ಪಶ್ಚಿಮಘಟ್ಟದ ತಪ್ಪಲಿನ ಸ್ವರ್ಗದಂತಹಾ ಮಾಳ, ದುರ್ಗ, ಮಲೆಬೆಟ್ಟು ಇಂತಹಾ ಪುಟ್ಟ ಪುಟ್ಟ ಊರುಗಳಲ್ಲಿ ಕಾಡು, ಹಸಿರು ಪರಿಸರದ ನಡುವಿನ ಸುತ್ತಾಟ, ಅಲ್ಲಿನ ಹಿರಿ- ಕಿರಿಯ ಜೀವಗಳ ಜೀವನದ ಕತೆ ಮುಂತಾದವುಗಳನ್ನು ಕಾಡಿಸುವ ಪುಟ್ಟ ಪುಟ್ಟ ಪರಿಸರ ಕಥಾನಕಗಳ ಸಂಗ್ರಹದ ಪುಸ್ತಕವೇ “ಒಂದು ಕಾಡಿನ ಪುಷ್ಪಕ ವಿಮಾನ”. ನಾವೂ ಇಂತದ್ದೊಂದು ಊರಲ್ಲಿ ಬದುಕಬೇಕಿತ್ತು ಎಂದೆನ್ನಿಸುವ, ಓದುತ್ತಾ ಹೋದಂತೆ ನಾವೇ ಆ ಊರುಗಳ ದಾರಿಯಲ್ಲಿ ನಡೆದಂತೆ, ಅಲ್ಲಿನ ಜೀವಗಳ ಮಧ್ಯೆ ನಾವೂ ಒಬ್ಬರಾದಂತೆ ಭಾವ ಮೂಡಿಸುತ್ತಾ ಹೋಗುತ್ತದೆ ಈ ಪುಸ್ತಕದ ಲೇಖಕ, ಯುವ ಬರಹಗಾರ “ಪ್ರಸಾದ್ ಶೆಣೈ ಆರ್.ಕೆ.” ಅವರ ಬರಹ ಶೈಲಿ.

ನಿಮಗೆ ಕಾಡು, ಪ್ರಕೃತಿ, ಪರಿಸರ ಇವೆಲ್ಲಾ ಇಷ್ಟವೆಂದಾದರೆ, ಅಥವಾ ನಿಮ್ಮೊಳಗೂ ಕಾಡು ಕಾಡಬೇಕೆಂದರೆ ಖಂಡಿತಾ ಒಮ್ಮೆಯಾದರೂ ಈ ಕೃತಿ ಓದಲೇಬೇಕು. ಇಲ್ಲಿ ಲೇಖಕರು ತಾವು ಹತ್ತಿದ ಬೆಟ್ಟಗಳು, ಸುತ್ತಿದ ಕಾಡುಗಳನ್ನು ವಿವರಿಸುತ್ತಾ ನಿಮ್ಮನ್ನೂ ಜೊತೆಗೇ ಕೊಂಡೊಯ್ಯುತ್ತಾರೆ. ಕಾಡೊಳಗೆ ಇಂದಿಗೂ ಇರುವ ಒಂದಿಷ್ಟು ಜೀವಗಳ, ಜೀವನಗಳ ಕತೆ ಇಲ್ಲಿದೆ. ಆ ಜನರ ಸುಖ ಕಷ್ಟಗಳ ಬಗ್ಗೆ, ಬದುಕು ಕೆಲವೊಮ್ಮೆ ಸ್ವರ್ಗವೂ ಹೌದು, ಇನ್ನು ಕೆಲವೊಮ್ಮೆ ನರಕವೂ ಆಗುವ ಬಗ್ಗೆ, ಕಾಡು ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಆಗುವ ಕಳವಳ, ನಮ್ಮ ಕರ್ತವ್ಯ, ಕಾಡನ್ನು ನುಂಗುತ್ತಿರುವ ಸಿರಿವಂತರ ರೆಸಾರ್ಟ್ ಗಳ ಬಗ್ಗೆ, ಎಸ್ಟೇಟ್ ಗಳ ಬಗ್ಗೆ ಎಚ್ಚರಿಕೆ, ಮುನ್ನೆಚ್ಚರಿಕೆ ಎಲ್ಲವೂ ಇದರಲ್ಲಿ ಇದೆ.

ಪುಸ್ತಕದ ಓದು ಮುಗಿಸಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರೆ ನಿಮ್ಮೊಳಗಿನ ಹಸಿರನ್ನು ಪ್ರೀತಿಸುವ, ಮಳೆಯೆಂದರೆ ಹಿಗ್ಗುವ, ನದಿ, ತೊರೆಗಳೆಂದರೆ ಓಡುವ ಪುಟ್ಟ ಜೀವ ಜಾಗೃತವಾಗಿರುತ್ತದೆ. ಆಗ ನೀವು ನಿಮ್ಮ ಸುತ್ತಮುತ್ತಲಿನ ಹಾಡುವ ಪಕ್ಷಿ, ಕೀಟ, ಪ್ರಕೃತಿಯ ಸಹಜ, ಸೌಂದರ್ಯ, ವಿವಿಧ ಸದ್ದು, ಕಾಡಿನ ಹಣ್ಣು, ದುಂಬಿಯ ಬಣ್ಣಗಳನ್ನು ನಿಮ್ಮಷ್ಟಕ್ಕೇ ಸೂಕ್ಷ್ಮವಾಗಿ ಗಮನಿಸತೊಡಗುತ್ತೀರಿ. ನಗರದ ಒತ್ತಡ-ಜಂಜಾಟಗಳನ್ನು ದೂರಗೊಳಿಸುವ ಹಸಿರಿನ ಊರಿಗೊಮ್ಮೆ ಸುತ್ತು ಹಾಕಬೇಕೆನಿಸುತ್ತದೆ. ಅದೇ ನಮ್ಮ ಬದುಕಾಗಬೇಕೆಂದೂ ಅನ್ನಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಪರಿಸರ ಪ್ರೇಮಿಗಳು, ಚಾರಣಾಸಕ್ತರು ಓದಲೇ ಬೇಕಾದ, ಎಲ್ಲರೂ ಓದಿ ನಮ್ಮ ಪರಿಸರದ ಬಗ್ಗೆ ಜಾಗೃತಿ ಹೆಚ್ಚಿಸಿಕೊಳ್ಳಲೇಬೇಕಾದ ಕಾರ್ಯ ಈ ಪುಸ್ತಕ ಮಾಡುತ್ತಿದೆ ಎನ್ನುವ ಕುರಿತು ಎರಡು ಮಾತಿಲ್ಲ.
ಪುಸ್ತಕ ಪರಿಚಯ :
ಪುಸ್ತಕ- ಒಂದು ಕಾಡಿನ ಪುಷ್ಪಕ ವಿಮಾನ
ಲೇಖಕರು- ಪ್ರಸಾದ್ ಶೆಣೈ ಆರ್.ಕೆ.
ಪ್ರಕಾಶಕರು- ಬೆನಕ ಬುಕ್ಸ್ ಬ್ಯಾಂಕ್, ಕೋಡೂರು
ದರ- ರೂ. 150
ಸಂಪರ್ಕ ಸಂಖ್ಯೆ- 7338437666
