣಿಮೆ ರೈತರ ಜೀವನಕ್ಕೆ ಮಾತ್ರ ಸೀಮಿತವಲ್ಲ, ಪ್ರಕೃತಿಯೊಂದಿಗೆ ರೈತರ ಬಾಂಧವ್ಯವನ್ನು ಹಬ್ಬದ ರೂಪದಲ್ಲಿ ಆಚರಿಸುವುದಾಗಿದೆ.
ಈ ಹಬ್ಬವು ಪ್ರಕೃತಿ ಮತ್ತು ರೈತರ ನಡುವಿನ ಬಾಂಧವ್ಯವನ್ನು ಸಾರುತ್ತದೆ. ವರ್ಷವಿಡೀ ಅನ್ನ ನೀಡುವ ಭೂಮಿ ತಾಯಿಗೆ ಇಂದಿನ ದಿನ ಕೃತಜ್ಞತೆಗಳನ್ನು ಅರ್ಪಿಸುವುದು ಈ ಹಬ್ಬದ ವಿಶೇಷ.
ಒಟ್ಟಾರೆಯಾಗಿ ಹಬ್ಬ ಒಂದು ರೀತಿಯಲ್ಲಿ ಮಣ್ಣಿನ ಮಕ್ಕಳು ತಮ್ಮನ್ನು ಸಲಹುವ ಭೂತಾಯಿಗೆ ಮಡಿಲು ಮಡಿಲು ತುಂಬುವ ಹಬ್ಬ ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿನ ಅವಿನಾಭಾವ ಸಂಬಂಧದ ಸ್ವರೂಪ..
– ಸುಧನ್ವ ಗಡಿಕಲ್


 
		

