Categories
Author Blogs Books Kannada

ನಾವೆಲ್ಲರೂ “ಕಾಡಿನ ನೆಂಟರು”!!!

– ಅಭಿ ತೀರ್ಥಹಳ್ಳಿ Abhi Thirthahalli

ರಕ್ಷಿತ್ ತೀರ್ಥಹಳ್ಳಿ Rakshith Thirthahalliಯವರ “ಕಾಡಿನ ನೆಂಟರು Kadina Nentaru” ಕಥಾಸಂಕಲನವು ಮಲೆನಾಡು ಎಂದರೆ ಕೇವಲ ಮಂಜು, ಮಳೆ ಮತ್ತು ದಟ್ಟ ಹಸಿರಿನ ರಮ್ಯಲೋಕವಲ್ಲ; ಅದರಾಚೆಗಿನ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ, ಅಸಹಾಯಕತೆ ಮತ್ತು ಬದಲಾಗುತ್ತಿರುವ ಬದುಕಿನ ಕಟು ವಾಸ್ತವಗಳ ತಾಣ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತದೆ. ಕುವೆಂಪು ಮತ್ತು ತೇಜಸ್ವಿಯವರ ಕಾಲದ ಮಲೆನಾಡಿನ ಚಿತ್ರಣಕ್ಕೂ, ಇಂದಿನ ಮಲೆನಾಡಿನ ವಾಸ್ತವಕ್ಕೂ ಇರುವ ಕಂದಕವನ್ನು ಈ ಕೃತಿ ನಿರ್ದಾಕ್ಷಿಣ್ಯವಾಗಿ ಕಟ್ಟಿಕೊಡುತ್ತದೆ. ರಕ್ಷಿತ್ ರವರು ಇಲ್ಲಿ ಕೇವಲ ಕಥೆಗಾರರಾಗಿ ಉಳಿಯದೆ, ಕಳೆದುಹೋಗುತ್ತಿರುವ ಮಲೆನಾಡಿನ ಅಸ್ಮಿತೆಯ ಸಾಕ್ಷಿಪ್ರಜ್ಞೆಯಾಗಿ ನಿಲ್ಲುತ್ತಾರೆ. ಹೊಟ್ಟೆಬಾಕ “ಗುಂಡನ ಭೂತ”ದಿಂದ ಆರಂಭವಾಗುವ ಈ ಕಥಾಯಾನವು, ಮುಗ್ಧ ಜನರ ದೈನಂದಿನ ಬದುಕು, ಕಾಡಿನೊಂದಿಗಿನ ಅವರ ಅವಿನಾಭಾವ ಸಂಬಂಧ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಎದುರು ಅವರು ಹೇಗೆ ತಮ್ಮದೇ ನೆಲದಲ್ಲಿ ಪರಕೀಯರಾಗುತ್ತಿದ್ದಾರೆ ಎಂಬ ಆತಂಕಕಾರಿ ಸತ್ಯವನ್ನು ಓದುಗರ ಮುಂದಿಡುತ್ತದೆ.

ಅಭಿವೃದ್ಧಿ ಮತ್ತು ನಗರಗಳ ದಾಹವು ಮಲೆನಾಡನ್ನು ಹೇಗೆ ನುಂಗಿಹಾಕುತ್ತಿದೆ ಎಂಬುದನ್ನು ಕೃತಿಯ ಹಲವು ಕಥೆಗಳು ಗಂಭೀರವಾಗಿ ಪ್ರಶ್ನಿಸುತ್ತವೆ. ಕಾಳೇಗೌಡ ಹಾಗೂ ದೇವಂತ್ ನಿರ್ಮಿಸುವ “ಹಸಿರು ನೆರಳು” ರೆಸಾರ್ಟ್‌ನ ಹಿನ್ನೆಲೆಯಲ್ಲಿ ನಡೆಯುವ ಮರಗಳ ಮಾರಣಹೋಮ ಕೇವಲ ಕಲ್ಪನೆಯಲ್ಲ, ಅದು ಇಂದಿನ ಪಶ್ಚಿಮ ಘಟ್ಟಗಳ ಎದೆಯ ಮೇಲಿನ ಗಾಯ. ಹಾಗೆಯೇ, ದೂರದ ಬೆಂಗಳೂರಿಗೆ ಶರಾವತಿಯ ನೀರನ್ನು ಹರಿಸುವ ಸರ್ಕಾರದ ಅವೈಜ್ಞಾನಿಕ ಯೋಜನೆಯ ವಿರುದ್ಧ ಶರಾವತಿ ಮತ್ತು ಸುಧೀರ್ ನೇತೃತ್ವದಲ್ಲಿ ಪುಟಿದೇಳುವ ಊರಿನವರ ಪ್ರತಿಭಟನೆ, ನಗರಗಳಿಗಾಗಿ ಹಳ್ಳಿಗಳು ಹೇಗೆ ಬಲಿಯಾಗುತ್ತಿವೆ ಎಂಬುದರ ಜ್ವಲಂತ ನಿದರ್ಶನವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಕಾಡನ್ನೇ ನಂಬಿ ಬದುಕುತ್ತಿದ್ದ ಜೇಡಿಗದ್ದೆಯ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಹುನ್ನಾರ ಮತ್ತು ಇದರ ವಿರುದ್ಧ ಹೋರಾಡುವ ನರೇಂದ್ರ ಹಾಗೂ ಸುಕನ್ಯಾ ಕೊನೆಗೆ ವ್ಯವಸ್ಥೆಯ ಕೈಯಲ್ಲಿ ‘ನಕ್ಸಲ್’ ಎಂಬ ಹಣೆಪಟ್ಟಿ ಹೊತ್ತು ದುರಂತ ಅಂತ್ಯ ಕಾಣುವುದು ನಮ್ಮ ವ್ಯವಸ್ಥೆಯ ಅಣಕದಂತಿದೆ. ಈ ಮೂಲಕ ‘ಕಾಡಿನ ನೆಂಟರು’ ಎಂಬ ಶೀರ್ಷಿಕೆ ಕೇವಲ ಪ್ರಾಣಿಗಳಿಗಲ್ಲ, ಕಾಡನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಅಸಹಾಯಕ ಮೂಲನಿವಾಸಿಗಳಿಗೂ ಅನ್ವಯಿಸುತ್ತದೆ ಎಂಬುದನ್ನು ರಕ್ಷಿತ್ ರವರು ಅತ್ಯಂತ ಮಾರ್ಮಿಕವಾಗಿ ವಿವರಿಸುತ್ತಾರೆ.

Advertisement
Advertisement Advertisement

ಕೇವಲ ಪರಿಸರದ ನಾಶವಷ್ಟೇ ಅಲ್ಲ, ಮಲೆನಾಡಿನ ಜನರ ನಂಬಿಕೆ, ಧರ್ಮ ಸಂಕಟ ಮತ್ತು ಬದುಕಿನ ಮೂಲಸೌಕರ್ಯಗಳ ಕೊರತೆಯನ್ನೂ ಕೃತಿಯು ಆಳವಾಗಿ ಶೋಧಿಸಿದೆ. ನವೀನನ ಈಡಿಗೆ ಬಲಿಯಾಗುವ “ನಾಗ ನವಿಲ”, ಧರ್ಮದ ಗೊಂದಲಕ್ಕೆ ಸಿಲುಕುವ ಪ್ರವೀಣ ಮತ್ತು ಆದರ್ಶ-ಶಿಬಾಳ ಪ್ರೇಮಕಥೆಯನ್ನು ಹೇಳುವ “ಶಿಲುಬೆ” ಕಥೆಗಳು ಮನುಷ್ಯನ ಆಂತರಿಕ ತಲ್ಲಣಗಳನ್ನು ಅನಾವರಣಗೊಳಿಸುತ್ತವೆ. ಇನ್ನೊಂದೆಡೆ, ಕಾಳಿಂಗ ಸರ್ಪಗಳ ಅಧ್ಯಯನ ಮಾಡುವ ವಿಜಯಕುಮಾರ್ ಮತ್ತು ಹೀತಾಳ ಪ್ರಸಂಗವು, “ಮನುಷ್ಯ ಅವನವನ ನಂಬಿಕೇಲೆ ಬದುಕೋದು, ಬದಲಾವಣೇನು ಅವ್ನೇ ತಂದ್ಕೊಬೇಕು” ಎಂಬ ತಾತ್ವಿಕ ಸತ್ಯವನ್ನು ಬಿಚ್ಚಿಡುತ್ತದೆ. ಮಲೆನಾಡಿನ ಮಳೆಗಾಲದ ಸಾರ ದಾಟುವ ಕಷ್ಟವನ್ನು ಹೇಳುವ “ಕಟ್ಟೆಮನೆ ಸಾರ”ದ ಕಥೆಯಲ್ಲಿ, ಹಳ್ಳ ದಾಟಲಾಗದೆ ಪ್ರಾಣ ತೆರುವ ಇಂಚರಳ ದುರಂತ ಅಕ್ಷರಶಃ ಮನಕಲಕುತ್ತದೆ. ಇಂಚರಳ ಸಾವಿನ ನಂತರವಷ್ಟೇ ಎಚ್ಚೆತ್ತುಕೊಂಡು ಕಟ್ಟುವ “ಇಂಚರ ಸೇತುವೆ”, ಹಳ್ಳಿಗಳ ಅಭಿವೃದ್ಧಿಗೆ ಜೀವಬಲಿಯೇ ಬೇಕೆಂಬ ಸರ್ಕಾರದ ಅಸಡ್ಡೆಯನ್ನು ಪ್ರಶ್ನಿಸುತ್ತದೆ. ಈ ಎಲ್ಲಾ ಗಂಭೀರ ವಿಚಾರಗಳ ನಡುವೆಯೂ ತಿಮ್ಮ ಹುಡುಕುವ ಮೊಟ್ಟೆಗಳು ಮತ್ತು ಸುಬ್ಬ ಹಿಡಿದುತರುವ ಸೋಸಲು ಮೀನಿನ ಕಟ್ಟುಗ್ ಸಾರಿನಂತಹ ಪ್ರಸಂಗಗಳು ಮಲೆನಾಡಿನ ಸಹಜ ಗ್ರಾಮೀಣ ಜೀವನದ ಜೀವಂತಿಕೆಯನ್ನು ಉಳಿಸಿಕೊಂಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, “ಕಾಡಿನ ನೆಂಟರು” ಕೇವಲ ಓದಿ ಮರೆಯುವ ಕಥೆಗಳ ಗುಚ್ಛವಲ್ಲ, ಬದಲಾಗಿ ನಮ್ಮ ಸುತ್ತಲಿನ ಪರಿಸರ ಮತ್ತು ಮನುಷ್ಯ ಸಂಬಂಧಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುವ ಮಹತ್ವದ ಕೃತಿ. ರಕ್ಷಿತ್ ರವರ ನಿರೂಪಣಾ ಶೈಲಿಯು ಓದುಗರನ್ನು ತೀರ್ಥಹಳ್ಳಿಯ ದಟ್ಟ ಕಾಡು, ಅಂಬುತೀರ್ಥದ ಇತಿಹಾಸ, ಹಳ್ಳ-ಕೊಳ್ಳ ಮತ್ತು ಅಡಿಕೆ ತೋಟಗಳ ನಡುವೆ ಖುದ್ದಾಗಿ ನಡೆದಾಡಿದಂತಹ ನೈಜ ಅನುಭವವನ್ನು ನೀಡುತ್ತದೆ. ರಕ್ಷಿತ್ ತೀರ್ಥಹಳ್ಳಿಯವರು ತಾವು ಕಂಡ ವಾಸ್ತವವನ್ನು ಎಲ್ಲೂ ಉತ್ಪ್ರೇಕ್ಷೆಯಿಲ್ಲದೆ, ಕೃತಕತೆಯಿಲ್ಲದೆ ಕಾಗದಕ್ಕಿಳಿಸಿದ ರೀತಿ ಕೃತಿಯ ತೂಕವನ್ನು ಹೆಚ್ಚಿಸಿದೆ. ಕಥೆಯ ಕೊನೆಯಲ್ಲಿ ಬರುವ ಶ್ರೀನಿವಾಸನ ಮಾತಿನಂತೆ, ನಾವೆಲ್ಲರೂ ಈ ವಿಶಾಲ ಪ್ರಕೃತಿಯ “ಕಾಡಿನ ನೆಂಟರು” ಎಂಬ ಸತ್ಯವನ್ನು ಅರಿತುಕೊಳ್ಳುವಲ್ಲಿ ರಕ್ಷಿತ್ ರವರ ಶ್ರಮ ಸಾರ್ಥಕವಾಗಿದೆ. ಇದು ಇಂದಿನ ಮಲೆನಾಡಿನ ಬೆತ್ತಲೆ ಸತ್ಯವನ್ನು ಎತ್ತಿಹಿಡಿಯುವ ಅತ್ಯಮೂಲ್ಯ ದಾಖಲೆಯಾಗಿದೆ.

Advertisement
Advertisement Advertisement
Advertisement
Advertisement Advertisement