ಮಲೆನಾಡ ಬದುಕು, ಇಲ್ಲಿನ ಮಳೆಗಾಲ, ದಟ್ಟ ಕಾಡುಗಳು, ಪ್ರಶಾಂತ ಪರಿಸರ ಇವೆಲ್ಲಾ ಮಲೆನಾಡಿನಲ್ಲೇ ಹುಟ್ಟಿ ಬೆಳೆದು ಅಲ್ಲೇ ಬದುಕು ಕಟ್ಟಿಕೊಂಡವರಿಗೆ ಗೊತ್ತಿರುತ್ತದೆ. ಈ ಮಲೆನಾಡನ್ನು ಮಲೆನಾಡಿಗರಿಗೂ, ಹೊರಭಾಗದವರಿಗೂ ಹೀಗೆಲ್ಲಾ ಇದೆಯಾ ನಮ್ಮ ಸುತ್ತಲಿನ ಪ್ರಪಂಚ, ಜೀವವೈವಿಧ್ಯತೆ ಎಂದೆನ್ನಿಸುವಂತೆ, ಮೈನವಿರೇಳಿಸುವಂತೆ ಬರೆಯುವ ರೋಚಕ ಕತೆಗಾರ ಗಿರಿಮನೆ ಶ್ಯಾಮರಾವ್. Girimane Shyama Rao ಇವರ “ಮಲೆನಾಡಿನ ರೋಚಕ ಕತೆಗಳು” ಸರಣಿ ಪುಸ್ತಕಗಳನ್ನು ಓದಿದರಂತೂ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲದೇ ನಮ್ಮ ಸುತ್ತಲೇ ಕಥೆ ನಡೆಯುತ್ತಿದೆಯೇನೋ, ನಾನೇ ಈ ಕಥೆಯ ಪಾತ್ರಗಳಲ್ಲೊಂದಾಗಿದ್ದೇನೇನೋ ಎಂಬಂತೆ ಓದಿಸಿಕೊಂಡು ಹೋಗುವಷ್ಟು ಶಕ್ತಿ ಇವರ ಈ ಪುಸ್ತಕಗಳಿಗಿವೆ.
ಗಿರಿಮನೆ ಶ್ಯಾಮರಾವ್ ಅವರ ಬದುಕು ಬರಹ
ಹಾಸನ ಜಿಲ್ಲೆಯ ಸಕಲೇಶಪುರ ಸಮೀಪದ ಗಾಣದಹೊಳೆ ಎಂಬ ರಸ್ತೆಯ ಸಂಪರ್ಕವೂ ಸರಿಯಾಗಿಲ್ಲದ ಸಣ್ಣ ಹಳ್ಳಿಯಲ್ಲಿ ಹುಟ್ಟಿ ತಮ್ಮ ಬಾಲ್ಯ ಹಾಗೂ ಜೀವನದ ಬಹುಭಾಗವನ್ನು ಕಳೆದ ಗಿರಿಮನೆ ಅವರು ತಮ್ಮ 45 ವರ್ಷ ವಯಸ್ಸಿನ ನಂತರದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಕನ್ನಡ, ಸಂಸ್ಕೃತ ಭಾಷಾ ಜ್ಞಾನ ಸಣ್ಣ ವಯಸ್ಸಿನಲ್ಲೇ ಹೆತ್ತವರಿಂದ ಪಡೆದುಕೊಂಡ ಇವರು ಬಹಳಷ್ಟು ಪುಸ್ತಕಗಳನ್ನು ಓದುತ್ತಿದ್ದರಂತೆ, ಆದರೆ ಬರವಣಿಗೆಗೆ ಕೈ ಹಾಕಿದ್ದು ಮಾತ್ರ ನಡುವಯಸ್ಸಿನಲ್ಲಿ. ಬರವಣಿಗೆಗೆ ಒಮ್ಮೆ ತೊಡಗಿಕೊಂಡ ನಂತರ ನನ್ನಲ್ಲೂ ಬರವಣಿಗೆಯ ಸಾಮರ್ಥ್ಯ ಇದೆ ಎಂಬುದನ್ನು ಅರಿತುಕೊಂಡ ಗಿರಿಮನೆ ಶ್ಯಾಮರಾವ್ ಹಿಮ್ಮೆಟ್ಟದೆ ಸಾಲು ಸಾಲು ಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡರು.
ವ್ಯಕ್ತಿತ್ವ ವಿಕಸನದೊಂದಿಗೆ ಮಲೆನಾಡಿನ ಪರಿಚಯ

“ಮಕ್ಕಳನ್ನು ಬೆಳೆಸುವುದು ಹೇಗೆ”, “ಮಕ್ಕಳೊಡನೆ ಆಟ, ಪಾಠ, ಒಡನಾಟ”, “ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು”, “ಮಾತು ಹೇಗಿದ್ದರೆ ಚೆನ್ನ” ಈ ರೀತಿಯ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟ ಇವರ ರಚನೆಯ ಪುಸ್ತಕಗಳೂ ಜನಪ್ರಿಯ. ಮನೋವೈಜ್ಞಾನಿಕ ಕಾದಂಬರಿಗಳನ್ನೂ ಬರೆದಿದ್ದಾರೆ. “ವೇದ ಮಂತ್ರಗಳ ಅದ್ಭುತ ರಹಸ್ಯ” ಎಂಬ ಪುಸ್ತಕದ ಹಲವು ಭಾಗಗಳು ಹೊರಬಂದಿವೆ. ಅನಂತರ “ಮಲೆನಾಡಿನ ರೋಚಕ ಕಥೆಗಳು” ಇದರ 19 ಭಾಗಗಳು ಮಲೆನಾಡನ್ನು ಪರಿಚಯಿಸುಂತಹಾ ಕತೆ, ಕಾದಂಬರಿ, ಲೇಖನಗಳ ರೂಪದಲ್ಲಿ ಹೊರಬಂದಿದ್ದು, ಯುವ ಓದುಗರನ್ನಂತೂ ಬಹುವಾಗಿ ಆಕರ್ಷಿಸಿವೆ, ಓದಿನೆಡೆ ಕರೆದೊಯ್ದಿವೆ, ಓದಿನ ಹುಚ್ಚನ್ನು ಹತ್ತಿಸಿವೆ. ಇವರದೇ ಸ್ವಂತ ಪ್ರಕಾಶನ “ಗಿರಿಮನೆ ಪ್ರಕಾಶನ”ದ ಮೂಲಕ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಸಾಮಾನ್ಯವಾಗಿ ಅವರ ಅನುಭವಕ್ಕೆ ಬಂದ, ಸಣ್ಣ ಪುಟ್ಟ ನಡೆದ ಕಥೆಗಳನ್ನು ರಸವತ್ತಾಗಿ ಬಣ್ಣಿಸುತ್ತಾ, ಓದುಗರನ್ನು ಸೆರೆಹಿಡಿಯುವ ಭಾಷೆಯಿಂದ ಕೃತಿ ಬರೆಯುವುದೇ ಇವರ ಗೆಲುವಿನ ಗುಟ್ಟು. ಇವರ 45 ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗಿವೆ.
ಸಾಹಿತ್ಯ, ಪುಸ್ತಕಗಳ ಓದು ಕಡಿಮೆಯಾಗುತ್ತಿದೆ ಎಂಬೆಲ್ಲಾ ಕೂಗು ಕೇಳುತ್ತಿರುವ ಈ ಹೊತ್ತಿನಲ್ಲಿ, ಇವರ ಪುಸ್ತಕಗಳು 10-15 ಮುದ್ರಣ ಕಾಣುತ್ತಿರುವುದು ಅದರಲ್ಲೂ ಯುವಜನತೆಯನ್ನು ಆಕರ್ಷಿಸುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆಯ ವಿಚಾರವೇ ಸರಿ. ಇವರ ಇಳಿ ವಯಸ್ಸಿನ ಸಾಹಿತ್ಯ ಕೃಷಿ ಹೀಗೇ ಮುಂದುವರೆಯಲಿ ಇನ್ನಷ್ಟು ಕೃತಿಗಳು ಸಾರಸ್ವತ ಲೋಕಕ್ಕೆ ಸಿಗಲಿ ಎಂಬುದೇ ಎಲ್ಲರ ಆಶಯ.
Buy Malenadina Rochaka Kathegalu ( Set Of 12 Books) Girimane Shyama rao

Click to buy on Amazon : Malenadina Rochaka Kathegalu
ಮಲೆನಾಡಿನ ರೋಚಕಕತೆಗಳ ಈ ಸರಣಿಯ ಯಾವುದೇ ಕೃತಿಗಳನ್ನಾಗಲೀ ಇಡೀ ಸೆಟ್ ಅಥವಾ ಬಿಡಿ ಬಿಡಿಯಾಗಿ ಕೊಳ್ಳುವವರಿಗೆ ಆಗಸ್ಟ್ ತಿಂಗಳ ಕೊನೆಯವರೆಗೂ 25% ರಿಯಾಯಿತಿಯಲ್ಲಿ ರಿಜಿಸ್ಟರ್ ಪೋಸ್ಟ್ ಮೂಲಕ ಮನೆಗೇ ಕಳಿಸಿಕೊಡಲಾಗುವುದು. ಆಸಕ್ತರು ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಅಡ್ರೆಸ್ ಕಳಿಸಬಹುದು. 9739525514 ನಂಬರಿಗೆ ಕರೆ ಮಾಡಬಹುದು. ಅದೇ ನಂಬರಿಗೆ ಗೂಗಲ್ ಪೇ ಮಾಡಬಹುದು.