Categories
Author Books Poornachandra Tejaswi Thirthahalli

ಪ್ರಕೃತಿ, ವಿಜ್ಞಾನ ಮತ್ತು ಮಲೆನಾಡಿನ ಬದುಕಿನ ಮುಖಾಮುಖಿಯೇ ಕರ್ವಾಲೊ!

-ಅಭಿ ತೀರ್ಥಹಳ್ಳಿ Abhi Thirthahalli

“ಕರ್ವಾಲೊ Karvalo”, ಪೂರ್ಣಚಂದ್ರ ತೇಜಸ್ವಿ Purnachandra Tejaswi ಯವರ ಕೇವಲ ಒಂದು ರೋಚಕ ಕಾದಂಬರಿಯಲ್ಲ, ಬದಲಾಗಿ ಮಲೆನಾಡಿನ ಸಾಮಾಜಿಕ, ಪಾರಿಸರಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡುವ ಒಂದು ಮಹತ್ವದ ಕೃತಿ. ತೇಜಸ್ವಿಯವರ ಕೃತಿಗಳಲ್ಲಿ ನಾನು ಮೊದಲು ಓದಿದ ಹಾಗೂ ನನ್ನನ್ನು ಅತಿ ಹೆಚ್ಚು ಕಾಡಿದ ಪುಸ್ತಕವಿದು. ಇದನ್ನು ನಾನು ಐದು ಬಾರಿ ಓದಿರುವೆ. ಪ್ರತಿ ಬಾರಿಯೂ ಕೃತಿಯು ಹೊಸದೊಂದು ದೃಷ್ಟಿಕೋನವನ್ನು ತೆರೆದಿಡುತ್ತಲೇ ಹೋಗುತ್ತದೆ. ಕೇವಲ ಮಲೆನಾಡನ್ನು ರಮ್ಯವಾಗಿ, ಆದರ್ಶಮಯವಾಗಿ ಚಿತ್ರಿಸುವ ಸಾಂಪ್ರದಾಯಿಕ ಸಾಹಿತ್ಯದ ಹಾದಿಯನ್ನು ಬಿಟ್ಟು, ಮೂಡಿಗೆರೆಯ ಪೇಟೆಯ ಇಕ್ಕೆಲಗಳಿಂದ ಹಿಡಿದು ಪಶ್ಚಿಮದ ಸಹ್ಯಾದ್ರಿ ಪರ್ವತ ಶ್ರೇಣಿಯ ಕೊಟ್ಟ ಕೊನೆಯ ಅಂಚಿನವರೆಗಿನ ಒರಟು ವಾಸ್ತವವನ್ನು ತೇಜಸ್ವಿಯವರು ಇಲ್ಲಿ ನಿರ್ದಾಕ್ಷೀಣ್ಯವಾಗಿ ಬಿಚ್ಚಿಟ್ಟಿದ್ದಾರೆ. ಮಲೆನಾಡಿನ ದಟ್ಟ ಹಸಿರಿನ ನಡುವೆ ಬದುಕುವ ಜನರ ದೈನಂದಿನ ಹೋರಾಟ, ಅಲ್ಲಿನ ಪ್ರಕೃತಿಯ ಅನಿಶ್ಚಿತತೆ ಇವೆಲ್ಲವೂ ಇಲ್ಲಿನ ಭೌಗೋಳಿಕ ವರ್ಣನೆಯಲ್ಲೇ ಬೆರೆತುಹೋಗಿದೆ.

ಈ ಕಾದಂಬರಿಯ ವಿಶಿಷ್ಟತೆಯಿರುವುದು ಅದರ ಭಾಷಿಕ ಬಂಡಾಯ ಮತ್ತು ಹಸಿಹಸಿ ನೈಜತೆಯಲ್ಲಿ. ತೇಜಸ್ವಿಯವರು ಕೆಳಸ್ತರದ ಜನರ ಬದುಕನ್ನು ಚಿತ್ರಿಸುವಾಗ ಯಾವುದೇ ಕೃತಕ ಸಭ್ಯತೆಯ ಮುಖವಾಡವನ್ನು ಬಳಸುವುದಿಲ್ಲ. ನಾನು ಗಮನಿಸಿದಂತೆ, ಈ ಕಾದಂಬರಿಯಲ್ಲಿ ಒಟ್ಟು ೪೯ ಬೈಗುಳಗಳ ಬಳಕೆಯಾಗಿದೆ. ಅದರಲ್ಲಿ ೮ ಹಿಂದಿ (“ಥುತ್ತೇರಿ, ಸುವರ್ ಕ ಬೊಮ್ಡಾ”, “ಬಾಂಚೊತ್”) ಹಾಗೂ ಒಂದು ಆಂಗ್ಲ ಭಾಷೆಯ ಪದವನ್ನು (“ರಾಸ್ಕಲ್”) ಬಳಸಲಾಗಿದ್ದು, ಉಳಿದದ್ದೆಲ್ಲಾ “ಈ ಮುಂಡೇಮಗನಿಂದ ಅಂತ ಹೀನಮಾನ ಬಯ್ತಾಳೆ”, “ಮಂಗ ಸೂಳೇಮಗ”, “ನಿನ್ನ ಹಲ್ಮುರೀತೀನಿ ಹಜಾಮ” ಎಂಬಂತಹ ಅಪ್ಪಟ ಮಲೆನಾಡಿನ ಹಳ್ಳಿಗಾಡಿನ ಬೈಗುಳಗಳು. ಈ ಶಬ್ದಗಳು ಕೇವಲ ನಿಂದನೆಯಲ್ಲ, ಬದಲಾಗಿ ಆ ಜನರ ಬದುಕಿನ ಹತಾಶೆ, ಸಿಟ್ಟು ಮತ್ತು ಅಸಹಾಯಕತೆಯ ದ್ವನಿಗಳಾಗಿವೆ. ಇದರ ಜೊತೆಗೆ, ಎಂಗ್ಟನ ಹೆಂಡತಿ ಮಗುವಿಗೆ ಹಾಲುಣಿಸುವ ದೃಶ್ಯವನ್ನು ವಿವರಿಸುವಾಗ, ಕುಪ್ಪಸವಿಲ್ಲದೆ ಜೋಲು ಬಿದ್ದಿದ್ದ ಅವಳ ಮೊಲೆಗಳನ್ನು ಮಗು ಗುಡುಗುಡಿ ಸೇಧಿದಂತೆ ಚೀಪಲಾರಂಭಿಸಿತು ಎಂದು ವರ್ಣಿಸುವಲ್ಲಿ, ಓದುಗರಿಗೆ ಮುಜುಗರವಾದರೂ ಸರಿ, ಆ ಬಡತನದ ರೌದ್ರ ವಾಸ್ತವವನ್ನು ನೇರವಾಗಿಯೇ ವರ್ಣಿಸುವ ತೇಜಸ್ವಿಯವರ ದಿಟ್ಟತನ ಎದ್ದುಕಾಣುತ್ತದೆ.

Advertisement
Advertisement Advertisement

ಕಾದಂಬರಿಯು ಕೇವಲ ಕಾಡಿನ ವರ್ಣನೆಗೆ ಸೀಮಿತವಾಗದೆ, ವ್ಯವಸ್ಥೆಯ ಹುಳುಕುಗಳ ಮೇಲೆ ಬೆಳಕು ಚೆಲ್ಲುವ ಗಂಭೀರ ವಿಮರ್ಶೆಯಾಗಿಯೂ ಕೆಲಸ ಮಾಡುತ್ತದೆ. ಜೀವನೋಪಾಯಕ್ಕಾಗಿ ಅನೈತಿಕವಾಗಿ ಶರಾಬು ತಯಾರಿಸುವುದು, ಕಾಡನ್ನೇ ನಂಬಿ ಬದುಕುತ್ತಿದ್ದರೂ ಬಡತನ ಮತ್ತು ಅಜ್ಞಾನದಿಂದಾಗಿ ಹಣಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುವ ಎಂಗ್ಟ ಹಾಗೂ ಕರಿಯಪ್ಪನ ಪಾತ್ರಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತವನ್ನು ಎತ್ತಿ ತೋರಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಕಾಡಿನ ಗಾರ್ಡ್‌ಗಳ ಕೆಂಗಣ್ಣಿನಿಂದ ಬಚಾವಾಗಲು ಅನಿವಾರ್ಯವಾಗಿ ಸೆರಗು ಚಾಚುವಂತಹ ಎಂಗ್ಟನ ಹೆಂಡತಿಯ ಪ್ರಸಂಗವು, ಅಧಿಕಾರಶಾಹಿಯ ಮುಂದೆ ತಳಸಮುದಾಯದ ಶೋಷಣೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಇದರೊಟ್ಟಿಗೆ, ಮಲೆನಾಡಿನ ನಿರುದ್ಯೋಗಿ ಯುವಕರಿಗೆ ಹೆಣ್ಣು ಸಿಗದಂತಹ ಸಾಮಾಜಿಕ ಬಿಕ್ಕಟ್ಟನ್ನೂ ತೇಜಸ್ವಿಯವರು ಕಥೆಯ ಎಳೆಗಳಲ್ಲೇ ಅತ್ಯಂತ ನೈಸರ್ಗಿಕವಾಗಿ ಹೆಣೆದಿದ್ದಾರೆ. ಬದುಕು ಮತ್ತು ಸಮಾಜದ ಈ ಎಲ್ಲ ಸಂಕೀರ್ಣತೆಗಳೂ ಯಾವುದೇ ಭಾಷಣದ ಶೈಲಿಯಯಿಲ್ಲದೆ ಕಥೆಯ ಮೂಲಕವೇ ಓದುಗರಿಗೆ ತಟ್ಟುತ್ತವೆ.

ಈ ಎಲ್ಲ ಸಾಮಾಜಿಕ ಪಲ್ಲಟಗಳ ನಡುವೆ ಕಾದಂಬರಿಯು ಎತ್ತುವ ಬಹುದೊಡ್ಡ ತಾತ್ವಿಕ ಪ್ರಶ್ನೆ ಅಡಗಿರುವುದು ಮಂದಣ್ಣ ಮತ್ತು ಪ್ರೊ. ಕರ್ವಾಲೊ ನಡುವಿನ ಸಂಬಂಧದಲ್ಲಿ. ಸಾಂಸ್ಥಿಕ ಶಿಕ್ಷಣದ ಮೂಲಕ ಜಗತ್ತನ್ನೇ ಸುತ್ತಿ ಬಂದಿರುವ ದೊಡ್ಡ ವಿಜ್ಞಾನಿ ಕರ್ವಾಲೊ ಹಾಗೂ ಕಾಡಿನಲ್ಲಿ ಜೇನು ಕಡಿದು ಹೊಟ್ಟೆಹೊರೆಯುವ ಅನಕ್ಷರಸ್ಥ ಮಂದಣ್ಣನ ನಡುವಿನ ಸ್ನೇಹವು, ಆಧುನಿಕ ವಿಜ್ಞಾನ ಮತ್ತು ಮೂಲನಿವಾಸಿಗಳ ಅನುಭವ ಜ್ಞಾನದ ನಡುವಿನ ಮುಖಾಮುಖಿಯಾಗಿದೆ. ಕರ್ವಾಲೊರವರು ಮಂದಣ್ಣನ ಗ್ರಹಿಕಾ ಶಕ್ತಿಯನ್ನು ಗೌರವಿಸುವ ಮೂಲಕ, ಜ್ಞಾನವೆಂಬುದು ಕೇವಲ ವಿಶ್ವವಿದ್ಯಾಲಯಗಳ ಸ್ವತ್ತಲ್ಲ ಎಂಬುದನ್ನು ಸಾಬೀತುಪಡಿಸುತ್ತಾರೆ. ಇವರಿಬ್ಬರೂ ಸೇರಿ ನಡೆಸುವ ಮಿಲಿಯನ್ ವರ್ಷಗಳ ಹಿಂದಿನ ಜೀವಿಯಾದ ಆ ‘ಹಾರುವ ಓತಿ’ಯ ಶೋಧಕಾರ್ಯ ಕೇವಲ ಒಂದು ಸಾಹಸವಲ್ಲ, ಅದು ಮಾನವ ವಿಕಾಸ ಮತ್ತು ಪ್ರಕೃತಿಯ ನಿಗೂಢತೆಯ ಹುಡುಕಾಟ. ಇಷ್ಟೆಲ್ಲಾ ಓದಿದ ಮೇಲೆ, ಈ ಬೃಹತ್ ವಿಕಾಸದ ಹಾದಿಯಲ್ಲಿ ಕಾದಂಬರಿಯ ನಾಯಕ ಯಾರು? ಸಮಾಜದಿಂದ ತಿರಸ್ಕೃತನಾದರೂ ಪ್ರಕೃತಿಯ ಅರಿವಿರುವ ಮಂದಣ್ಣನೋ ಅಥವಾ ಕಾಲದ ಗರ್ಭದಲ್ಲಿ ಅಡಗಿರುವ ಆ ಹಾರುವ ಓತಿಯೋ ಎಂಬ ಪ್ರಶ್ನೆ ಓದುಗರನ್ನು ಕಾಡುತ್ತಲೇ ಇರುತ್ತದೆ.

Advertisement
Advertisement Advertisement
Advertisement
Advertisement Advertisement