Categories
Malnad Malnad information Rain Thirthahalli trekking

ಮುಂಗಾರಿನ ಮಡಿಲಲ್ಲಿ ಪ್ರಕೃತಿಯ ಆರಾಧನೆ – Rainathon Season 18

  • ಸಾತ್ವಿಕ ಸೌಂದರ್ಯದೊಂದಿಗೆ ಸಂಪನ್ನಗೊಂಡ ‘ರೈನಥಾನ್ ೧೮ ನೇ ಆವೃತ್ತಿ
  • ತೀರ್ಥಹಳ್ಳಿಯ ಪ್ರಕೃತಿಯ ಒಡಲಲ್ಲಿ, ಕಟ್ಟುನಿಟ್ಟಾದ ಪರಿಸರ ನಿಯಮಗಳೊಂದಿಗೆ ಯಶಸ್ವಿಯಾಗಿ ಜರುಗಿದ ವಿಶಿಷ್ಟ ಮುಂಗಾರು ನಡಿಗೆ

ಮಳೆಯೆಂದರೆ ಎಲ್ಲರಿಗೂ ಪ್ರೀತಿ. ಕೆಲವರಿಗೆ ಮಳೆಯಲ್ಲಿ ನೆನೆಯುವುದು ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಮಳೆಯನ್ನು ನೋಡುವುದೇ ಒಂದು ರೋಮಾಂಚನ. ಕೃಷಿ ಮನೆತನದ ಕುಟುಂಬಗಳಲ್ಲಿ‌ ಮಳೆಯಲ್ಲಿಯೇ ನೆನೆದು ಕೆಲಸ ಪೂರೈಸುವ ಅನಿವಾರ್ಯತೆ ಇರುತ್ತದೆ. ಹೀಗೆ, ಮಳೆ ಎಂಬ ವಿಸ್ಮಯ ಒಬ್ಬೊಬ್ಬರಿಗೆ ತನ್ನದೇ ರೀತಿಯಲ್ಲಿ ಸಂತೋಷವನ್ನು ತಂದುಕೊಡುತ್ತದೆ.

ಇದೇ ಮಳೆಯ ಆನಂದವನ್ನು ಸವಿಯಲು ತೀರ್ಥಹಳ್ಳಿಯಲ್ಲಿ ನಡೆದ “ರೈನಥಾನ್ ೧೮ನೇ ಆವೃತ್ತಿ – Rainathon Season 18” ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದೆ. ಬಹಳ ಉತ್ಸುಕತೆಯಿಂದ ಬೆಂಗಳೂರಿನಿಂದ ಆಗಮಿಸಿದ ಸಹಪಥಿಕರಾಗಲೀ ಅಥವಾ ಸುತ್ತಲ ಹತ್ತೂರುಗಳಿಂದ ನೇರವಾಗಿ ಬೇಸ್ ಕ್ಯಾಂಪ್‌ಗೆ ಬಂದವರಾಗಲೀ, ಎಲ್ಲರ ಪಾಲ್ಗೊಳ್ಳುವಿಕೆ ಈ ಬಾರಿಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಭರ್ಜರಿ ಪೂರ್ವ ತಯಾರಿ ಹಾಗೂ ಬೆಂಗಳೂರಿನಿಂದ ಯಾನ:

ರೈನಥಾನ್ ಎಂಬುದು ಕೇವಲ ಒಂದು ನಡಿಗೆಯಲ್ಲ, ಅದೊಂದು ಶ್ರೌತ ಯಜ್ಞ. ಇದರ ಪೂರ್ವ ತಯಾರಿ ಕೂಡಾ ಅಷ್ಟೇ ವಿಶೇಷವಾದುದು. ರೈನಥಾನ್ ಪಾಲಿಸಿಕೊಂಡು ಬಂದಿರುವ ನಿಯಮದಂತೆ ಪ್ರತೀ ಬಾರಿಯೂ ಹೊಸ ಸ್ಥಳದ ಶೋಧ, ಹೊಸ ಬಣ್ಣ ಹಾಗೂ ವಿನ್ಯಾಸದ ಸಮವಸ್ತ್ರಗಳ ಆಯ್ಕೆ ಇತ್ಯಾದಿ ತಯಾರಿಗಳು ಭರ್ತಿ ಎರಡು ತಿಂಗಳ ಹಿಂದೆಯೇ ಪ್ರಾರಂಭವಾಗುತ್ತದೆ.
ಬೆಂಗಳೂರಿನಿಂದ ಬಸ್‌ನಲ್ಲಿ‌ ಬರುವಾಗ, ಶುಚಿ-ರುಚಿಯಾದ ರಾತ್ರಿಯ ಊಟವನ್ನು ಅತ್ಯಂತ ಪ್ರೀತಿಯಿಂದ ಬಡಿಸಿ ಉಪಚರಿಸಿದ ಸನ್ಮಿತ್ರ ಹಾಗೂ ‘ಹರ್ಷ ಗ್ರಾಂಡ್ ಹೋಟೆಲ್’ ಮಾಲೀಕರಾದ ಹರ್ಷ ಮತ್ತು ಅವರ ಸಿಬ್ಬಂದಿವರ್ಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, “ಅವರ ಹೊಟ್ಟೆ ತಂಪಾಗಿರಲಿ” ಎಂದು ಹಾರೈಸುತ್ತಾ ರೈನಥಾನ್ ಪ್ರಯಾಣ ಮುಂದುವರೆಯಿತು.

ಪ್ರಕೃತಿಯ ಮಡಿಲಲ್ಲಿ ಬೇಸ್ ಕ್ಯಾಂಪ್:

ರೈನಥಾನ್ ಸೀಸನ್ ೧೮ರ ಬೇಸ್ ಕ್ಯಾಂಪ್ ಆಗಿ ತೀರ್ಥಹಳ್ಳಿ – Thirthahalli ಯ ಹುರುಳಿ ಬಳಿ ಇರುವ ‘ಚಿಂತಾಮಣಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ’ವನ್ನು ನಿಗದಿಪಡಿಸಲಾಗಿತ್ತು. ತೀರ್ಥಹಳ್ಳಿಯಿಂದ ಆಗುಂಬೆ – Agumbe ಗೆ ಹೋಗುವ ದಾರಿಯಲ್ಲಿ ನಾಲೂರು – Naaluru ಎಂಬ ಪ್ರದೇಶದಿಂದ ಒಳಗೆ ಸುಮಾರು 6 ಕಿ.ಮೀ. ದೂರದಲ್ಲಿ, ಸುಂದರ ಪ್ರಕೃತಿಯ ಮಧ್ಯೆ ಹಾಗೂ ಮುಳುಗಡೆಯ ಒಡಲಾಳದ ಪಕ್ಕದಲ್ಲಿಯೇ ಈ ಭವ್ಯವಾದ ದೇವಸ್ಥಾನವಿದೆ.
ಸುತ್ತಲೂ ಹಸಿರಿನಿಂದ ತುಂಬಿದ ಪ್ರದೇಶದಲ್ಲಿ ವಿಶಾಲವಾದ ಹುಲ್ಲುಗಾವಲು ಹಾಗೂ ಅದರ ತುಂಬಾ ಮೇಯುತ್ತಿರುವ ಮಲೆನಾಡು ಗಿಡ್ಡ ತಳಿಯ ಹಸುಗಳು ನಯನಾನಂದವನ್ನು ತಂದುಕೊಡುತ್ತವೆ. ಇದು ಬಹಳ ಹಳೆಯ ಹಾಗೂ ಕಾರಣಿಕ ದೇವಸ್ಥಾನ. ಅಲ್ಲಿನ ಛತ್ರದಲ್ಲಿ ಹಿಂದಿನ ರಾತ್ರೆಯೇ ಬಂದು ತಂಗಿದ್ದ ಬಾಣಸಿಗರ ತಂಡ ಹಾಗೂ ಕೆಲವು ರೈನಥಾನ್ ಸದಸ್ಯರು ಎಲ್ಲರ ಬರುವಿಕೆಗಾಗಿ ಕಾಯುತ್ತಿದ್ದರು. ಬೇಸ್ ಕ್ಯಾಂಪ್ ತಲುಪಿದ ಕೂಡಲೇ ಹಬೆಯಾಡುವ ಬಿಸಿ ಕಾಫಿ ಎಲ್ಲರ ಆಯಾಸವನ್ನು ದೂರ ಮಾಡಿತು.

ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಹಾಗೂ ಗಣ್ಯರ ಸನ್ಮಾನ:

ಬೆಳಗಿನ ಸಭಾ ಕಾರ್ಯಕ್ರಮದ ಕಲಾಪಗಳಲ್ಲಿ ತಂಡದ ಸದಸ್ಯರ ಭಾಗವಹಿಸುವಿಕೆ ಅತೀವ ಸಂತೋಷ ನೀಡಿತು. ಈ ರೈನಥಾನ್ ಸಭೆಯಲ್ಲಿ ವಿಶೇಷ ಸನ್ಮಾನಕ್ಕಾಗಿ ಹಿರಿಯರಾದ ಶ್ರೀಮತಿ ಪ್ರೇಮಲತಾ ಗುರುರಾಜ ರಾವ್ ಅವರನ್ನು ಆಹ್ವಾನಿಸಲಾಗಿತ್ತು. ಆಧ್ಯಾತ್ಮಿಕ ಚಿಕಿತ್ಸಕರಾದ ಇವರು, ಕಾಯಿಲೆಗಳಿದ್ದವರಿಗೆ ಕೇವಲ ಒಂದು ಲೋಟ ನೀರನ್ನು ಮಂತ್ರಿಸಿ ಕೊಡುವ ಮೂಲಕ ಎಲ್ಲ ಕಾಯಿಲೆಗಳನ್ನು ನಿವಾರಿಸುವ ವಿಶೇಷ ಶಕ್ತಿ ಹೊಂದಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ ಈ ಶಕ್ತಿ ಹೊಂದಿರುವ ಇವರು, ತಮಗೆ ಬಂದ ಕಾಣಿಕೆ ದುಡ್ಡಿನಲ್ಲಿ ಶಿಕಾರಿಪುರದಲ್ಲಿ ‘ಎರಡನೇ ಮಂತ್ರಾಲಯ’ವನ್ನೇ ನಿರ್ಮಿಸಿದ್ದಾರೆ. ಇಂತಹ ಮಹಾನ್ ಸಾಧಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವದಿಸಿದ್ದು ಎಲ್ಲರ ಸುಕೃತ.
ಅದೇ ವೇದಿಕೆಯಲ್ಲಿ ನಗೆ ಚುಟುಕು ಸಾಹಿತಿಗಳಾದ ರಾಘವೇಂದ್ರ ಗಾರ್ಡಗದ್ದೆ ಅವರನ್ನು ಸನ್ಮಾನಿಸಲಾಯಿತು. ಅವರು ತಮ್ಮ ನಗೆ ಚುಟುಕುಗಳ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಜೂನ್ 27 ರಂದು ಬಂಕಿಮಚಂದ್ರ ಚಟರ್ಜಿಯವರ ಜನ್ಮ ದಿನವಾಗಿದ್ದರಿಂದ, ವೇದಿಕೆ ಕಾರ್ಯಕ್ರಮದ ಆರಂಭದಲ್ಲಿ ಸ್ನೇಹಾ ಅವರು ‘ವಂದೇ ಮಾತರಂ’ ಹಾಡುವ ಮೂಲಕ ಆ ಶ್ರೇಷ್ಠ ಗೀತೆಯ ರಚನೆಕಾರರನ್ನು ಸ್ಮರಿಸಲಾಯಿತು. ನಾಲೂರು ಅರಣ್ಯ ಇಲಾಖೆಯಿಂದ ರಾಮ್ ಅವರು ಕೂಡಾ ಕಾರ್ಯಕ್ರಮದಲ್ಲಿ ಜೊತೆಯಾದರು. ಉಪಹಾರ ಮತ್ತು ಕಾಫಿ ಮುಗಿದ ನಂತರ ಎಲ್ಲರೂ ಗ್ರೂಪ್ ಫೋಟೋ ತೆಗೆಸಿಕೊಂಡು ನಡಿಗೆಗೆ ಸಜ್ಜಾದರು. ಮುಳುಗಡೆ ಪ್ರದೇಶದ ಒಡಲಾಳದಲ್ಲಿ ಕೆಲಕಾಲ ಕಳೆಯುವಾಗ ಮಳೆನೀರಿನ ಸೇಚನವಾದದ್ದು ವಿಶೇಷ ಖುಷಿ ನೀಡಿತು.

ಕಾಡುಹಣ್ಣುಗಳ ಸವಿಯೊಂದಿಗೆ ವಿಸ್ಮಯಕಾರಿ ನಡಿಗೆ:

ವಿಶಾಲವಾದ ಹುಲ್ಲುಗಾವಲಿನಲ್ಲಿ ವಿನೋದಮಯ ಆಟಗಳನ್ನು ಆಡಿ ಮುಂದೆ ಸಾಗಿದಾಗ ಕಿರಿದಾದ ಕಾಡಿನ ದಾರಿ ಎದುರಾಯಿತು. ಮುಳುಗಡೆಯ ಇತಿಹಾಸದ ಮುನ್ನ ಅಲ್ಲಿ ಹಲವರು ಜಮೀನು, ಗದ್ದೆ, ತೋಟಗಳನ್ನು ಹೊಂದಿದ್ದರು. ಅಲ್ಲಿಂದ ಮುಂದೆ ಸಾಗುವಾಗ ಪ್ರಕೃತಿಯ ಮಳೆಯ ಪ್ರೋಕ್ಷಣೆ ಜೊತೆಯಾಯಿತು. ತೈರೋಳಿ ಬ್ರಿಡ್ಜ್‌ನಿಂದ ಸೇತುವೆಯ ಇಕ್ಕೆಲಗಳಲ್ಲಿ ಕಾಣುವ ವಿಹಂಗಮ ನೋಟ ಮನಮೋಹಕವಾಗಿತ್ತು.


ನಡೆಯುವ ಹಾದಿಯಲ್ಲಿ ಆಯಾಸ ಕಳೆಯಲು ಜೀಪಿನಲ್ಲಿ ಬಂದ ಬಿಸಿ ಬಿಸಿ ಚಹಾ, ಡೀವಿಹಲಸಿನ ಬಜ್ಜಿ, ಪೇಡಾ ಮತ್ತು ಚಿಪ್ಸ್ ಎಲ್ಲರನ್ನೂ ಎದುರುಗೊಂಡಿತು. ಚಹಾ ವಿರಾಮದ ನಂತರ ಗಾರ್ಡಗದ್ದೆ ಕಡೆಗೆ ನಡಿಗೆ ಸಾಗಿತು. ಹಳ್ಳಿಯ ಚಿಕ್ಕ ರಸ್ತೆಯಲ್ಲಿ ಸಾಗುವಾಗ ಸಾಕಷ್ಟು ಕಾಡು ಹಣ್ಣುಗಳು ಸವಿಯಲು ಸಿಕ್ಕವು. ವಿಶೇಷವಾಗಿ ತೀರ್ಥಹಳ್ಳಿಯ ಮೀನಾಕ್ಷಿ ಹಣ್ಣು, ಗೊಂಚಲು ಗೊಂಚಲಾಗಿ ಬಿಟ್ಟಿರುವುದು ನೋಡಲು ಬಲು ಸೊಗಸು. ಜಂಬುನೇರಳೆಯ ರುಚಿಗೆ ಸಮೀಪವಿರುವ ಈ ಹಣ್ಣಿನ ಜೊತೆಗೆ ಚಿಕ್ಕ ಗಾತ್ರದ ನೇರಳೆಹಣ್ಣುಗಳು ಮತ್ತು ಕಿಸ್ಕಾರ ಹಣ್ಣುಗಳನ್ನು ಕಂಡಾಗ ರಾಮ-ಸೀತೆಯರ ವನವಾಸದ ಕಾಲದ ಪ್ರಕೃತಿಯ ವರ್ಣನೆ ನೆನಪಾಗಿ ಮನಸ್ಸು ಆ ಕಾಲಕ್ಕೆ ಓಡಿಬಂತು.

ಗಾರ್ಡಗದ್ದೆ ಶಾಲೆಯಲ್ಲಿ ವನಮಹೋತ್ಸವ ಹಾಗೂ ಭೋಜನ:

ಉತ್ತಮ ಮಳೆಯ ಸಾಥ್‌ನೊಂದಿಗೆ ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾ ಗಾರ್ಡಗದ್ದೆ ಶಾಲೆಗೆ ತಲುಪಿದರು. ಅಲ್ಲಿ ಅದಾಗಲೇ ‘ವನಮಹೋತ್ಸವ’ಕ್ಕೆ ಭರ್ಜರಿ ತಯಾರಿ ನಡೆಸಲಾಗಿತ್ತು. ಈ ಸುಂದರ ವ್ಯವಸ್ಥೆ ಮಾಡಿಕೊಟ್ಟ ಗಾರ್ಡಗದ್ದೆ ಶಾಲೆಯ ಮುಖ್ಯೋಪಾಧ್ಯಾಯರಾದ ಆನಂದ ಕುಮಾರ್, ಎಸ್‌ಡಿಎಂಸಿ ಸದಸ್ಯರಾದ ಯಜ್ಞನಾರಾಯಣ ಭಟ್ರು ಹಾಗೂ ಶಾಲಾ ಮಕ್ಕಳಿಗೆ ಅನಂತ ವಂದನೆಗಳು.


ವನಮಹೋತ್ಸವದ ನಂತರ ಶಾಲಾ ಆವರಣದಲ್ಲೇ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎಷ್ಟೇ ಕಷ್ಟಕರವಾದ ಜಾಗದಲ್ಲೂ ಅಚ್ಚುಕಟ್ಟಾಗಿ ಅಡುಗೆ ವ್ಯವಸ್ಥೆ ಮಾಡುವ ಸುನೀಲ್ ಗೋಖಲೆ ಶಿಶಿಲ ಹಾಗೂ ಅವರ ತಂಡಕ್ಕೆ ವಿಶೇಷ ನಮನಗಳು. ಜಿಲೇಬಿ ಸಹಿತ ಅನ್ನ, ಸಾರು, ಹುಳಿ, ಹುರುಳಿ ಚಟ್ನಿ, ಮತ್ತು ಮಜ್ಜಿಗೆಯ ಊಟ ಎಲ್ಲರಿಗೂ ಪರಮಾನಂದವನ್ನು ತಂದುಕೊಟ್ಟಿತು. ಬಳಿಕ ದಾರಿಯಲ್ಲಿ ಸುಷ್ಮಾ ರವಿಶಂಕರ್ ಅವರ ಮನೆಯ ಬಳಿ ಒಂದು ವ್ಯೂ ಪಾಯಿಂಟ್ ನೋಡಲು ಹೋದಾಗ, ಅವರ ಮನೆಯಲ್ಲಿರುವ ಶ್ರೀಪಾದ ಶ್ರೀವಲ್ಲಭರ ದರ್ಶನ ಪಡೆಯುವ ಅವಕಾಶ ಸಿಕ್ಕಿದ್ದು ಬಹಳ ವಿಶೇಷವಾಗಿತ್ತು.
ಅಲ್ಲಿಂದ ಕಟ್ಟಿನಮಡಿಕೆ ಕಡೆಗೆ ನಡೆದು, ವಾರಾಹಿ ನದಿಯಲ್ಲಿ ಬಹಳಷ್ಟು ಹೊತ್ತು ನೀರಾಟವಾಡಿ, ಸೂರ್ಯ ಮುಳುಗುವ ಮುನ್ನ ಬೇಸ್ ಕ್ಯಾಂಪ್ ಸೇರಿದಾಗ ಉಲ್ಲಸಿತ ಭಾವನೆ ಮನೆಮಾಡಿತ್ತು. ಕ್ಯಾಂಪ್ ತಲುಪಿ ಫ್ರೆಶ್ ಆಗುತ್ತಿದ್ದಂತೆ ಬಿಸಿ ಕಾಫಿ-ಚಹಾ ಸಿದ್ಧವಿತ್ತು.

ಸ್ಥಳೀಯರ ಅನ್ಯಾದೃಶ ಸಹಕಾರ:

ಈ ಬಾರಿಯ ರೈನಥಾನ್‌ನಲ್ಲಿ ಸ್ಥಳೀಯರ ಸಹಕಾರ ಬೆಲೆಕಟ್ಟಲಾಗದ್ದು. ಶ್ರೀರಾಮ್ ಅವರ ತಾಯಿ ಶಶಿಕಲಾ ಅವರು ಅತ್ಯಂತ ಪ್ರೇಮಮಯಿ, ಬೆಳಗ್ಗಿನಿಂದಲೇ ಎಲ್ಲ ಕೆಲಸಗಳಲ್ಲೂ ಕೈಜೋಡಿಸಿ ಬಡಿಸುವ ಕಾರ್ಯ ಮಾಡಿದರು. ಊರಿನ ಮುಖಂಡರಾದ ಮಾಲತಿ ಅವರು ಹಿಂದಿನ ದಿನವೇ ಬಂದು, ತಾವು ಬೆಳೆದ ಹಲಸಿನ ಹಣ್ಣು ಹಾಗೂ ಮನೆಯಲ್ಲಿಯೇ ಹಾಕಿದ ಉಪ್ಪಿನಕಾಯಿಯನ್ನು ತಂದುಕೊಟ್ಟರು. ಸಮಾರಂಭದ ದಿನ ಬೆಳಿಗ್ಗೆಯೇ ಮನೆ ಕೆಲಸ ಮುಗಿಸಿ ಭಾಗವಹಿಸಿದ್ದು ಹಳ್ಳಿಗಳಲ್ಲಿ ಇಂದಿಗೂ ಉಳಿದಿರುವ ಸಾಮರಸ್ಯವನ್ನು ಎತ್ತಿ ತೋರಿಸಿತು.
ಸುಷ್ಮಾ ಅವರು ಕೂಡಾ ಅಪರಿಚಿತರಾಗಿದ್ದರೂ ಮೊದಲ ಭೇಟಿಯಲ್ಲೇ ಅತ್ಯಂತ ಆತ್ಮೀಯರಾದರು (ಗುರುಬಂಧುತ್ವ ಹಾಗೂ ಆತ್ಮಬಂಧುತ್ವ). ಏನನ್ನೂ ನಿರೀಕ್ಷಿಸದೆ ಶುದ್ಧ ಅಂತಃಕರಣದಿಂದ ನಡೆದುಕೊಳ್ಳುವ ಇವರ ರೀತಿ ನಿಜಕ್ಕೂ ಅನುಕರಣೀಯ. ಈ ಎಲ್ಲಾ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ಶ್ರೀರಾಮ್ ಹಾಗೂ ರಾಘವೇಂದ್ರ ತೀರ್ಥಹಳ್ಳಿ ಅವರು ನಿಂತು ಸಹಕರಿಸಿದ್ದರು

ಪ್ರಕೃತಿ ಪೂರಕ – ರೈನಥಾನ್ ನಿಯಮಗಳು:

  • ರೈನಥಾನ್‌ನಲ್ಲಿ ಪ್ರಕೃತಿಗೆ ಕಂಟಕ ತರುವ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ.
  • ಭಾಗವಹಿಸುವ ಪ್ರತಿಯೊಬ್ಬರೂ ಮರುಬಳಕೆ ಮಾಡಬಹುದಾದ ತಟ್ಟೆ, ಲೋಟ ಮತ್ತು ನೀರಿನ ಬಾಟಲ್ ತರುವುದು ಕಡ್ಡಾಯ.
  • ಎಲ್ಲರಿಗೂ ನೀಡಲಾಗುವ ವಿಶೇಷ ಟೀಶರ್ಟ್ ಮತ್ತು ಬ್ಯಾಗ್ ಅನ್ನು ಮಾತ್ರ ಬಳಸಬೇಕು.
  • ಮಳೆಯಲ್ಲಿ ನೆನೆಯದಂತೆ ಉಪಯೋಗಿಸುವ ಕೊಡೆ, ರೈನ್ ಕೋಟ್, ಟೋಪಿ ಅಥವಾ ಸ್ವೆಟರ್ ಬಳಸುವಂತಿಲ್ಲ!
  • ಯಾವುದೇ ರೀತಿಯ ರಾಜಕೀಯ ಚರ್ಚೆಗಳು ಇಲ್ಲಿ ಸಂಪೂರ್ಣ ನಿಷಿದ್ಧ.

ಕೇವಲ ಸಾತ್ವಿಕವಾಗಿ ಪ್ರಕೃತಿಯನ್ನು ಆರಾಧಿಸುತ್ತಾ, ಮಳೆಯಲ್ಲಿ ನೆನೆಯುತ್ತಾ, ಆಟಗಳನ್ನು ಆಡುತ್ತಾ ಮುಂಗಾರಿನ ಒಂದು ದಿನವನ್ನು ಸಂಪೂರ್ಣವಾಗಿ ಅನುಭವಿಸುವುದೇ ‘ರೈನಥಾನ್’ನ ಜೀವಾಳ. ೧೮ನೇ ಆವೃತ್ತಿಯು ಇದೇ ಸಾತ್ವಿಕ ಸೌಂದರ್ಯದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದೆ..