Categories
Author Blogs Kannada Malnad information

ಡಾ. ಕೆ. ಶ್ರೀಪತಿ ಹಳಗುಂದ ಅವರ “ಗನಗದಿರಾ – ಮಲೆನಾಡಿನ ಪದಪ್ರಪಂಚ”

ಮಲೆನಾಡಿನ ವೈವಿಧ್ಯಮಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಆಡುಭಾಷೆಯ ಸೊಬಗನ್ನು ಸಮಾಜಿಕ ಜಾಲತಾಣದಲ್ಲಿ ದಾಖಲಿಸುವ ಉದ್ದೇಶದಿಂದ, ಖ್ಯಾತ ಲೇಖಕರು, ವಿಮರ್ಶಕರು ಹಾಗೂ ಅಂಕಣಕಾರರು ಆದ ಡಾ. ಕೆ. ಶ್ರೀಪತಿ ಹಳಗುಂದ ಅವರ “ಗನಗದಿರಾ – ಮಲೆನಾಡಿನ ಪದಪ್ರಪಂಚ” ಕೃತಿಯಲ್ಲಿ ೪೦೦ಕ್ಕೂ ಹೆಚ್ಚು ಅಪರೂಪದ ಪದಗಳನ್ನು ಸಂಗ್ರಹಿಸಿದ್ದಾರೆ. ಈ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಅವರ ಅನುಮತಿಯ ಮೇರೆಗೆ, ಆಯ್ದ ಪದಗಳ ಅರ್ಥ ಮತ್ತು ಆಡುಭಾಷೆಯ ಸೊಬಗಿನ ಚಿತ್ರಗಳ ಸರಣಿಗಳು, ನಮ್ಮ ಮುಂದಿನ ಪೋಸ್ಟ್ಗಳಲ್ಲಿ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ.

ಗನಗದಿರಾ?
ಇದೊಂದು ಸಂಭೋದನಾ ವಾಚಕ ಪದವಾಗಿದೆ. ಒಬ್ಬರು ಇನ್ನೊಬ್ಬರ ಕುಶಲವನ್ನು ವಿಚಾರಿಸುವಾಗ ಸಾಮಾನ್ಯವಾಗಿ ಈ ತೆರನಾದ ಪದವನ್ನು ಪರಸ್ಪರರು ಬಳಸಿಕೊಳ್ಳುತ್ತಾರೆ. ‘ಗನ’ ಸಂಸ್ಕೃತದ ‘ಘನ’ ಎಂಬ ಪದದಿಂದ ಬಂದಿರಬಹುದು. ಸಂಸ್ಕೃತದಲ್ಲಿ ಘನ ಎಂದರೆ ಶ್ರೇಷ್ಠ, ಉತ್ತಮ, ಚೆನ್ನಾಗಿ ಇರುವುದು ಎಂಬೆಲ್ಲ ಅರ್ಥ ಬರುತ್ತದೆ. ಹಾಗೆಯೇ ಇಲ್ಲಿ ಮಹಾಪ್ರಾಣವಾದ ‘ಘ’ ಬದಲಿಗೆ ಅಲ್ಪಪ್ರಾಣವಾದ ‘ಗ’ ಸೇರಿಕೊಂಡಿದೆ. ಗನಗದಿರಾ? ಎಂದರೆ ಚೆನ್ನಾಗಿದ್ದೀರಾ? ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ. “ಓ ಈಗ ಬಂದ್ರ. ಗನಗದಿರಾ?” ‘ಆದಿರಾ’ ಎಂದರೆ ಇದ್ದೀರಾ ಎಂದರ್ಥ. “ಓ ಹುಡ್ಲಿ ಅಕ್ಕಿ ಗನಮಾಡೆ” ಎಂದರೆ ಅಕ್ಕಿಯನ್ನು ಸರಿಮಾಡು ಎಂಬುದಾಗಿದೆ. ಅಂದರೆ ಅಕ್ಕಿಯನ್ನು ಸ್ವಚ್ಛ ಮಾಡುವುದು. “ಓ ತಮ್ಮ ಸಂತೆಗೆ ಹೋದ್ರೆ ಗನಗನಾ ತರಕಾರಿ ತಗುಬಾ..”. “ಗನಗನವೆಲ್ಲಾ ಅವೆ ಇಟ್ಕಂಡ್ರು”, “ಗನಾಗಿ ಉಣ್ಣು”, “ಗನಾಗೈತೆ”, “ಟಿವಿಲಿ ಗನಗನ ಹಾಡೇ ಬರಲ್ಲ”, ಹೀಗೆ ಇತ್ಯಾದಿ ಮಾತುಗಳನ್ನು ಉದಾಹರಿಸಬಹುದಾಗಿದೆ.

ತಮ್ಮಣ್ಣಿ
ನಮ್ಮ ಭಾಗದಲ್ಲಿ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮುಂತಾದ ಪ್ರದೇಶದಲ್ಲಿ ಹಿರಿಯರು ಹುಡುಗರಿಗೆ ಸಂಭೋದಿಸಿ ಕರೆಯುವ ಪದವಾಗಿದೆ. ತಮ್ಮ ಎಂಬ ಪದ ಸಹಜವಾಗಿ ಎಲ್ಲರಿಗೂ ತಿಳಿದಿದೆ. ಅದರೊಂದಿಗೆ ಅಣ್ಣ ಪದವೂ ಎಲ್ಲರಿಗೂ ಪರಿಚಿತವೇ ಅಥವಾ ಈ ಪದ ಎರಡು ಮೇಲೈಸುವಿಕೆಯಂತೆ ಕಾಣುತ್ತದೆ. ಅಣ್ಣಪ್ಪ ಎನ್ನುವುದರಲ್ಲಿ ಅಣ್ಣ+ಅಪ್ಪ ಇರುವಂತೆ ಅಪ್ಪಣ್ಣ ಎಂಬ ಪದದಲ್ಲಿ ಅಪ್ಪ+ಅಣ್ಣ ಇರುವಂತೆ ಇಲ್ಲಿ ತಮ್ಮ+ಅಣ್ಣಿ=ತಮ್ಮಣ್ಣಿಯಾಗಿದೆ ಅಥವಾ ಆಗಿರಲೂಬಹುದು. ತಮ್ಮ+ಅಣ್ಣ ಈ ಅಣ್ಣ ಎಂಬ ಪದವು ‘ಇ’ಕಾರಕ್ಕೆ ರೂಪಾಂತರಗೊಂಡು ಅಣ್ಣಿ ಆಗಿರುವ ಸಾಧ್ಯತೆಯಿದೆ. ಹದಿಹರೆಯಕ್ಕೆ ಬರುವ ಪೂರ್ವದಲ್ಲಿನ ವಯಸ್ಸಿನವರಿಗೆ ಪ್ರೀತಿಯಿಂದ ಆಪ್ತತೆಯಿಂದ ಸಂಬೋಧಿಸುವ ಈ ಸಂಬಂಧವಾಚಕ ಮಲೆನಾಡಿನ ಕೆಲವು ಪ್ರದೇಶದಲ್ಲಿ ಚಿರಪರಿಚಿತವಾಗಿದೆ. ಹೆಣ್ಣು ಮಕ್ಕಳಿಗೆ ತಂಗಿ, ತಂಗ್ಯವ್ವ ಎಂದು ಕರೆಯುತ್ತಾರೆ. ಆದರೆ ಹುಡುಗರಿಗೆ ತಮ್ಮಣ್ಣಿ ಎಂದೇ ಕರೆಯುತ್ತಾರೆ. ಕೆಲವು ತಮ್ಮಣ್ಣಿಗಳಿಗೆ ಮದುವೆಯಾಗಿ ಮಕ್ಕಳಾದರೂ ಅವರು – ಮನೆಯ ಹಿರಿಯರ ಪಾಲಿಗೆ ತಮ್ಮಣ್ಣಿಯೂ ಆಗಿರುತ್ತಾರೆ. ಪಾಪಣಿ, ಪುಟ್ಟ, ತಮ್ಮ, ಹುಡುಗ, ಕಂದ, ಬಾಲೆ, ಮಗ, ದೊಡ್ಡಹುಡುಗ, ಸಣ್ಣಹುಡುಗ, ದೊಡ್ಡತಮ್ಮಣ್ಣಿ. ಸಣ್ಣತಮ್ಮಣ್ಣಿ ಸಹಜವಾಗಿದೆ. ಕೆಲವು ಕಡೆ ಗುಂಡರೂ ಇದ್ದಾರೆ. ಒಟ್ಟಿನಲ್ಲಿ ಪ್ರೀತಿಯಿಂದ ಕರೆಸಿಕೊಳ್ಳುವ ತಮ್ಮಣ್ಣಿಗಳು ಮನೆಗೊಬ್ಬರಂತೂ ಇದ್ದಾರೆ. ತಮ್ಮನೂ ಆಗಿ, ಅಣ್ಣನೂ ಆಗಿ ದೊಡ್ಡವರ ಬಾಯಲ್ಲಿ ಕರೆಸಿಕೊಳ್ಳುವುದೇ ಒಂದು ಚೆಂದವಾಗಿದೆ.

Advertisement
Advertisement Advertisement

ಕಂಬ್ಳಿಕೊಪ್ಪೆ
ಕಂಬ್ಳಿ ಯಾರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿರುವ ಈ ಕಂಬ್ಳಿಯನ್ನು ಕೆಲವರು ಹೆಗಲ ಮೇಲೆ, ಕೆಲವರು ಹೊದಿಯಲು, ಕೆಲವರು ಹಾಸಲು, ಬಳಸುತ್ತಾರೆ. ಕೆಲವರಿಗೆ ಕಂಬ್ಬಿ ಪ್ರತಿಷ್ಠೆ ಆಗಿದೆ. ಇಲ್ಲಿ ಹೇಳಹೊರಟಿರುವುದು ಈ ಕಂಬ್ಳಿ ಬಗ್ಗೆ ಅಲ್ಲ, ಬದಲಿಗೆ ಕಂಬ್ಳಿಕೊಪ್ಪೆ ಬಗ್ಗೆ. ಮಲೆನಾಡಿನಲ್ಲಿ ಸುರಿಯುವ ಮಳೆ ಮಳೆಯಲ್ಲ ಬದಲಿಗೆ ನೀರೆಂಬ ನೀರು. ಈ ಮಳೆಗೆ ಯಾವ ಕಂಪನಿಯ ಛತ್ರಿ. ಕೊಡೆಯೂ ತಡೆಯುವುದಿಲ್ಲ. ಈ ಕಾರಣಕ್ಕೆ ಕಂಬಳಿಯ ಮೊರೆ ಹೋಗುತ್ತಾರೆ. ಈ ಕಂಬಳಿಯನ್ನು ಕೊಪ್ಪೆ ಮಾಡಿ ತಲೆಗೆ ಹಾಕಿಕೊಂಡು ಮಳೆಗಾಲದ ಗದ್ದೆಯಲ್ಲಿ ಕೆಲಸ ಆರಂಭಿಸಿದರೆ ಜಡಿ ಮಳೆಗೂ ರೈತರಿಗೂ ಸಂಬAಧವೇ ಇರುವುದಿಲ್ಲ. ಈ ಕಂಬಳಿಯನ್ನು ನೆಲದ ಮೇಲೆ ಹಾಸಿ ಎಡದಿಂದ ಬಲಕ್ಕು, ಬಲದಿಂದ ಎಡಕ್ಕೂ ಮಡಚಿ ಮೇಲ್ಬಾಗದಲ್ಲಿ ಕಪ್ಪೆಯ ರೂಪದಲ್ಲಿ ಮಡಚಿ ತಲೆಗೆ ಹಾಕಿಕೊಂಡಾಗ ಮೊಣಕಾಲಿನವರೆಗೆ ಜೋತು ಬಿದ್ದಿರುತ್ತದೆ. ಹೀಗೆ ಕಪ್ಪೆಯ ರೂಪ ಪಡೆದ ಕಂಬಳಿ ಕೊಪ್ಪೆ ಜಾರದಿರಲಿ ಎಂದು ದಬ್ಬಣವನ್ನು ಕಂಬಳಿಗೆ ಸೇರಿಸಿ ಸಿಕ್ಕಿಸುತ್ತಾರೆ. ಈ ಕಪ್ಪೆಯೇ ಕ್ರಮೇಣ ಕೊಪ್ಪೆಯಾಗಿದೆ. ಗಂಡಸರಿಗೆ ಕಂಬಳಿಯಾದರೆ, ಹೆಂಗಸರಿಗೆ ಗೊರಬು.

ಮಂಡಾಳೆ
ಇದು ತಲೆಯ ಮೇಲೆ ಇರಿಸಿಕೊಳ್ಳುವ ವಸ್ತು. ಮಂಡೆ ಎಂದರೆ ಆಂಗ್ಲರ ಸೋಮವಾರವಲ್ಲ. ಬದಲಿಗೆ ತಲೆ, ಈ ತಲೆಗೆ ತಲೆ, ಶಿರ, ಮಂಡೆ ಎಂದೆಲ್ಲಾ ಕರೆಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಈ ಪದ ಪ್ರಸಿದ್ದಿ ಪಡೆದಿದೆ. “ಎಂತ ಮಂಡೆಬಿಸಿ ಮಾರಾಯ ನಿಂದು” ಎಂದು ಹೇಳುವುದನ್ನು ನೋಡಿದ್ದೇವೆ. ಈ ಮಂಡೆಗೆ ಹಾಕಿಕೊಳ್ಳುವ ಒಂದು ತರಹದ ಟೋಪಿಯ ಮಂಡಾಳೆ. ಇದನ್ನು ತೋಟದಲ್ಲಿ ಸಿಗುವ ಅಡಕೆ ಮರದ ತಯಾರಾದ ಹಾಳೆಯಿಂದ ರಚಿಸಿರುತ್ತಾರೆ. ಮಂಡೆ+ಹಾಳೆ=ಮಂಡಾಳೆ ‘ಎ’ ಅಕ್ಷರ ಲೋಪವಾಗಿರುವುದರಿಂದ ಇದು ಲೋಪಸಂಧಿಯೇ ಸರಿ, ಅಡಿಕೆ ಮರದ ಹಾಳೆ ತೆಗೆದುಕೊಂಡು ಅದನ್ನು ಸ್ವಲ್ಪ ನೀರಿನಲ್ಲಿ ನೆನಸಿ ಮೃದುವಾಗಿಸಿಕೊಂಡು ಸ್ವಲ್ಪ ವೃತ್ತಾಕಾರಕ್ಕೆ ತರಿಸಿ ಎರಡು ಬದಿಯಲ್ಲಿ ಚೂಪಾಗಿರಿಸಿ ಅದಕ್ಕೆ ಹಗ್ಗದಿಂದ ಕಟ್ಟುತ್ತಾರೆ. ಸಾಮಾನ್ಯವಾಗಿ ಮದುಮಗನ ಬಾಸಿಂಗದಂತಿರುತ್ತದೆ. ಇದನ್ನು ತಲೆಯ ಮೇಲಿರಿಸಿಕೊಂಡು ಭಾರವಾದ ವಸ್ತುವನ್ನು ಇದರ ಮೇಲೆ ಇಟ್ಟುಕೊಂಡರೆ ನೇರವಾಗಿ ಮಂಡೆಗೆ ಭಾರಬೀಳುವುದಿಲ್ಲ. ಮಲೆನಾಡಿನಲಿ ಪುರುಷರು. ಸ್ತ್ರೀಯರು ಇಬ್ಬರೂ ಬಳಸುತ್ತಾರೆ. ವೈಜ್ಞಾನಿಕವಾಗಿ ಸಹ ಇದು ಆರೋಗ್ಯಕರವಾಗಿದೆ. ಅವರವರ ಮಂಡೆ ಮೇಲೆ ಹಿಡಿತದಿಂದ ಕುಳಿತುಕೊಳ್ಳುತ್ತದೆ. ಭತ್ತ, ಅಕ್ಕಿ, ಸೊಪ್ಪು, ಮಣ್ಣು ಹೀಗೆ ಭಾರವಾದ ಯಾವುದೇ ವಸ್ತುವಿನ ಮೂಟೆಯಾಗಲಿ ಹೊರಲು ಸುಲಭ. ಈ ವಸ್ತುವಿಗೆ ಗಂಡುಹೆಣ್ಣೆಂಬ ಭೇದವಿಲ್ಲ ಪರೋಪಕಾರಿಯಾದುದು. ಕುಂದಾಪುರದ ಕಡೆಯಲ್ಲಿ ಮಂಡಾಳಿ ಎನ್ನುತ್ತಾರೆ. ನಮ್ಮಲ್ಲಿ ‘ಎ’ ಕಾರದಿಂದ ಅಂತ್ಯವಾದರೆ ಅಲ್ಲಿ ‘ಇ’ ಕಾರದಿಂದ ಅಂತ್ಯವಾಗುತ್ತದೆ. ಮಲೆನಾಡಿನ ‘ಳ’ ಕರಾವಳಿಯಲ್ಲಿ ‘ಅ’ ಆಗಿದೆ. ಮಂಡೆ ಸರಿಯಿಲ್ಲದಿದ್ದರೂ ಮಂಡಾಳೆ ಸರಿಯಿದ್ದರೆ ಸಾಕಲ್ಲವೇ? ಮಂಡಾಳೆ ಈ ಪದವನ್ನು ವಿಗ್ರಹವಾಕ್ಯ ಮಾಡಿದರೆ ಮಂಡೆ+ಹಾಳೆ ಎಂದಾಗುತ್ತದೆ. ಮಂಡೆ ಎಂದರೆ ಇದು ನಮ್ಮ ಭಾಗದಲ್ಲಿ ಮತ್ತು ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಮಂಡ ಎಂದರೆ ತಲೆ. ಅಂಗ್ಲ ಭಾಷೆಯ ಹೆಡ್. ಹಾಳೆ ಎಂದರೆ ಅಡಕೆ ಮರದ ಸೋಗೆಯ ಒಂದು ಭಾಗವಾಗಿದೆ. ಇದು ಎರಡರಿಂದ ಎರಡುವರೆ ಅಡಿ ಉದ್ದವಿದ್ದು, ಮಿದುವಾಗಿರುತ್ತದೆ. ಆನಂತರ ಬಿಸಿಲಿಗೆ ಬೆಂದು ಗಟ್ಟಿಯಾಗುತ್ತದೆ. ಗಟ್ಟಿಯಾಗುವ ಮುನ್ನ ಇದರ ಎರಡೂ ಬದಿಯನ್ನು ಮಡಚಿ ಕಟ್ಟಿ ಹಗ್ಗದಿಂದ ಕಟ್ಟಿದಾಗ ಮಧ್ಯದ ಭಾಗ ತಲೆಗೆ ಹೊಂದಿಕೊಳ್ಳುವಂತೆ ವತ್ತಾಕಾರದಲ್ಲಿ ರೂಪ ಪಡೆದು ಅವರವರ ತಲೆಯಲ್ಲಿ ಕೂರುವಂತೆ ಸಿದ್ಧಮಾಡಿಕೊಂಡಾಗ ಮಂಡಾಳೆಯಾಗಿ ರೂಪುಗೊಳ್ಳುತ್ತದೆ. ಇದೇ ಮಂಡಾಳೆ. ಹಾಳೆಯಿಂದ ತಯಾರಾದ ಇದು ಮಂಡೆಯಲ್ಲಿ ಪ್ರತಿಷ್ಠಾಪನೆ ಆಗುವುದರಿಂದ ಮಂಡಾಳೆಯಾಗಿ ನಮ್ಮ ಭಾಗದಲ್ಲಿ ಪ್ರಸಿದ್ದಿಯಾಗಿದೆ. ಬಿಸಿಲು ಮಂಡೆ ಮೇಲೆ ಬೀಳದಂತೆ, ಭಾರವಾದ ವಸ್ತುಗಳನ್ನು ತಲೆಯ ಮೇಲೆ ಹೊರಲು ಬಳಸುತ್ತಾರೆ. ರೈತರ ಸಂಸ್ಕೃತಿಯ ಭಾಗವೂ ಹೌದು. ಅಭ್ಯಾಸವಿಲ್ಲದ ಕೆಲವರಿಗೆ ಇದನ್ನು ಧರಿಸಿದರೆ ತಲೆನೋವು ಬರುವುದುಂಟು. “ಓಯ್ ನನ್ನ ಮಂಡಾಳೆ ನೋಡ್ನನ ಇಲ್ಲೇ ಇಟ್ಟಿದ್ದೆ” ಇಂಥ ಮಾತುಗಳು ಸಹಜ.

Advertisement
Advertisement Advertisement