– ಅಭಿ ತೀರ್ಥಹಳ್ಳಿ, Abhi Thirthahalli
ಸರಳ ವಿವಾಹ, ಸುಂದರ ಬದುಕು: “ಮಂತ್ರ ಮಾಂಗಲ್ಯ”
ಕೆಲವು ಕೃತಿಗಳು ನಮ್ಮನ್ನು ಕೇವಲ ಓದುಗರನ್ನಾಗಿಸಿ ಸುಮ್ಮನಾಗಿಸುವುದಿಲ್ಲ; ಬದಲಾಗಿ ನಮ್ಮ ಬದುಕಿನ ದೃಷ್ಟಿಕೋನವನ್ನೇ ಅತ್ಯಂತ ಆಪ್ತವಾಗಿ ವಿಸ್ತರಿಸುತ್ತವೆ. ರಾಷ್ಟ್ರಕವಿ ಕುವೆಂಪು ಅವರು ರೂಪಿಸಿರುವ “ಮಂತ್ರ ಮಾಂಗಲ್ಯ” ಕೇವಲ ಒಂದು ವಿವಾಹದ ಕೈಪಿಡಿಯಲ್ಲ, ಅದೊಂದು ಅತ್ಯಂತ ಸುಂದರವಾದ ಹಾಗೂ ಸರಳವಾದ ಜೀವನ ದರ್ಶನ. ಮನುಷ್ಯ ತನ್ನ ಬದುಕಿನ ಮಹತ್ತರ ಘಟ್ಟವಾದ ವಿವಾಹವನ್ನು ಆಡಂಬರಗಳಿಲ್ಲದೆ, ಸಮಾನತೆ ಮತ್ತು ಸಕಾರಾತ್ಮಕ ಚಿಂತನೆಗಳ ತಳಹದಿಯ ಮೇಲೆ ಹೇಗೆ ಕಟ್ಟಿಕೊಳ್ಳಬಹುದು ಎಂಬುದನ್ನು ಈ ಕೈಪಿಡಿ ಅತ್ಯಂತ ಪ್ರಬುದ್ಧವಾಗಿ ವಿವರಿಸುತ್ತದೆ.
ಮದುವೆ ಎಂಬುದು ಎರಡು ಮನಸ್ಸುಗಳ ಪವಿತ್ರ ಮಿಲನವೇ ಹೊರತು, ಅಂತಸ್ತುಗಳ ಪ್ರದರ್ಶನವಾಗಬಾರದು ಎಂಬುದು ಕುವೆಂಪು ಅವರ ಆಶಯ. ವರದಕ್ಷಿಣೆ ಹಾಗೂ ವಧುದಕ್ಷಿಣೆಯಂತಹ ಪದ್ಧತಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ, ಮದುವೆಯನ್ನು ಕೇವಲ ಪ್ರೀತಿ ಮತ್ತು ಆತ್ಮಗೌರವದ ಸಂಕೇತವಾಗಿ ನೋಡುವಂತೆ ಈ ಕೈಪಿಡಿ ನಮ್ಮನ್ನು ಪ್ರೇರೇಪಿಸುತ್ತದೆ. ದುಂದುವೆಚ್ಚಗಳಿಲ್ಲದೆ, ಕೇವಲ ನಿಕಟ ಬಂಧು-ಮಿತ್ರರ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಅತ್ಯಂತ ಪ್ರಶಾಂತವಾಗಿ ವಿವಾಹ ಜರುಗಬೇಕು ಎನ್ನುವ ವಿಚಾರಗಳು ಮನಸ್ಸಿಗೆ ಅತ್ಯಂತ ಹಿತವೆನಿಸುತ್ತವೆ. ಮನುಷ್ಯನ ಜೀವಿತಕಾಲದ ಪ್ರತಿ ಕ್ಷಣವೂ ಪವಿತ್ರ ಹಾಗೂ ಅತ್ಯಮೂಲ್ಯ; ಹಾಗಾಗಿ ಪ್ರತ್ಯೇಕವಾಗಿ ರಾಹುಕಾಲ, ಯಮಗಂಡಕಾಲ ಮುಂತಾದ ಮುಹೂರ್ತಗಳನ್ನು ಹುಡುಕುವ ಬದಲು, ಮನುಷ್ಯನ ಜೀವಿತಕಾಲವೇ ಒಂದು ಸುಮುಹೂರ್ತ ಎಂಬ ಸುಂದರ ಚಿಂತನೆಯನ್ನು ಇಲ್ಲಿ ಕಾಣಬಹುದು.

ಇನ್ನು ಮದುವೆಯ ವಿಧಿವಿಧಾನಗಳತ್ತ ಹೆಜ್ಜೆ ಹಾಕಿದಾಗ, ವೇದಿಕೆಯ ಮೇಲೆ ಪೌರಾಣಿಕ ಆದರ್ಶ ದಂಪತಿಗಳಾದ ಶ್ರೀರಾಮ-ಸೀತೆ ಹಾಗೂ ಆಧುನಿಕ ಆದರ್ಶ ದಂಪತಿಗಳಾದ ಶ್ರೀರಾಮಕೃಷ್ಣ-ಶಾರದಾದೇವಿಯವರ ಭಾವಚಿತ್ರಗಳನ್ನಿಟ್ಟು, (ಕುವೆಂಪುರವರ ಕಾಲದಲ್ಲಿ) ಋಗ್ವೇದ, ಉಪನಿಷತ್ತಿನ ಸಾಲುಗಳು ಹಾಗೂ ದೇವೀ ಸ್ತುತಿಗಳ ಮೂಲಕ ವಿವಾಹ ಜರುಗುವ ಪರಿ ನಿಜಕ್ಕೂ ಅದ್ಭುತ. ಇಲ್ಲಿ ಬಾಹ್ಯ ಆಚರಣೆಗಳಿಗಿಂತ ಮಂತ್ರಗಳ (ಕೈಪಿಡಿಯಲ್ಲಿರುವ ಮಂತ್ರಗಳು) ಆಳವಾದ ಅರ್ಥಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಓದು-ಬರಹ ಬಲ್ಲ ಹಾಗೂ ಮಂತ್ರಗಳನ್ನು ಅರ್ಥೈಸಬಲ್ಲ ಯಾವುದೇ ಹಿರಿಯರ ನೇತೃತ್ವದಲ್ಲಿ ಈ ವಿವಾಹ ನಡೆಯಬಹುದಾಗಿದ್ದು, ದಾಂಪತ್ಯದಲ್ಲಿ ಗಂಡ-ಹೆ0ಡತಿ ಇಬ್ಬರೂ ಸಮಾನರು, ಇಬ್ಬರಿಗೂ ಸಮಾನ ಹಕ್ಕು ಮತ್ತು ಗೌರವವಿದೆ ಎಂಬ ವಿಚಾರವು ಸಂಬ0ಧಗಳಿಗೆ ಹೊಸ ಅರ್ಥವನ್ನು ನೀಡುತ್ತದೆ. ದಾಂಪತ್ಯದ ಅಡಿಪಾಯ ಕೇವಲ ಆಚರಣೆಗಳಲ್ಲ, ಬದಲಾಗಿ ಪರಸ್ಪರ ಪ್ರೀತಿ ಹಾಗೂ ನಂಬಿಕೆ ಎಂಬುದನ್ನು ಕುವೆಂಪು ಅವರು ಇಲ್ಲಿ ಬಹಳ ಮಾರ್ಮಿಕವಾಗಿ ಮಂತ್ರ ಮಾಂಗಲ್ಯದ ಮೂಲಕ ತಿಳಿಸಿದ್ದಾರೆ. ಇದರ ಜೊತೆಗೆ ವಿವಾಹವನ್ನು ಕಡ್ಡಾಯವಾಗಿ ಕಾನೂನಿನಡಿ ನೋಂದಾಯಿಸಿಕೊಳ್ಳಬೇಕು ಎಂಬ ನಿಯಮವು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕುವೆಂಪು ಅವರ “ಮಂತ್ರ ಮಾಂಗಲ್ಯವು” ಯುವಜನತೆಗೆ ತಮ್ಮ ಮುಂದಿನ ಬದುಕನ್ನು ಸತ್ಯ, ಸಮಾನತೆ, ಪ್ರೀತಿ ಮತ್ತು ಸ್ವಾಭಿಮಾನದ ತಳಹದಿಯ ಮೇಲೆ ಕಟ್ಟಿಕೊಳ್ಳಲು ನೀಡಿದ ಒಂದು ಮಹತ್ತರವಾದ ಕೊಡುಗೆ. ಪ್ರತಿಯೊಬ್ಬರೂ ಓದಿ, ಅರ್ಥೈಸಿಕೊಂಡು, ದಾಂಪತ್ಯದ ನೈಜ ಮೌಲ್ಯಗಳನ್ನು ಅರಿಯಲು ನೆರವಾಗುವ ಅಪರೂಪದ ಕೈಪಿಡಿ ಇದು. ಇಂದಿನ ಯುವಪೀಳಿಗೆಯು ಕೇವಲ ಅಂತಸ್ತು-ಆಡAಬರಗಳನ್ನು ಪ್ರದರ್ಶಿಸುವ, ಆರ್ಥಿಕ ಹೊರೆಯಾಗುವ ಸಾಂಪ್ರದಾಯಿಕ ವಿವಾಹಗಳ ಬೆನ್ನುಬೀಳುವ ಬದಲು, ಇಂತಹ ಅರ್ಥಪೂರ್ಣ ಹಾಗೂ ವೈಚಾರಿಕ “ಮಂತ್ರ ಮಾಂಗಲ್ಯದ” ಮೂಲಕ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂಬುದೇ ನನ್ನ ಕಳಕಳಿಯ ಆಗ್ರಹವಾಗಿದೆ.

ರಾಷ್ಟ್ರಕವಿ ಕುವೆಂಪು ಅವರು ರೂಪಿಸಿರುವ “ಮಂತ್ರ ಮಾಂಗಲ್ಯ” ಕೇವಲ ಒಂದು ವಿವಾಹದ ಕೈಪಿಡಿಯಲ್ಲ, ಅದೊಂದು ಅತ್ಯಂತ ಸುಂದರ ಜೀವನ ದರ್ಶನ! ಮದುವೆ ಎಂಬುದು ಎರಡು ಮನಸ್ಸುಗಳ ಪವಿತ್ರ ಮಿಲನವೇ ಹೊರತು, ಅಂತಸ್ತುಗಳ ಪ್ರದರ್ಶನವಾಗಬಾರದು ಎಂಬುದೇ ಇದರ ಮೂಲ ಆಶಯ. ವರದಕ್ಷಿಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಆಡಂಬರ-ದು0ದುವೆಚ್ಚಗಳಿಲ್ಲದೆ, ಕೇವಲ ಆಪ್ತ ಹಿತೈಷಿಗಳ ಸಮ್ಮುಖದಲ್ಲಿ ವಿವಾಹ ನಡೆಯಬೇಕೆಂಬ ಕುವೆಂಪು ಅವರ ವಿಚಾರಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ. ಯಾವುದೇ ಮೂಢನಂಬಿಕೆಗಳಿಲ್ಲದೆ, ಮನುಷ್ಯನ ಇಡೀ ಜೀವಿತಕಾಲವೇ ಒಂದು “ಸುಮುಹೂರ್ತ” ಎಂದು ಸಾರುವ ಈ ಕೈಪಿಡಿ, ಸ್ತ್ರೀ-ಪುರುಷರಿಬ್ಬರಿಗೂ ದಾಂಪತ್ಯದಲ್ಲಿ ಸಮಾನ ಹಕ್ಕು ಮತ್ತು ಗೌರವವಿದೆ ಎಂದು ಘಂಟಾಘೋಷವಾಗಿ ಹೇಳುತ್ತದೆ. ಕೇವಲ ಅಂತಸ್ತು-ಆಡAಬರಗಳನ್ನು ಪ್ರದರ್ಶಿಸುವ ಸಾಂಪ್ರದಾಯಿಕ ವಿವಾಹಗಳ ಬೆನ್ನುಬೀಳುವ ಬದಲು, ಇಂದಿನ ಯುವಪೀಳಿಗೆ ಸತ್ಯ, ಸಮಾನತೆ, ಮತ್ತು ಪ್ರೀತಿಯ ತಳಹದಿಯ ಮೇಲಿರುವ ಇಂತಹ ಅರ್ಥಪೂರ್ಣ “ಮಂತ್ರ ಮಾಂಗಲ್ಯ” ಮೂಲಕ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಬೇಕು.

