– ಅಭಿ ತೀರ್ಥಹಳ್ಳಿ
ದಕ್ಷಿಣ ಭಾರತದ ಚೆರಾಪುಂಜಿ ಹಾಗೂ ಮಲೆನಾಡಿನ ಹೆಬ್ಬಾಗಿಲು ಎಂದೇ ಹೆಸರಾಗಿರುವ ನಮ್ಮ ಆಗುಂಬೆಯ ಅಸ್ತಿತ್ವ ಇಂದು ಭೀತಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಧಾಮದ ನಡುವೆ ಹಾದುಹೋಗುವ ಆಗುಂಬೆ ಘಾಟಿ ರಸ್ತೆ ಕೇವಲ ವಾಹನಗಳ ಓಡಾಟಕ್ಕಿರುವ ಸಂಪರ್ಕ ಮಾರ್ಗವಲ್ಲ, ಅದು ಅಸಂಖ್ಯಾತ ಜೀವಿಗಳ ಆವಾಸಸ್ಥಾನ ಮತ್ತು ಲಕ್ಷಾಂತರ ಜನರ ಬದುಕಿನ ಆಧಾರ. ಆದರೆ, ಈ ಸೂಕ್ಷ್ಮ ಪರಿಸರದಲ್ಲಿ ಸುರಂಗ ಮಾರ್ಗ, ದ್ವಿಪಥ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸುವ ಹೊಸ ಪ್ರಸ್ತಾವನೆಯು ಇದೀಗ ಪರಿಸರ ಪ್ರೇಮಿಗಳನ್ನು ಮತ್ತು ಸ್ಥಳೀಯರನ್ನು ತೀವ್ರ ಕಳವಳಕ್ಕೀಡು ಮಾಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ತರುತ್ತಿರುವ ಈ ಬೃಹತ್ ಯೋಜನೆಯು ಮುಂದೊಂದು ದಿನ ಭಾರಿ ವಿನಾಶಕ್ಕೆ ಕಾರಣವಾಗಲಿದೆಯೇ ಎಂಬ ಚರ್ಚೆ ಈಗ ಗಂಭೀರವಾಗಿ ನಡೆಯುತ್ತಿದೆ.

ಜಾಗತಿಕ ಜೀವವೈವಿಧ್ಯದ ನಕ್ಷೆಯಲ್ಲಿ ಆಗುಂಬೆಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿನ ದಟ್ಟ ಕಾನನಗಳು ಅಪರೂಪದ ಸಿಂಹಬಾಲದ ಸಿಂಗಳಿಕ ಹಾಗೂ ಕಾಳಿಂಗ ಸರ್ಪಗಳಿಗೆ ಆಶ್ರಯ ತಾಣ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಸಣ್ಣಪುಟ್ಟ ಜಲಮೂಲಗಳೇ ಕರಾವಳಿಯ ಜೀವನದಿಗಳಿಗೆ ವರ್ಷವಿಡೀ ನೀರುಣಿಸುತ್ತವೆ. ಮಲೆನಾಡಿನ ಶೃಂಗೇರಿ, ತೀರ್ಥಹಳ್ಳಿ, ಕೊಪ್ಪ ಸೇರಿದಂತೆ ಕರಾವಳಿಯ ಮಂಗಳೂರು, ಉಡುಪಿ ಭಾಗದ ಜನರ ಜೀವನಕ್ಕೂ ಈ ಪರಿಸರ ವ್ಯವಸ್ಥೆಯೇ ಆಧಾರ. ಇಲ್ಲಿನ ದಟ್ಟ ಅರಣ್ಯಗಳಿಂದಲೇ ನಮಗೆ ಉತ್ತಮ ಮಳೆ ಸಿಗುತ್ತಿದೆ. ಹೀಗಿರುವಾಗ, ನಮ್ಮ ಬದುಕಿನ ಜೀವನಾಡಿಯಾಗಿರುವ ಈ ಪ್ರಕೃತಿಯ ಅಡಿಪಾಯವನ್ನೇ ಕದಲಿಸುವಂತಹ ಯೋಜನೆಗಳ ಅಗತ್ಯವಿದೆಯೇ ಎಂದು ನಾವೆಲ್ಲರೂ ಪ್ರಶ್ನಿಸಿಕೊಳ್ಳಬೇಕಿದೆ.

ಈ ಸುರಂಗ ಮಾರ್ಗ ಹಾಗೂ ರಸ್ತೆ ವಿಸ್ತರಣೆ ಯೋಜನೆಯ ಹಿಂದೆ ಜನಪರ ಕಾಳಜಿಗಿಂತ ಹೆಚ್ಚಾಗಿ ಲಾಭಕೋರತನವೇ ಎದ್ದುಕಾಣುತ್ತಿದೆ ಎಂಬುದು ಸಾರ್ವಜನಿಕರ ಗಂಭೀರ ಆರೋಪ. ಕೇಂದ್ರ ಭೂಸಾರಿಗೆ ಸಚಿವಾಲಯದ ಟೆಂಡರ್ ಪ್ರಕ್ರಿಯೆ ಮತ್ತು ಶಿವಮೊಗ್ಗದ ಸಂಸದರ ಆಸಕ್ತಿಗಳೆಲ್ಲವೂ ಕೇವಲ ರಾಜಕೀಯ ಹಾಗೂ ಆರ್ಥಿಕ ಲಾಭಕ್ಕಾಗಿ ಎಂಬ ಅನುಮಾನಗಳು ದಟ್ಟವಾಗಿವೆ. ವಿವಾದಿತ ಎತ್ತಿನಹೊಳೆ ಯೋಜನೆಯ ಮಾದರಿಯಲ್ಲೇ ಇದೂ ಕೂಡ ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೇಬು ತುಂಬಿಸುವ ಮತ್ತೊಂದು ದಾರಿಯಂತಿದೆ. “ಪ್ರವಾಸೋದ್ಯಮದ ಅಭಿವೃದ್ಧಿ”, “ಸ್ಥಳೀಯರಿಗೆ ಅನುಕೂಲ” ಎಂಬಿತ್ಯಾದಿ ಸುಂದರ ಮಾತುಗಳಿಂದ ಈ ವಿನಾಶಕಾರಿ ನಡೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ, ಭವಿಷ್ಯದಲ್ಲಿ ಇದರ ನೇರ ದುಷ್ಪರಿಣಾಮ ಎದುರಿಸಬೇಕಾದವರು ಮಲೆನಾಡು ಮತ್ತು ಕರಾವಳಿಯ ಸಾಮಾನ್ಯ ಕೃಷಿಕರು ಹಾಗೂ ಇಲ್ಲಿನ ಮೂಕ ಪ್ರಾಣಿಗಳು.

ಭೌಗೋಳಿಕವಾಗಿ ಆಗುಂಬೆ ಘಾಟಿ ಅತ್ಯಂತ ಸೂಕ್ಷ್ಮ ಹಾಗೂ ಕಡಿದಾದ ಪ್ರದೇಶ. ಇಂತಹ ನಾಜೂಕಿನ ಬೆಟ್ಟಗಳಲ್ಲಿ ಭಾರಿ ಯಂತ್ರಗಳನ್ನು ಬಳಸಿ, ಸ್ಫೋಟಕಗಳನ್ನು ಸಿಡಿಸಿ ಭೂಮಿ ಕೊರೆಯುವುದು ದೊಡ್ಡ ಪ್ರಮಾದವಾಗಲಿದೆ. ಮಳೆಗಾಲದಲ್ಲಿ ಸಣ್ಣಪುಟ್ಟ ಗುಡ್ಡ ಕುಸಿತಗಳು ಇಲ್ಲಿ ಸಾಮಾನ್ಯ. ಅಂಥದ್ದರಲ್ಲಿ, ಬೃಹತ್ ಸುರಂಗ ಕೊರೆಯಲು ಬೆಟ್ಟಗಳನ್ನು ಅಗೆದರೆ ಇಡೀ ಪರ್ವತ ಶ್ರೇಣಿಯೇ ಅಸ್ಥಿರಗೊಳ್ಳುವ ಅಪಾಯವಿದೆ. ಇದು ಭವಿಷ್ಯದಲ್ಲಿ ಮಹಾ ದುರಂತಗಳಿಗೆ ದಾರಿಮಾಡಿಕೊಡಬಹುದು ಹಾಗೂ ಹಳ್ಳಿಗಳೇ ಕೊಚ್ಚಿಹೋಗುವ ಭೀತಿ ಹುಟ್ಟಿಸಿದೆ. ಕೋಟ್ಯಂತರ ರೂಪಾಯಿ ಸುರಿದು ಸುರಂಗ ಮಾಡಿದರೂ, ಮಳೆಗಾಲದ ಭೂಕುಸಿತಕ್ಕೆ ಅದು ಮುಚ್ಚಿಹೋಗುವ ಸಾಧ್ಯತೆಗಳೇ ಹೆಚ್ಚು. ಪ್ರಕೃತಿಯ ಜೊತೆ ಇಂತಹ ಅವೈಜ್ಞಾನಿಕ ಚೆಲ್ಲಾಟವಾಡುವುದು ಖಂಡಿತಾ ಒಳಿತಲ್ಲ.

ಈ ಯೋಜನೆಯಿಂದ ಎದುರಾಗುವ ಮತ್ತೊಂದು ದೊಡ್ಡ ವಿಪತ್ತು ಎಂದರೆ ಮಾನವ ಮತ್ತು ವನ್ಯಜೀವಿ ಸಂಘರ್ಷ. ಆಗುಂಬೆ ಕಾಳಿಂಗ ಸರ್ಪಗಳ ತವರೂರು. ಇಲ್ಲಿನ ಜನತೆ ಪ್ರಕೃತಿಯ ಮೇಲಿನ ಭಕ್ತಿ, ನಂಬಿಕೆಗಳಿಂದ ಕಾಡನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಆದರೆ, ರಸ್ತೆ ಮತ್ತು ಸುರಂಗದ ನೆಪದಲ್ಲಿ ಕಾಡು ನಾಶವಾದರೆ ಕಾಳಿಂಗ ಸರ್ಪಗಳು ಅನಿವಾರ್ಯವಾಗಿ ನಾಡಿಗೆ ಬರಲಿವೆ. ಇದರಿಂದ ಇದುವರೆಗೆ ಇರದಿದ್ದ ‘ಮಾನವ-ಕಾಳಿಂಗ ಸಂಘರ್ಷ’ ಶುರುವಾಗಬಹುದು. ಜೊತೆಗೆ, ಜೆಸಿಬಿಯಂತಹ ಭಾರಿ ಯಂತ್ರಗಳ ಸದ್ದಿಗೆ ಬೆದರುವ ಆನೆ, ಹುಲಿ, ಕಾಡು ಕೋಣಗಳು ತಮ್ಮ ಆವಾಸಸ್ಥಾನ ಕಳೆದುಕೊಂಡು ರೈತರ ಜಮೀನಿಗೆ ನುಗ್ಗುವುದು ಖಚಿತ. ಇದರಿಂದ ಕೃಷಿಕರ ಬದುಕು ಮತ್ತಷ್ಟು ಹೈರಾಣಾಗಲಿದೆ.
ಘಾಟಿಯ ಅಕ್ಕಪಕ್ಕ ಕಿರಿದಾದ ಜಾಗವಿದ್ದು, ರಸ್ತೆ ಅಗಲೀಕರಣವೇ ಕಷ್ಟಸಾಧ್ಯವಾಗಿರುವಾಗ ಪಾದಚಾರಿ ಮಾರ್ಗ ನಿರ್ಮಿಸುವ ಮಾತು ಹಾಸ್ಯಾಸ್ಪದ. ಈ ಹಠಮಾರಿತನದ ಯೋಜನೆಯಿಂದಾಗಿ ಅಮಾಯಕ ರೈತರ ಕೃಷಿಭೂಮಿ ಕಸಿದುಕೊಳ್ಳುವ ಅಥವಾ ಅವರನ್ನು ಒಕ್ಕಲೆಬ್ಬಿಸುವ ಅಪಾಯವೂ ಇದೆ. ಆದ್ದರಿಂದ, ಹೊಸ ಸುರಂಗ ಅಥವಾ ರಸ್ತೆ ಅಗಲೀಕರಣದ ಬದಲು, ಪ್ರಸ್ತುತ ಇರುವ ಘಾಟಿ ರಸ್ತೆಯನ್ನೇ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ಅತ್ಯಂತ ಜಾಣ್ಮೆಯ ಹೆಜ್ಜೆ. ಪ್ರತಿ ವರ್ಷವೂ ಗುಣಮಟ್ಟದ ಡಾಂಬರೀಕರಣ ಮಾಡಿ ರಸ್ತೆಯನ್ನು ಸುಸ್ಥಿತಿಯಲ್ಲಿಟ್ಟರೆ ಸಾಕು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಸೋಮೇಶ್ವರ ವನ್ಯಜೀವಿ ಧಾಮದಲ್ಲಿ ಡಿಪಿಆರ್ (DPR) ಮಾಡಲು ಅನುಮತಿ ನಿರಾಕರಿಸಬೇಕು. ಅಭಿವೃದ್ಧಿ ಎಂದರೆ ಪ್ರಕೃತಿಯ ವಿನಾಶವಲ್ಲ, ಬದಲಾಗಿ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವುದು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ..


