Categories
Blogs Culture Malnad information

ಹೊಸ ಹುರುಪಿನ ಹಸಿರ ತೋರಣ ಮಲೆನಾಡ ಯುಗಾದಿ – Ugadi celebrations in Malenad

– ಬಿ.ಸಂ. ಸುವರ್ಚಲಾ

  • ಪ್ರಕೃತಿ ಹಚ್ಚ ಹಸುರಿನಿಂದ‌, ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುವ ಹಬ್ಬ ಯುಗಾದಿ.
  • ಮನೆ, ಮನಗಳಲ್ಲಿ ಹೊಸತನ, ಹೊಸಹುರುಪಿನ, ಹೊಸ ಯುಗದ ಆದಿ ಯುಗಾದಿ.

ಮಲೆನಾಡೆಂದರೆ ಹಸಿರಿನ ತೊಡುಗೆಯುಟ್ಟು, ಶುದ್ಧ ಗಾಳಿಯ ಪಸರಿಸುತ್ತಾ ಮನಸಿಗೆ ಮುದ ನೀಡುವ ಊರು. ಇಂತಹಾ‌ ಮಲೆನಾಡ ಮಡಿಲಿನಲಿ ಪ್ರಕೃತಿಯ ಹಬ್ಬ ಯುಗಾದಿಯ ಆಚರಣೆಯ ಸೊಗಸೇ ಬೇರೆ. ಪ್ರಕೃತಿ ಮಾತೆಯು ಹೊಸ ಚಿಗುರಿನಿಂದ, ಬಣ್ಣ ಬಣ್ಣದ ಹೂ- ಹಣ್ಣುಗಳನ್ನು ತುಂಬಿಕೊಂಡು ತುಂಬು ಗರ್ಭಿಣಿಯಂತೆ‌ ಕಾಣುವ ಸಂದರ್ಭದಲ್ಲಿ ಬರುವ ಹೊಸವರ್ಷದ ಹಬ್ಬ ಯುಗಾದಿ. ಇಲ್ಲಿ ಕೇವಲ ಒಂದು ಸಂವತ್ಸರ ಕಳೆದು ಇನ್ನೊಂದು ಸಂವತ್ಸರ ಬರುವುದಿಲ್ಲ. ಹಳೆತನದಿಂದ ಹೊಸತನದೆಡೆಗೆ ಜನರನ್ನು ಕರೆದೊಯ್ಯುತ್ತದೆ.

ಮಲೆನಾಡ ಯುಗಾದಿ ಸಂಭ್ರಮ

ಯುಗಾದಿ ಹಬ್ಬದ ಹಿಂದಿನ ಒಂದು ವಾರದಿಂದಲೇ ಮನೆಯಲ್ಲಿ ಹಬ್ಬದ ಸಂಭ್ರಮ ಆರಂಭವಾಗುತ್ತದೆ. ಮನೆಯ ಮೂಲೆ ಮೂಲೆಯೂ ಈ ಸಂದರ್ಭದಲ್ಲಿ ಶುಚಿಗೊಂಡು ಮನೆ ಪಳ ಪಳ ಹೊಳೆಯುತ್ತದೆ‌. ಹಬ್ಬದ ದಿನ ಬೆಳಗ್ಗೆ ಮನೆಮಂದಿಯೆಲ್ಲಾ ಬೆಳಗ್ಗೆ ಬೇಗ ಏಳುತ್ತಾರೆ. ಎಲ್ಲರಲ್ಲೂ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ‌.

ವಸಂತನ ಆಗಮನ ಮತ್ತು ಮನೆ ಮಂದಿಯ ಸಡಗರ

  • ಪ್ರಕೃತಿಯ ಹೊಸ ಉಲ್ಲಾಸದೊಂದಿಗೆ ಮನೆಮನಗಳಲ್ಲಿ ಹಬ್ಬದ ಕಳೆ

-> ವಸಂತನ ಆಗಮನಕ್ಕೆ ಪ್ರಕೃತಿಯೇ ಮೈಮನ ತುಂಬಿಕೊಂಡು ಹಚ್ಚ ಹಸಿರು ಸೀರೆ ಉಟ್ಟು ಸಂಭ್ರಮಿಸುವ ಕಾಲ. ಮಲೆನಾಡಿನ ಪ್ರತಿ ಮನೆಮನಗಳಲ್ಲೂ ಹೊಸ ವರ್ಷದ ಹಾಗೂ ಹೊಸತನದ ಸಡಗರ..! ಸಗಣಿ ಸಾರಿಸಿದ ಅಂಗಳ, ಬಣ್ಣ ಬಣ್ಣದ ರಂಗೋಲಿ, ಬಾಗಿಲಿಗೆ ಕಟ್ಟಿದ ಮಾವು-ಬೇವಿನ ತಳಿರು ತೋರಣಗಳು ಹಬ್ಬದ ಕಳೆ ಹೆಚ್ಚಿಸುತ್ತವೆ.

ಸಾಂಪ್ರದಾಯಿಕ ಪೂಜೆ ಪುರಸ್ಕಾರ ದೊಂದಿಗೆ ದೈವಿಕ ಭಕ್ತಿಯ ಅರ್ಪಣೆ

  • ಭಕ್ತಿಯ ಜೊತೆ ನೆಲಜಲದೊಂದಿಗಿನ ಅವಿನಾಭಾವ ಸಂಬಂಧ

ಹಬ್ಬದ ದಿನದಂದು ಕಳಸವನಿಟ್ಟು, ಆ ಕಳಸಕ್ಕೆ ಹೆಣ್ಣಿನಂತೆ ಶೃಂಗರಿಸಿ, ದೈವಿಕ ರೂಪ ಕೊಟ್ಟು ಮಲೆನಾಡಿನ ಹಣ್ಣು-ಹಂಪಲುಗಳ ನೈವೇದ್ಯದೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ, ಈ ಸಂದರ್ಭದಲ್ಲಿ ಮಲೆನಾಡಿಗರ ಮನದಲೂ ಮೂಡುವ ಭಾವನೆ ಒಂದೇ ಅದುವೇ ಇದು ಕೇವಲ ಹಬ್ಬವಲ್ಲ, ನಮ್ಮ ನೆಲ ಜಲದೊಂದಿಗೆ ನಮ್ಮ ಅವಿನಾಭಾವ ಸಂಬಂಧ.

ಹಬ್ಬದೂಟದ ಸಂಭ್ರಮ

  • ರುಚಿಯಾದ ಖಾದ್ಯಗಳು ಮತ್ತು ಮನೆ ಮಂದಿಯ ಬಾಂಧವ್ಯದ ಸಂಭ್ರಮ

ಹಬ್ಬವೆಂದರೆ ಹಬ್ಬದ ಅಡುಗೆಯೇ ಒಂದು ರೀತಿಯ ವಿಶೇಷ, ಅಡುಗೆಮನೆಯ ಘಮಘಮಿಸುವ ಪರಿಮಳ..! ಮೃದುವಾದ ಹೋಳಿಗೆ, ರುಚಿಯಾದ ಕೋಸಂಬರಿ, ಘಮಿಸುವ ಹಲಸಿನಕಾಯಿ ಪಲ್ಯ, ಪಾಯಸ… ಇದರೊಂದಿಗೆ ನುಗ್ಗೆಕಾಯಿ-ಬದನೆ-ಆಲೂಗಡ್ಡೆಯ ಸಮ್ಮಿಲನದಲ್ಲಿ ಆದ ವಿಶೇಷ ಸಾರು ಹಾಗೂ ದೋಸೆ. ಗೋವಿಗೆ ಮತ್ತು ಪಿತೃಗಳಿಗೆ ಭಕ್ತಿಯ ಎಡೆ ಅರ್ಪಿಸಿ, ಮನೆಯವರೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡುವುದೇ ಒಂದು ಸಂಭ್ರಮ.

ಯುಗಾದಿ ಚಂದ್ರನೊಂದಿಗೆ ಕಹಿ ಸಿಹಿಯ ಸಮ್ಮಿಲನ

  • ಮಾನವೀಯ ಸಂಬಂಧಗಳು ಹಾಗೂ ಪ್ರಕೃತಿಯೊಂದಿಗಿನ ಸಮ್ಮಿಲನ

ಕೇವಲ ಪೂಜೆ ಊಟದಲ್ಲಿ ಈ ಹಬ್ಬ ಮುಗಿಯುವುದಿಲ್ಲ, ಸಂಜೆಯ ಹೊತ್ತು ಮನೆ ಮಂದಿಯಲ್ಲ ಒಟ್ಟಾಗಿ, ನೆರೆಹೊರೆಯರೊಂದಿಗೆ ಊರಿನ ಯಾವುದೋ ಒಂದು ಬಯಲಿನಲ್ಲಿ ನಿಂತು, ಆ ಯುಗಾದಿ ಚಂದಿರನಿಗಾಗಿ ಕಾಯುವ ಆ ಕಾತುರವೇ ಒಂದು ರೀತಿಯ ಆನಂದ. ಬೆಳ್ಳಿಯ ಚಂದಿರ ಕಾಣಿಸಿಕೊಂಡಾಗ ಬೇವು-ಬೆಲ್ಲ ಹಂಚುತ್ತಾ, ಹಳೆಯ ಕಹಿ ಮರೆತು ಹೊಸ ಸಿಹಿಯನ್ನು ಹಂಚುವ ಈ ಸಂಪ್ರದಾಯ ಪ್ರಕೃತಿ ಮತ್ತು ಮನುಷ್ಯರ ನಡುವಿನ ಸುಂದರ ಸೇತುವೆ.

ಒಟ್ಟಾರೆಯಾಗಿ ಹಬ್ಬಗಳ ಹಿಂದಿನ ಉದ್ದೇಶವೇನಿದ್ದರೂ ಇವುಗಳು ನಾವು ನಮ್ಮವರು ಹಾಗೂ ಪ್ರಕೃತಿಯೊಂದಿಗೆ ಬೆರೆಯಲು ಒಂದು ಸುದಿನ ಎಂದರು ತಪ್ಪಾಗಲ್ಲ.

ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ ಆಚರಿಸುವ ಹೊಸಯುಗದ ಆದಿ ಯುಗಾದಿ. ಮುಂಬರುವ ಪರಾಭವ ಸಂವತ್ಸರ ಎಲ್ಲರ ಜೀವನದಲಿ ಹರುಷ ತರಲಿ. ಬೇವು ಬೆಲ್ಲಗಳಲಿ ಬೆಲ್ಲವೇ ಮೇಲಾಗಲಿ.

Advertisement
Advertisement Advertisement