Categories
Uncategorized

ಕುಪ್ಪಳಿಯ ಹಾದಿಯಲ್ಲಿ ಸಿಕ್ಕ ಅಪರೂಪದ ನೆನಪುಗಳ “ಮೈಸೂರ್ ಪಾಕ್”!!

– ಅಭಿ ತೀರ್ಥಹಳ್ಳಿ Abbi Thirthahalli

ಕೆಲವೊಮ್ಮೆ ನಾವು ಅರಸಿ ಹೊರಟದ್ದಕ್ಕಿಂತ, ಅನಿರೀಕ್ಷಿತವಾಗಿ ಸಿಗುವ ಒಡನಾಟ ಮತ್ತು ಪುಸ್ತಕಗಳು ಮನಸ್ಸಿಗೆ ಹೆಚ್ಚು ಆಪ್ತವಾಗುತ್ತವೆ. ಕೆಲವು ತಿಂಗಳುಗಳ ಹಿಂದೆ ಪುಸ್ತಕದ ಹುಡುಕಾಟದಲ್ಲಿ ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರಕ್ಕೆಂದು ಹೋದವನು, ಅಲ್ಲೇ ಸಮೀಪದಲ್ಲಿದ್ದ ಕುವೆಂಪುರವರ ಅಜ್ಜಿ ಮನೆ, ಅವರು ಹುಟ್ಟಿದ ಸ್ಥಳವಾದ ಹಿರೇಕೊಡಿಗೆಗೆ ಭೇಟಿ ನೀಡಿದ್ದೆ. ನಾನು ಪದವಿ ಓದುತ್ತಿರುವಾಗ ಒಮ್ಮೆ ಅಲ್ಲಿಗೆ ಭೇಟಿ ಕೊಟ್ಟದ್ದು ನೆನಪಿದೆ. ತೇಜಸ್ವಿಯವರು ಮೀನು ಹಿಡಿಯಲೆಂದು ಕಾಡೊಳಗೆ ಹೊಕ್ಕು, ನೀರವ ಮೌನದಲ್ಲಿ ಗಾಳ ಹಿಡಿದು ಏಕಾಂಗಿಯಾಗಿ ಕೂರಲು ಬಯಸುತ್ತಿದ್ದ ಅದ್ಭುತ ವಾತಾವರಣವದು,‌ಈಗಲೂ ಹಾಗೆಯೇ ಇದೆ. ಒಂದು ಪುಟ್ಟ ಗ್ರಂಥಾಲಯ, ಫೋಟೋ ಗ್ಯಾಲರಿ, ಸಣ್ಣ ಗಾರ್ಡನ್ ಹಾಗೂ ಕುವೆಂಪುರವರು ಜನ್ಮ ತಾಳಿದ ಜಾಗದಲ್ಲೊಂದು ಪುಟ್ಟ ಕುಟೀರ, ಅದರಲ್ಲೊಂದು ಕುವೆಂಪುರವರ ದೊಡ್ಡ ಮೂರ್ತಿ; ಇವೆಲ್ಲವೂ ಆ ಜಾಗದ ಪಾವಿತ್ರ್ಯತೆಯನ್ನು ಹೆಚ್ಚಿಸಿವೆ. ನಾನು ಅಲ್ಲಿಗೆ ಹೋದಾಗ ಗ್ರಂಥಾಲಯದ ನಾಗರತ್ನ ಮೇಡಂ ಗಡೀಕಲ್ಲಿನಲ್ಲಿ ಮೀಟಿಂಗ್ ಸಲುವಾಗಿ ಹೋಗಿದ್ದರಿಂದ, ಅವರ ನಿರೀಕ್ಷೆಯಲ್ಲಿ ಅಲ್ಲೇ ಇದ್ದ ವೆಂಕಟೇಶ್ ರವರೊಂದಿಗೆ ಮಾಮೂಲಿನಂತೆ ಮಾತಿಗಿಳಿದೆ. ಎಂ.ಎ. ಹಿಸ್ಟರಿ ಓದಿಕೊಂಡಿರುವ, ಮೂಲತಃ ಶೃಂಗೇರಿ ಹತ್ತಿರದ ಕಿಗ್ಗದವರಾದ ಅವರು ಆ ಸಮಯದಲ್ಲಿ ಆ ಸ್ಥಳವನ್ನು ಬಲು ಸ್ವಚ್ಛಂದವಾಗಿ ಹಾಗೂ ಜಾಗರೂಕವಾಗಿ ನೋಡಿಕೊಳ್ಳುತ್ತಿದ್ದರು. ಹೀಗೆ ಮಾತನಾಡುತ್ತಾ ನಮ್ಮ ಮಾತು ಸಾಹಿತ್ಯದೆಡೆಗೆ ಹೊರಳಿದಾಗ ಮೊದಲಿಗೆ ಬಂದದ್ದೇ ನನ್ನ ನೆಚ್ಚಿನ ಮೂಡಿಗೆರೆಯ ಮಾಯಾವಿ ತೇಜಸ್ವಿಯ ವಿಷಯ. ವೆಂಕಟೇಶ್ ಕೂಡ ಹಲವು ಪುಸ್ತಕಗಳನ್ನು ಓದಿಕೊಂಡಿದ್ದವರು. ನಾಗರತ್ನ ಮೇಡಂ ಬರುವುದು ಇನ್ನೂ ತಡವಾಗುವುದೆಂದು ತಿಳಿದ ಬಳಿಕ, ನನಗೆ ಬೇಕಾದ ಪುಸ್ತಕ ಹಾಗೂ ಲೇಖಕರ ಹೆಸರು ಬರೆದು ವೆಂಕಟೇಶ್‌ರ ಕೈಗಿತ್ತು ಹೊರಡಲು ಸಿದ್ಧನಾದೆ. ಆಗ ಅವರು ತಮ್ಮ ಕೊಠಡಿಯಲ್ಲಿದ್ದ ಪುಸ್ತಕವೊಂದನ್ನು ತಂದು ನನ್ನ ಕೈಗಿತ್ತು, “ಓದಿ, ಇದನ್ನ ಚೆನ್ನಾಗಿದೆ. ಮತ್ತೆ ಇತ್ಲಗೇನಾದ್ರು ಕೆಲಸವಿದ್ದು ಬಂದಾಗ ಕೊಡಿ, ಪರವಾಗಿಲ್ಲ” ಎಂದು ಪ್ರೀತಿಯಿಂದ ನೀಡಿದರು. (ಫೋಟೋದಲ್ಲಿರುವ ಪುಸ್ತಕ ನನ್ನ ವೈಯಕ್ತಿಕ ಕಾಪಿ)

ಆ ಪುಸ್ತಕವನ್ನು ತಂದು ಹಲವು ದಿನಗಳ ಬಳಿಕ ಓದಿ ಮುಗಿಸಿದರೂ, ಅದರ ಗುಂಗು ಮತ್ತು ನೆನಪುಗಳು ಹಾಗೆಯೇ ಉಳಿದಿವೆ. ಮೂಡಿಗೆರೆಯ ಮಾಯಾವಿ ತೇಜಸ್ವಿಯ ಅಭಿಮಾನಿಗಳಿಗೆ ಅವರ ಬಗೆಗಿನ ಯಾವ ಪುಸ್ತಕ ಸಿಕ್ಕರೂ ಓದುವ ಖಯಾಲಿ. ಅಂತೆಯೇ ನಾನೂ ಕಡಿದಾಳ್ ಪ್ರಕಾಶ್ ಅವರು ಬರೆದ “ನಾ ಕಂಡಂತೆ ತೇಜಸ್ವಿ-ಶಾಮಣ್ಣ” ಕೃತಿಯನ್ನು, ತೇಜಸ್ವಿಯವರೊಂದಿಗಿನ ಆ ನೆನಪುಗಳನ್ನು ಓದಲು ಕುಳಿತೆ. ತೇಜಸ್ವಿಯವರಿಂದ ಓದಲು ಶುರು ಮಾಡಿ ಕಡಿದಾಳು ಶಾಮಣ್ಣನವರೊಂದಿಗೆ ಈ ಪುಸ್ತಕ ಮುಕ್ತಾಯವಾಗುತ್ತದೆ. ಈ ಕೃತಿಯಲ್ಲಿ ಬರುವ ಪ್ರತಿಯೊಂದು ಪ್ರಸಂಗವೂ ನೈಜತೆಯಿಂದ ಕೂಡಿದ್ದು, ನಮ್ಮನ್ನು ಆ ಕಾಲಘಟ್ಟಕ್ಕೇ ಕರೆದೊಯ್ಯುತ್ತದೆ. ತೇಜಸ್ವಿಯವರು ಮೈಸೂರಿನಲ್ಲಿದ್ದ ಶಾಮಣ್ಣನ ಮನೆಗೆ ಭೇಟಿ ಕೊಟ್ಟಾಗ ಅಲ್ಲಿ ಮಲ ತಿನ್ನಲು ಬರುತ್ತಿದ್ದ ಹಂದಿಗಳನ್ನು ಗೋಳೈಕೊಂಡಿದ್ದ ಆ ತಮಾಷೆಯ ಪ್ರಸಂಗ ಓದುತ್ತಿದ್ದರೆ ನಗು ತಡೆಯಲಾಗುವುದಿಲ್ಲ. ಹಾಗೆಯೇ, ಒಮ್ಮೆ ಕಡಿದಾಳ್ ಪ್ರಕಾಶ್ ಹಾಗೂ ಅವರ ಸ್ನೇಹಿತರು ಅಚಾನಕ್ ಆಗಿ ತೇಜಸ್ವಿಯ ಮನೆಗೆ ಸುಮ್ಮನೆ ಭೇಟಿ ನೀಡಿದಾಗ ತೇಜಸ್ವಿ ಅವರಿಂದ ಜಡಾಯಿಸಿಕೊಂಡದ್ದು, ಗುರುಗಳಾದ ಪ್ರಭುಶಂಕರ್ ಅವರ ಮಾತು ಕೇಳುತ್ತಾ ಹಾಗೆಯೇ ನಿದ್ದೆಗೆ ಜಾರಿದ ತೇಜಸ್ವಿ ಹಾಗೂ ಶಾಮಣ್ಣರ ಆ ಗೊರಕೆಯ ಜುಗಲ್ಬಂದಿ, ಇವೆಲ್ಲವೂ ತೇಜಸ್ವಿಯವರ ಬದುಕಿನ ಸಹಜ ಹಾಗೂ ನಿಷ್ಕಲ್ಮಶ ಮುಖವನ್ನು ಪರಿಚಯಿಸುತ್ತವೆ. ಕಡಿದಾಳ್ ಪ್ರಕಾಶ್ ಅವರ ಬರಹದಲ್ಲಿ ಎಲ್ಲಿಯೂ ಕೃತಕತೆ ಇಲ್ಲದೆ, ನಡೆದ ಘಟನೆಗಳನ್ನು ಅತ್ಯಂತ ಲವಲವಿಕೆಯಿಂದ ಕಟ್ಟಿಕೊಟ್ಟಿದ್ದಾರೆ.

Advertisement
Advertisement Advertisement

ಕೇವಲ ತೇಜಸ್ವಿಯವರಷ್ಟೇ ಅಲ್ಲ, ಇಲ್ಲಿ ಶಾಮಣ್ಣನವರ ವ್ಯಕ್ತಿತ್ವವೂ ಅಷ್ಟೇ ಆಪ್ತವಾಗಿ ಮೂಡಿಬಂದಿದೆ. ದಂತವಾದ್ಯದ ನಿಪುಣರಾಗಿದ್ದ ಕಡಿದಾಳ್ ಶಾಮಣ್ಣ, ಬೈಗುಳಗಳಲ್ಲಿ ನಿಸ್ಸೀಮರಾಗಿದ್ದ ಹಾಗೂ ಸದಾ “ಮೆಟ್ಟಿನಲ್ಲಿ ಹೊಡೀಬೇಕು” ಎನ್ನುತ್ತಿದ್ದ ಅಣ್ಣ ನರಸಿಂಹಣ್ಣನವರ ಪಾತ್ರ, ವಯಸ್ಸಾದ ತಾಯಿಗೆ ಮಗನ ಮೇಲಿದ್ದ ಅಪಾರ ಪ್ರೀತಿಯ ಎಳೆಗಳು ಮನಕಲಕುವಂತಿವೆ. ಜೊತೆಗೆ ಮೈಸೂರಿನ ಇಂದ್ರ ಭವನದ ಜಿಲೇಬಿ, ತೀರ್ಥಹಳ್ಳಿಯ ಬಿ.ಎನ್. ಕೃಷ್ಣಮೂರ್ತಿಯವರ ಜವಳಿ ಅಂಗಡಿಯ ಆ ಹಸಿರು ಶಾಲಿನ ಕಥೆ, ಹಾಗೂ ರೈತ ಸಂಘದ ಸ್ನೇಹಿತರಿಗೆ ಶಾಮಣ್ಣ ನೀಡುತ್ತಿದ್ದ ಬೀಡಾ ಪಾರ್ಟಿಯ ನೆನಪುಗಳು ಮಲೆನಾಡಿನ ಸೊಗಡನ್ನು ಹಾಗೂ ಅಂದಿನ ಕಾಲದ ಒಡನಾಟಗಳನ್ನು ನಮ್ಮ ಕಣ್ಣಮುಂದೆ ತಂದು ನಿಲ್ಲಿಸುತ್ತವೆ. ತೇಜಸ್ವಿ ಹಾಗೂ ಶಾಮಣ್ಣನವರ ಸ್ನೇಹ, ಅವರಿಬ್ಬರ ಒಡನಾಟ, ವ್ಯಕ್ತಿತ್ವ, ವಿಚಾರಗಳು ಮತ್ತು ನಿಲುವುಗಳನ್ನು ಲೇಖಕರು ತಮ್ಮ ನೆನಪುಗಳ ಮೂಲಕ ಸಾಧ್ಯವಾದಷ್ಟು ಅದ್ಭುತವಾಗಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಓದುವುದೇ ಒಂಥರಾ ಮಜಾ ಅನಿಸುವ ಈ ಕೃತಿಯ ಕುರಿತು ಕೊನೆಯದಾಗಿ ಹೇಳುವುದಾದರೆ, ತೇಜಸ್ವಿ ಹಾಗೂ ಶಾಮಣ್ಣರ ಅಭಿಮಾನಿಗಳಿಗಂತೂ ಈ ಪುಸ್ತಕ ಶಿವಮೊಗ್ಗದ ವೆಂಕಟೇಶ್ವರ ಭವನದ ಸ್ಪೆಷಲ್ ಮೈಸೂರ್ ಪಾಕ್ ಇದ್ದಂತೆ!

Advertisement
Advertisement Advertisement