Categories
Author Blogs Malnad information

ನಿಸರ್ಗದ ಸಾಕ್ಷಾತ್ ದೇವರಂತಿರುವ ಆಗುಂಬೆಯನ್ನು ಉಳಿಸಿಕೊಳ್ಳೋಣ, ಉಸಿರು ಬದುಕು ನೀಡಿದ ತಾಯಿಗೆ ಸಲ್ಲಿಸಬೇಡವೇ ಕೃತಜ್ಞತೆ

-ಪ್ರಸಾದ ಶೆಣೈ ಆರ್.ಕೆ.

ಕೆಲವು ವರ್ಷಗಳಲ್ಲಿ ಸಣ್ಣ ಪುಟ್ಟ ಭೂಕುಸಿತ, ಹವಾಮಾನ ಬದಲಾವಣೆಗಳಿಂದ ಆಗುಂಬೆ ಪರಿಸರ ಒಳಗೊಳಗೇ ಬದಲಾಗುತ್ತಿದೆ. ಎಲ್ಲಾ ಘಾಟಿ ರಸ್ತೆಗಳನ್ನು ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಬೇಕು ಎನ್ನುವ ಜನಪ್ರತಿನಿಧಿಗಳ ಯೋಚನೆಗಳು ಜಾಸ್ತಿಯಾಗುತ್ತಿದೆ. ಕೆಲವೊಂದು ಅಭಿವೃದ್ಧಿಗಳು ಅನಿವಾರ್ಯವಾದರೂ ಪರಿಸರವನ್ನು ಉಳಿಸಿ ಅಭಿವೃದ್ಧಿ ಮಾಡುವ ಗೋಜಿಗೆ ಯಾವ ಸರಕಾರಗಳೂ ಹೋಗುತ್ತಿಲ್ಲ. ಹೀಗಿರುವಾಗ “ಆಗುಂಬೆಗೆ ಸುರಂಗ ಮಾರ್ಗ” ಬೇಕು ಎನ್ನುವ ಬೇಡಿಕೆಯೊಂದನ್ನು ಸ್ಥಳೀಯ ಜನಪ್ರತಿನಿಧಿಗಳು ಹುಟ್ಟು ಹಾಕಿದ್ದಾರೆ. ಆಗುಂಬೆಯಲ್ಲಿ ದ್ವಿಪಥ ಸುರಂಗಮಾರ್ಗ, ದ್ವಿಪಥ ಹೆದ್ದಾರಿ ನಿರ್ಮಿಸಲು ಇದೀಗ ಕೇಂದ್ರ ಸರಕಾರ ಡಿಪಿಆರ್ ಆದೇಶ ಹೊರಡಿಸಲು ಮುಂದಾಗಿರುವುದು ಆಗುಂಬೆ ಎನ್ನುವ ಮಳೆಕಾಡು ಮುಂದೆ ನರಕವಾಗಲಿದೆ ಎನ್ನುವ ಭಯದ ಮನ್ಸೂಚನೆಯನ್ನು ಹುಟ್ಟುಹಾಕಿದೆ.
ಆಗುಂಬೆ ಮಳೆಕಾಡು ಸಾಮಾನ್ಯ ಕಾಡಲ್ಲ, ಯುನೆಸ್ಕೋ ಘೋಷಿಸಿದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಅತ್ಯಂತ ಸೂಕ್ಷ್ಮವಾದ ತಾಣವಿದು. ಕರಾವಳಿಗೂ, ಮಲೆನಾಡಿಗೂ ಆಗುಂಬೆಯೇ ಉಸಿರು. ನದಿ ತೊರೆಗಳನ್ನು ಜೀವಂತವಾಗಿರಿಸುವ ಪ್ರಕೃತಿಯ ಅನನ್ಯ ಬಟ್ಟಲಿದು. ಇಲ್ಲಿನ ಹುಲ್ಲು ಬೇರು ಬೀಳಲುಗಳ ವಿಶಾಲ ಜಾಲ, ಅಪರೂಪದ ಕಾಳಿಂಗ ಸರ್ಪ, ಪಕ್ಷಿ, ಸಸ್ಯಪ್ರಭೇಧ, ಕೀಟ, ಪ್ರಭೇದಗಳನ್ನು ವಿಶ್ವವೇ ಅಚ್ಚರಿಯಿಂದ ನೋಡುತ್ತಿದೆ. ನಮಗೆಲ್ಲಾ ದೊಡ್ಡ ರಕ್ಷಣಾ ಕವಚದಂತಿದೆ ನಮ್ಮ ಪ್ರೀತಿಯ ಆಗುಂಬೆ. ಈ ಆಗುಂಬೆ ಎಷ್ಟೊಂದು ಸೂಕ್ಷ್ಮವೆಂದರೆ, ಇಲ್ಲಿನ ಭೂಮಿಗೆ ಪುಟ್ಟ ಗಾಯವಾದರೂ ಕಾಡುಗಳೇ ಅಲ್ಲೋಲ ಕಲ್ಲೋಲವಾಗಬಹುದು, ಮಾನವ-ಪ್ರಾಣಿ ಸಂಘರ್ಘ ಜಾಸ್ತಿಯಾಗಬಹುದು, ಮಾಲಿನ್ಯದಿಂದ ಫಲತ್ತಾದ ಮಣ್ಣಿನ ಸಾರವೇ ಮುಂದೆ ನಾಶವಾಗಬಹುದು, ಅನಾದಿ ಕಾಲದಿಂದ ಇಲ್ಲಿ ಪ್ರಕೃತಿಯೇ ನಿರ್ಮಿಸಿದ ಒಂದು ನಿಗೂಢ ಜಾಲವಿದೆ. ಆ ಜಾಲವನ್ನು ಅಷ್ಟು ಸುಲಭಕ್ಕೆ ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಸುರಂಗ ಮಾರ್ಗದಿಂದ ಒಂದು ಸಣ್ಣ ಗಾಯವಾದರೂ ಆಗುಂಬೆಯ ಈ ನಿಗೂಢ ಜಾಲ ತನ್ನ ಕೊಂಡಿ ಕಳಚಿಕೊಳ್ಳುವ ಅಪಾಯವಿದೆ. ಮನುಷ್ಯನ ಸೂಕ್ಷ್ಮ ಚರ್ಮದಂತೆ ಇದು. ಚರ್ಮಕ್ಕೆ ಹಾನಿಯಾದರೂ ಜೀವ ವಿಲ ವಿಲ ಎನ್ನುವ ಹಾಗೆ, ಆಗುಂಬೆಯ ಚರ್ಮಕ್ಕೆ ಏಟಾದರೂ ಇಡೀ ಆಗುಂಬೆಯೇ ವಿಲವಿಲ ಎನ್ನುತ್ತದೆ.
ಸುರಂಗ ಮಾರ್ಗದಿಂದ ಆಗುಂಬೆ ಅಭಿವೃದ್ಧಿಯತ್ತ ಅಲ್ಲ, ಇನ್ನಷ್ಟು ವಿನಾಶದತ್ತ ಸಾಗಲಿದೆ. ಪಶ್ಚಿಮಘಟ್ಟವಿರುವ ರೈಲು ಮಾರ್ಗಗಳಲ್ಲಿ ಹೆಚ್ಚಿನ ಭೂಕುಸಿತ, ದುರಂತಗಳಾಗುತ್ತಿರುವ ಕುರಿತು, ಅಲ್ಲಿನ ಮೇಲ್ಮೈಗೆ ಹಾನಿಯಾಗದಂತೆ ಎಚ್ಚರವಹಿಸುವ ಕುರಿತು ಭೂಕುಸಿತ ಅಧ್ಯಯನ ಸಮಿತಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಮತ್ತೆ ಮತ್ತೆ ಪಶ್ಚಿಮಘಟ್ಟಕ್ಕೆ ಹಾನಿಮಾಡುವ ಯೋಜನೆಗಳ ಜಾರಿಗೆ ಸರಕಾರಗಳೇ ಮುಂದಾಗುತ್ತಿರುವುದು ದುರಂತ. ಆಗುಂಬೆಯ ಕಾಡುಗಳು ನಮಗೆ ಜಾಗತಿಕ ಹೆಮ್ಮೆಯಾಗಿದೆ. ಎಷ್ಟೋ ಪ್ರವಾಸಿಗರು ಎಲ್ಲಾ ಕಾಲದಲ್ಲೂ ಆಗುಂಬೆಯನ್ನು ಹುಡುಕಿಕೊಂಡು ಬರುತ್ತಾರೆಂದರೆ, ಆಗುಂಬೆಯ ಹಸಿರ ಮಡಿಲಿನಲ್ಲಿ, ಜಲಧಾರೆಗಳಲ್ಲಿ ಒಂದಷ್ಟು ಹೊತ್ತು ಕುಳಿತು ಖುಷಿಪಡುತ್ತಾರೆಂದರೆ ಅದು ಆಗುಂಬೆಯ ಅಸದೃಶ್ಯ, ಅಗಾಧ ನಿಸರ್ಗ ಸೌಂದರ್ಯಕ್ಕಾಗಿ ಮಾತ್ರ. ಈ ನಿಸರ್ಗ ಸಂಪತ್ತು ಇಲ್ಲಿ ಸಹಜವಾಗಿದೆ ಎನ್ನುವ ಬಹುಮುಖ್ಯ ಕಾರಣಕ್ಕೆ ಆಗುಂಬೆ ಎಲ್ಲರೊಳಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಈ ಅಸ್ತಿತ್ವವನ್ನು, ಸೌಂದರ್ಯವನ್ನು ಮಣ್ಣು ಮಾಡುವ ಶಕ್ತಿ ಸುರಂಗ ಯೋಜನೆಗಿದೆ. ಇಷ್ಟು ವರ್ಷ ಆಗುಂಬೆಯಿಂದ ಶುದ್ಧ ನೀರು, ಉಸಿರು, ನೆರಳನ್ನೆಲ್ಲಾ ಪಡೆದು ಈಗ ಆಗುಂಬೆಯನ್ನು ಬರಡಾಗಿಸುವ ಸುರಂಗ ಯೋಜನೆಯೊಂದು ಬರುತ್ತಿದೆ ಎಂದಾಗ ಆಗುಂಬೆಗೆ ಕೃತಜ್ಞತೆ ಸಲ್ಲಿಸುವುದಕ್ಕೋಸ್ಕರವಾದರೂ ನಮ್ಮ ಮಲೆನಾಡಿನ ಈ ಅದ್ಬುತ ಪ್ರಪಂಚವಾದ ಆಗುಂಬೆಯನ್ನು ಉಳಿಸಿಕೊಳ್ಳಬೇಕಿದೆ. ತಾಯಿಯನ್ನು ಮಕ್ಕಳೇ ಉಳಿಸಿಕೊಳ್ಳದಿದ್ದರೆ ಹೇಗೆ? ನಮಗೆ ಅನಾದಿ ಕಾಲದಿಂದ ನೆರಳು, ಬದುಕು ನೀಡುತ್ತಿರುವ ಆಗುಂಬೆಯ ಪರವಾಗಿ ನಾವು ಮಲೆನಾಡಿಗರೇ ನಿಲ್ಲದಿದ್ದರೆ ಮುಂದೆ ಆ ನೆರಳು, ಹಸಿರ ಉಸಿರು ಕಳೆದುಕೊಂಡು ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ. ದೇವರಂತಹ ಆಗುಂಬೆಯನ್ನು ಕಾಪಾಡೋಣ..

Advertisement
Advertisement Advertisement
Advertisement
Advertisement Advertisement
Advertisement
Advertisement Advertisement