| ವಿಚಾರಣೆಗಳು | ಮಾಹಿತಿಪೂರ್ಣ ವಿವರಗಳು |
|---|---|
| ಹೆಸರು | ಕೆ. ಶ್ರೀಪತಿ ಹಳಗುಂದ (K. Sripati Halagunda) |
| ಹುಟ್ಟಿದ ದಿನಾಂಕ | |
| ಹುಟ್ಟಿದ ಸ್ಥಳ | ಪಳಗುಂದ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
| ತಂದೆಯ ಹೆಸರು | ಕೃಷ್ಣಪ್ಪಗೌಡ |
| ತಾಯಿಯ ಹೆಸರು | ಗಂಗಮ್ಮ |
| ಉದ್ಯೋಗ | ಉಪನ್ಯಾಸಕ |
| ಶಿಕ್ಷಣ | ಎಂ.ಎ., ಪಿಎಚ್.ಡಿ. |
| ಹವ್ಯಾಸಗಳು | |
| ಪ್ರಕಟಿತ ಪುಸ್ತಕಗಳು | ಕಾವ್ಯಗಂಗೆ (ಕಾವ್ಯ)ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು (ವಿಮರ್ಶೆ) |
| ಇತರೆ ಪ್ರಮುಖ ಕೃತಿ | ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ (ಪಿಎಚ್.ಡಿ. ಮಹಾಪ್ರಬಂಧ) |
| ಪ್ರಶಸ್ತಿಗಳು | ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ |

ಕೆ. ಶ್ರೀಪತಿ ಹಳಗುಂದ – K. Sripati Halagunda ಪ್ರಾಧ್ಯಾಪಕರು, ಲೇಖಕರು, ವಿಮರ್ಶಕರು, ಅಂಕಣಕಾರರೂ ಆಗಿರುವ ಹಳಗುಂದ ರವರು ಶಿವಮೊಗ್ಗ ಜಿಲ್ಲೆಯ ಹೊಸನಗರ Hosanagara ತಾಲೂಕಿನ ನಗರ ಹೋಬಳಿಯ ಹಳಗುಂದದವರು. ತಂದೆ ಕೃಷ್ಣಪ್ಪಗೌಡ, ತಾಯಿ ಗಂಗಮ್ಮ.
ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಪದವಿ ಪೂರೈಸಿ, ತಮಿಳುನಾಡಿನ ಮಧುರೈ ಕಾಮರಾಜ ವಿ. ವಿ ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಪಡೆದಿರುತ್ತಾರೆ. ಕುವೆಂಪು ವಿ. ವಿ ಯಿಂದ ‘ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ’ ಎಂಬ ವಿಷಯದಲ್ಲಿ ಪಿಹೆಚ್. ಡಿ. ಪದವಿಯನ್ನು ಪಡೆದಿರುತ್ತಾರೆ. ಸ್ವಂತ ಕೃತಿಗಳು, ಸಂಶೋಧನೆ, ಸಂಪಾದನೆ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕೃತಿಗಳಲ್ಲಿ ತೊಡಗಿಸಿಕೊಂಡವರು. ಕತೆ, ಕವನ, ಪ್ರಬಂಧ, ಕಥಾನಕ, ನಾಟಕ, ವಿಮರ್ಶೆ ಇತ್ಯಾದಿ.
ಶೃಂಗೇರಿ ಕ್ಷೇತ್ರಕ್ಕೆ ಮಲಯಾಳಿಗಳ ವಲಸೆಯಿಂದಾದ ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆ ಎಂಬ ವಿಷಯಕ್ಕೆ ದೆಹಲಿಯ ಯು. ಜಿ. ಸಿ ವತಿಯಿಂದ ಧನ ಸಹಾಯ ಪಡೆದು ‘ವಲಸೆ’ ಎಂಬ ಕೃತಿಯನ್ನು ಹೊರತಂದಿರುತ್ತಾರೆ. ಈ ಕೃತಿಯು ಮಲಯಾಳಂ ಮತ್ತು ಆಂಗ್ಲ ಭಾಷೆಗೆ ಅನುವಾದಗೊಂಡಿರುತ್ತದೆ. ದೂರದರ್ಶನ, ರೇಡಿಯೋಗಳ ಚರ್ಚೆ, ಸಂವಾದಗಳಲ್ಲಿ ಭಾಗವಹಿಸುವ ಇವರು ಉತ್ತಮ ವಾಗ್ಮಿಗಳೂ ಹೌದು. ಇವರ ಚೊಚ್ಚಲ ಕೃತಿ ಕಾವ್ಯಗಂಗೆಯ ‘ಸುನಾಮಿಯ ಸುಳಿಯಲಿ’ ಎಂಬ ಕವಿತೆ ಮಂಗಳೂರು ವಿ. ವಿ. ಯ ದ್ವಿತೀಯ ಬಿ. ಎಸ್ಸಿ ವಿದ್ಯಾರ್ಥಿಗಳಿಗೆ (೨೦೨೨-೨೦೨೩) ಪಠ್ಯವಾಗಿದೆ.
‘ಕಾವ್ಯಗಂಗೆ’ ಕೃತಿಗೆ ಗದಗಿನ ಪಂಡಿತ್ ಪುಟ್ಟರಾಜ್ ಗವಾಯಿ ಪ್ರಶಸ್ತಿ, ‘ವಲಸೆ’ ಕೃತಿಗೆ ಬಳ್ಳಾರಿಯ ಕಾರಂತ ರಂಗಲೋಕ ಪ್ರಶಸ್ತಿ, ‘ಮಾತೆ ಮಂಡೋದರಿ’ ಎಂಬ ನಾಟಕ ಕೃತಿಗೆ ಹಾಸನದ ಮಾಣಿಕ್ಯ ಪ್ರಕಾಶನದ ಪ್ರಭಾವತಿ ಶೆಟ್ಟಿ ದತ್ತಿ ಪ್ರಶಸ್ತಿ, ‘ಬದುಕೆಂದರೆ’ ಕೃತಿಗೆ ಶಿಖಾ ಕಾವ್ಯ ಪುರಸ್ಕಾರ ದೊರೆತಿರುತ್ತದೆ. ‘ಮಾರಿಕೊಂಡವಳು’ ಕವನಕ್ಕೆ ಬೆಂಗಳೂರಿನ ಭಾರತೀಯ ಕರ್ನಾಟಕ ಸಂಘದ ತಂಗಮ್ಮ ನಾಗರಾಜರಾವ್ ದತ್ತಿ ಪ್ರಶಸ್ತಿ ಲಭಿಸಿದೆ.
ಕುವೆಂಪು ವಿ. ವಿಯ ಪದವಿ ಪರೀಕ್ಷಾ ಮಂಡಳಿಯ ಸದಸ್ಯತ್ವ ಸೇರಿದಂತೆ ಹಲವು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುತ್ತಾರೆ. ಇವರು ಹಂಪಿ ವಿ. ವಿ ಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಇವರ ಪ್ರಧಾನ ಸಂಪಾದಕತ್ವದ ‘ಭರಣ್ಯ’ ಎಂಬ ಕೃತಿ ಕೋಲ್ಕತ್ತಾದ ಶ್ರೀ ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯಕ್ಕೆ ಆಯ್ಕೆಯಾಗಿರುತ್ತದೆ. ಮತ್ತು ಹೊಸನಗರ ತಾಲೂಕಿನ ಸಾಂಸ್ಕೃತಿಕ ಸಂಕಥನದ ಪ್ರತಿನಿಧಿಯಾದ ‘ನಮ್ಮೂರ ಕಣಜ’ ಎಂಬ ಕೃತಿ ಇತ್ತೀಚೆಗೆ ಇವರ ಪ್ರಧಾನ ಸಂಪಾದಕತ್ವದಲ್ಲಿ ಬಿಡುಗಡೆಯಾಗಿರುತ್ತದೆ. ಇವರ ಕೆಲವು ಕೃತಿಗಳನ್ನು ಕುರಿತಂತೆ ಸಂಶೋಧನೆ ನಡೆದಿದೆ.
ಕನ್ನಡ ಪ್ರಭಾ, ವಿಜಯವಾಣಿ, ವಿಜಯ ಕರ್ನಾಟಕ, ಸುಧಾ, ಕರ್ಮವೀರ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ಅಂಕಣ, ಲೇಖನಗಳು ಪ್ರಕಟಗೊಂಡಿವೆ. ಕುವೆಂಪು ವಿ. ವಿಯ ಕನ್ನಡ ಪಠ್ಯ ಪುಸ್ತಕಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು ಇಪ್ಪತ್ತೈದು ವರ್ಷಗಳಿಂದ ಬೋಧಿಸುತ್ತಿರುವ ಇವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಹೊಸನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ವಾಸವಾಗಿದ್ದಾರೆ.
ಲೇಖಕರ ಇದುವರೆಗಿನ ಕೃತಿಗಳು – Sripati Halagunda Books List
1 ಕಾವ್ಯಗಂಗೆ-ಕವನಸಂಕಲನ (2006)
2 ಡಾ. ಕೆ. ಶಿವರಾಮ್ ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು-ಸಂಶೋಧನೆ (2006)
3 ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ-ಸಂಶೋಧನೆ (2008)
4 ಮಣ್ಣು ಮತ್ತು ಮನಸ್ಸು -ವಿಮರ್ಶೆ (2010)
5 ಗಂಗಮ್ಮ ಮತ್ತು ದುರ್ಗಮ್ಮ -ಪ್ರಬಂಧ (2013)
6 ಕೆಲವು ಕವಿಗಳ ಹಲವು ಕಾವ್ಯದೊಳಗೆ-ವಿಮರ್ಶೆ (2013)
7 ದೆವ್ವದ ಬೆರಳು -ಕಥಾ ಸಂಕಲನ (2014)
8 ವಿಚಾರ ಬಿಂಬ -ವಿಮರ್ಶೆ (2017)
9 ವಿಹಾರ -ವಿಮರ್ಶೆ (2019)
10 ವಿಚಾರ -ವಿಮರ್ಶೆ (2020)
11 ವಿನೂತನ -ಕವನ ಸಂಕಲನ(2020)
12 ವಿನಾಶ-ನಾಟಕ(2020)
13.ವಲಸೆ-ಸಂಶೋಧನೆ (2020)
14.ಆ ಏಳು ದಿನಗಳು-ಪ್ರಬಂಧಗಳು(2020)
15.ಮಾತೆ ಮಂಡೋದರಿ-ನಾಟಕ(2021)
16.ಹಳಗುಂದ-ಕಥಾನಕ(2021)
17.ಶಾಂತಿವನ-ಪ್ರಬಂಧ (2022)
18.ಚಿತ್ರ-ಚಿಂತನ-ಚಲನ ಚಿತ್ರಗಳ ವಿಮರ್ಶೆ (2024)
19.ವಿಲೋಚನ-ವಿಮರ್ಶೆ (2024)
20.ಬದುಕೆಂದರೆ -ಕವನ ಸಂಕಲನ(2024)
21.ಬೆನ್ನಿಗೆ ಬಿದ್ದ ಸಾಲುಗಳು-ವಿಮರ್ಶೆ (ಮುದ್ರಣದಲ್ಲಿ)
