– ಅಭಿ ತೀರ್ಥಹಳ್ಳಿ Abhi Thirthahalli
ಸ್ವಪ್ನ ಪುಸ್ತಕ ಮಳಿಗೆಯ ಶೆಲ್ಫಿನಲ್ಲಿ ಎರಡು ಬಾರಿ ಕಣ್ಣಿಗೆ ಬಿದ್ದರೂ ಯಾಕೋ ಇದನ್ನು ತೆಗೆದುಕೊಳ್ಳುವ ಮನಸ್ಸಾಗಿರಲಿಲ್ಲ. ಆದರೆ ಮೂರನೇ ಬಾರಿಗೆ ಹೋದಾಗ ಸುಮ್ಮನೆ ತೆಗೆದು ಬ್ಯಾಸ್ಕೆಟ್ ಒಳಗೆ ಹಾಕಿಕೊಂಡೆ. ಇದಕ್ಕೆ ಮುಖ್ಯ ಕಾರಣ ಆ ಪುಸ್ತಕದ ಶೀರ್ಷಿಕೆ ಮತ್ತು ನನ್ನದೊಂದು ತಮಾಷೆಯ ಪ್ರಮಾದ. ನಾನು ಸಾಮಾನ್ಯವಾಗಿ ಪುಸ್ತಕದ ಮುಖಪುಟ ಹಾಗೂ ಶೀರ್ಷಿಕೆ ನೋಡಿ ಓದಲು ಆಯ್ಕೆ ಮಾಡುವ ಖಯಾಲಿ ಉಳ್ಳವನು. ಅಂದು ಕಾರ್ತಿಕಾದಿತ್ಯ ಬೆಳಗೋಡು ಅವರ “ಕಾಡು ಹಾದಿಯ ಜಾಡು ಹತ್ತಿ” ಎನ್ನುವ ಶೀರ್ಷಿಕೆಯನ್ನು “ಕಾಡು ಹಂದಿಯ ಜಾಡು ಹಿಡಿದು” ಎಂದು ತಪ್ಪಾಗಿ ಓದಿದ್ದೆ! ಆ ತಪ್ಪು ಗ್ರಹಿಕೆ ಮತ್ತು ಮುಖಪುಟದ ಆಕರ್ಷಕ ಚಿತ್ರ ನನ್ನನ್ನು ಸೆಳೆದು ಈ ಪುಸ್ತಕ ನನ್ನ ಕೈಸೇರುವಂತೆ ಮಾಡಿತು. ಆದರೆ ಓದಲು ಕುಳಿತಾಗ, ಇದು ಕೇವಲ ಕಾಡು ಹಂದಿಯ ಜಾಡಲ್ಲ, ಬದಲಾಗಿ ನಮ್ಮೆಲ್ಲರ ಮನಸ್ಸಿನ ಮತ್ತು ಮಲೆನಾಡಿನ ದಟ್ಟ ಕಾಡುಹಾದಿಯ ಜಾಡು ಎಂಬುದು ಅರಿವಾಯಿತು.

ಒಟ್ಟು ಹದಿನಾರು ಕಥೆಗಳಿರುವ ಈ ಪುಸ್ತಕ ಬಹಳ ಚೆಂದವಾಗಿ ಮೂಡಿಬಂದಿದೆ. ಓದುತ್ತಾ ಹೋದಂತೆಲ್ಲಾ ಅಲ್ಲಿನ ಚಿರಪರಿಚಿತ ಊರುಗಳ ಹೆಸರುಗಳು, ನಮ್ಮದೇ ಮಲೆನಾಡಿನ ಸೊಗಡಿನ ಭಾಷೆ, ಮತ್ತು ಪ್ರತಿಯೊಂದು ಕಥೆಯಲ್ಲೂ ಹಾಸುಹೊಕ್ಕಾಗಿರುವ ಎಲ್ಲಾ ಧರ್ಮದ ಮುಗ್ಧ ಪಾತ್ರಗಳನ್ನು ನೋಡಿದಾಗ, ಕೆಲವು ವರ್ಷಗಳ ಹಿಂದೆ ನಾನೇ ಬರೆದಿದ್ದ ‘ದೈಯ’ ಕಥಾಸರಣಿಯ ನೆನಪುಗಳು ಮರುಕಳಿಸಿದವು. ಕಾರ್ತಿಕಾದಿತ್ಯರವರು ಇಲ್ಲಿ ಮಲೆನಾಡಿನ ಬದುಕನ್ನು ಅದರ ನೈಜ ರೂಪದಲ್ಲಿ ಅಕ್ಷರಗಳಲ್ಲಿ ಹೆಣೆದಿದ್ದಾರೆ. ನನಗಂತೂ ಈಶ್ವರಣ್ಣ ಮತ್ತು ಹನೀಫುವಿನ ಕಥೆ, ದಿನೇಶ ಮತ್ತು ಎಂಗ್ಟನ ಸ್ನೇಹದ ಕಥೆ, ಹಾಗೂ ಸಣ್ಣಪ್ಪಗೌಡರಿಗೆ ಹುಲಿ ಕಲಿಸಿದ ಬುದ್ಧಿಯ ಪ್ರಸಂಗಗಳು ತುಂಬಾ ಆಪ್ಯಾಯಮಾನವೆನಿಸಿದವು.

ಪುಸ್ತಕದ ಪುಟಗಳನ್ನು ಮಗುಚುತ್ತಾ, ಇನ್ನೇನು ಕಥೆಗಳು ಮುಗಿಯುತ್ತಿವೆ ಎನ್ನುವಷ್ಟರಲ್ಲಿ ಎದುರಾಗುವ ಕೊನೆಯ ಎರಡು ಕಥೆಗಳಾದ “ಒಂದು ಪ್ರೀತಿಯ ಕತೆ” ಮತ್ತು “ಕೆಂಪು ಬಣ್ಣದ ಸೀರೆ” ಓದುಗರ ಮನಸ್ಸನ್ನು ಅಕ್ಷರಶಃ ಭಾರವಾಗಿಸುತ್ತವೆ. ಇವು ಕೇವಲ ಕಾಲ್ಪನಿಕ ಕಥೆಗಳಲ್ಲ, ಬದಲಾಗಿ ಮಲೆನಾಡಿನ ಮಡಿಲಲ್ಲಿ ನಡೆದ ನೈಜ ಘಟನೆಗಳೇ ಎಂದು ಅರಿಯುವಷ್ಟರಲ್ಲಿ, ಅರಿವಿಲ್ಲದಂತೆಯೇ ಕಣ್ಣಿನಿಂದ ಜಾರಿದ ಹನಿಗಳು ಪುಸ್ತಕದ ಹಾಳೆಯನ್ನು ತೋಯಿಸಿದ್ದವು. ಮಲೆನಾಡಿನ ಹಸಿರು ಸೊಬಗಿನ ನಡುವೆ ಹುದುಗಿರುವ ಇಂತಹ ಕೆಲವು ಕರುಣಾಜನಕ ಸತ್ಯಗಳು ನಮ್ಮನ್ನು ಬಹಳ ಹೊತ್ತು ಕಾಡುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ ಶೀರ್ಷಿಕೆಯ ಗೊಂದಲದಿಂದ ಕೈಸೇರಿದ ಈ ಪುಸ್ತಕ, ನನ್ನ ಓದಿನ ಪಯಣದಲ್ಲಿ ಒಂದು ಅತ್ಯಮೂಲ್ಯ ಅನುಭವವನ್ನು ನೀಡಿದೆ. ಮಲೆನಾಡಿನ ಅಸಲಿ ಬದುಕನ್ನು, ಅಲ್ಲಿನ ನೈಜ ಪಾತ್ರಗಳನ್ನು ಅರಿಯುವ ಆಸಕ್ತಿಯಿರುವ ಪ್ರತಿಯೊಬ್ಬರೂ ಒಮ್ಮೆ ಕೊಂಡೋದಬೇಕಾದ ಅತ್ಯುತ್ತಮ ಕೃತಿಯಿದು.


